
ಕುಶಾಲನಗರ : ಕುಶಾಲನಗರ ಸಮೀಪದ ಹುದುಗೂರು ಬಳಿಯ ಹಾರಂಗಿ ಅಣೆಕಟ್ಟೆಯಿಂದ ಖಾರೀಫ್ ಬೆಳೆಗೆ ಹಾಗೂ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಸಂಬಂಧ ಅಚ್ಚುಕಟ್ಟು ವ್ಯಾಪ್ತಿಯ ಕಾಲುವೆಗಳಲ್ಲಿ ನೀರನ್ನು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ನೀರಾವರಿ ಸಲಹಾ ಸಮಿತಿಯ ಸಭೆಯ ತೀರ್ಮಾನ, ಮತ್ತು ರಾಜ್ಯ ಸರ್ಕಾರದ ಸೂಚನೆಯಂತೆ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ತನಕ ಇರುವ ಕೆರೆಕಟ್ಟೆಗಳು ತುಂಬಲು ಮತ್ತು ಅರೆ ಬೇಸಾಯಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕ್ರಮ ವಹಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಟ್ಟು ಪದ್ಧತಿಯಂತೆ ನಾಲೆಯ ಮೂಲಕ ನೀರನ್ನು ಹರಿಸಲಾಗಿದೆ ಎಂದು ಅಣೆಕಟ್ಟು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.ಅಣೆಕಟ್ಟೆಯ ಮುಖ್ಯ ನಾಲೆಯಿಂದ ಅಣೆಕಟ್ಟು ಅಚ್ಚುಕಟ್ಟು ವ್ಯಾಪ್ತಿಯ ಕಣಿವೆ ಎಡದಂಡೆ, ಮತ್ತು ಬಲ ದಂಡೆ ನಾಲೆಯ ಮೂಲಕ ಒಂದು ಸಾವಿರ ಕ್ಯೂಸೆಕ್ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ. ಇದರ ಮೂಲಕ ಸರ್ಕಾರದ ಸೂಚನೆಯಂತೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಕೆರೆಕಟ್ಟೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ. ಜಲಾಶಯಕ್ಕೆ ನೀರಿನ ಹರಿವಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಅಣೆಕಟ್ಟಿನಿಂದ ಕಾಲುವೆ ಮೂಲಕ ಹರಿಯುತ್ತಿದ್ದ ನೀರನ್ನು ಕಳೆದ ಹತ್ತು ದಿನಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು.