ಅಂತಿಮ ಸಂಸ್ಕಾರಕ್ಕೆ ಸ್ಮಶಾನದ ಜಾಗವೂ ಇಲ್ಲ: ಕೆ.ಮೊಣ್ಣಪ್ಪ
ಭೂ ರಹಿತ ಬಡ ಕುಟುಂಬಗಳಿಗೆ ನಿವೇಶನ ನೀಡಬೇಕೆಂದು ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ಎಐಬಿಎಸ್‌ಪಿಯ ರಾಜ್ಯಾಧ್ಯಕ್ಷ ಮಾರಟ₨ಸಂದ್ರ ಮುನಿಯಪ್ಪ, ರಾಷ್ಟ್ರೀಯ ಸಂಯೋಜಕ ಎಂ.ಗೋಪಿನಾಥ್ ಹಾಗೂ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ನಗರದ ಫೀ.ಮಾ.ಕೆ.ಎಂ.ಕಾರ್ಯಪ್ಪ ವೃತ್ತದ ಬಳಿಯಿಂದ ಜಿಲ್ಲಾಡಳಿತ ಭವನದ ವರೆಗೆ ನಿವೇಶನ ರಹಿತರು ಘೋಷಣೆಗಳ ಸಹಿತ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ಪಕ್ಷದ ಪ್ರಮುಖರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ಸ್ವಂತ ಸೂರಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ತೋಟಗಳ ಲೈನ್ ಮನೆಗಳಲ್ಲಿ ಬದುಕು ನಡೆಸುತ್ತಿರುವ ಬಡ ಶೋಷಿತ ಕಾರ್ಮಿಕ ವರ್ಗ ಸ್ವಂತ ನೆಲೆಗಾಗಿ ಹೋರಾಟಗಳನ್ನು ನಡೆಸುತ್ತಲೇ ಬಂದಿದೆ. ಸಾವನ್ನಪ್ಪಿದವರಿಗೆ ಕನಿಷ್ಟ ಗೌರವಯುತ ಅಂತಿಮ ಸಂಸ್ಕಾರಕ್ಕೆ ಸ್ಮಶಾನದ ಜಾಗವೂ ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಸತಿ ರಹಿತ ಬಡವರ್ಗದ ಮಂದಿ ಸೂರಿಗಾಗಿ ಸಂಬಂಧಪಟ್ಟ ಸಚಿವರಿಗೆ, ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊದ್ದೂರು, ಮೂರ್ನಾಡು ವಿಭಾಗದ ನಿವೇಶನ ರಹಿತರು ಸುದೀರ್ಘ ಹೋರಾಟವನ್ನು ನಡೆಸುತ್ತಿದ್ದಾರೆ. ಹೀಗಿದ್ದೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲವೆಂದು ಆರೋಪಿಸಿದರು.
ವಿರಾಜಪೇಟೆ ತಾಲೂಕಿನ ಅಮ್ಮತ್ತಿ, ಬೊಳ್ಳುಮಾಡು ಗ್ರಾಮ, ಮಾದಾಪುರದ ಗರಗಂದೂರು, ಪರಿಶಿಷ್ಟ, ಹಿಂದುಳಿದ ವರ್ಗದ ವಸತಿ ರಹಿತರಿಗೆ ನಿವೇಶನ ಮತ್ತು ಮನೆ ಒದಗಿಸಬೇಕು, ಕೊಡಗು ಜಿಲ್ಲಾದ್ಯಂತ ಬಗರ್ ಹುಕುಂ ಸಾಗುವಳಿಯಡಿ ಅರ್ಜಿ ಸಲ್ಲಿಸಿರುವವರಿಗೆ ಸಾಗುವಳಿ ಚೀಟಿ ನೀಡಬೇಕು, ನಿವೇಶನ ಹೋರಾಟಗಾರರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು, ಪ್ರತಿ ಗ್ರಾಮದಲ್ಲಿ ಸ್ಮಶಾನ ಭೂಮಿಯನ್ನು ಕಾಯ್ದಿರಿಸಬೇಕು, ಸರ್ಕಾರಿ ಭೂಮಿ ಲಭ್ಯವಿಲ್ಲದಿದ್ದರೆ ಖಾಸಗಿಯವರಿಂದ ಜಮೀನು ಖರೀದಿಸಿ ಸ್ಮಶಾನ ಭೂಮಿ ಒದಗಿಸಬೇಕು, ಪ್ರತಿ ಹೋಬಳಿ ಕೇಂದ್ರದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಬೇಕು ಎಂದು ಆಗ್ರಹಿಸಲಾಗಿದೆ.