ರಾಜ್‌ಕುಮಾರ್‌ ಮೇರು ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿ: ಅಬೀದ್‌ ಗದ್ಯಾಳ

KannadaprabhaNewsNetwork |  
Published : Apr 25, 2025, 11:46 PM IST
25ರಾಜ್‌ | Kannada Prabha

ಸಾರಾಂಶ

ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ವರನಟ ಡಾ.ರಾಜ್ ಕುಮಾರ್ 97 ನೇ ಜಯಂತಿ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ವರನಟ ಡಾ. ರಾಜ್ ಕುಮಾರ್ ಮೇರುವ್ಯಕ್ತಿತ್ವ, ಕನ್ನಡಾಭಿಮಾನ, ಭಾಷಾಪ್ರೇಮ ಪ್ರತಿಯೊಬ್ಬರಿಗೂ ಮಾದರಿ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದ್ದಾರೆ.

ನಗರದ ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವರನಟ ಡಾ.ರಾಜ್ ಕುಮಾರ್ 97 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಡಾ. ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.ಡಾ. ರಾಜ್ ಕುಮಾರ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರೂ ಸಹ ರಾಜಕೀಯದಲ್ಲಿ ಭಾಗವಹಿಸದೆ, ಚಿತ್ರರಂಗ ಒಂದೇ ಕ್ಷೇತ್ರ ಆಯ್ಕೆಮಾಡಿಕೊಂಡು, ಜೀವನವನ್ನೇ ಮುಡಿಪಾಗಿಟ್ಟು, ಪೂರ್ಣ ಪರಿಶ್ರಮ ವಹಿಸಿ, ಯಶಸ್ಸು ಸಾಧಿಸಿದ್ದಾರೆ. ಅದೇ ನಿಟ್ಟಿನಲ್ಲಿ ಯುವಪೀಳಿಗೆಯು ಸಹ ಜೀನವದಲ್ಲಿ ಗುರಿ ಇಟ್ಟುಕೊಂಡು ಸಾಧನೆ ಮಾಡುವುದರೊಂದಿಗೆ ಕುಟುಂಬಕ್ಕೆ, ಸಮಾಜಕ್ಕೆ, ಸುತ್ತಮುತ್ತಲಿನ ಪರಿಸರಕ್ಕೆ ಕೊಡುಗೆ ನೀಡುವಂತಾಗಬೇಕು ಎಂದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಬಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ರಾಜ್ ಕುಮಾರ್ ಅವರು, ಕನ್ನಡ ಚಿತ್ರರಂಗದಲ್ಲಿ ಸುಮಾರು 5 ದಶಕಗಳ ಕಾಲ ನಟನೆಯನ್ನು ಮಾಡಿದ್ದು, 220 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡ ಸಂಸ್ಕೃತಿ ಎತ್ತಿ ಹಿಡಿದವರಲ್ಲಿ ಇವರ ಕೊಡುಗೆ ಅಪಾರ ಎಂದರು.

ಉಡುಪಿಯ ಸರ್ಕಾರಿ ಬಾಲಕಿಯರ ಪಪೂ ಕಾಲೇಜಿನ ಉಪನ್ಯಾಸಕಿ ಭವ್ಯಾ ನಾಗರಾಜ್ ಉಪನ್ಯಾಸ ನೀಡಿ, ಆಡುಮುಟ್ಟದ ಸೊಪ್ಪಿಲ್ಲ, ಡಾ. ರಾಜ್ ಕುಮಾರ್ ನಿರ್ವಹಿಸದ ಪಾತ್ರಗಳಿಲ್ಲ. ಕನ್ನಡಚಿತ್ರರಂಗವನ್ನು ಉತ್ತುಂಗ ಶಿಖರಕ್ಕೆ ಏರಿಸಿದ ಖ್ಯಾತಿ ಮೇರುನಟ ಡಾ. ರಾಜ್ ಕುಮಾರ್ ಅವರಿಗೆ ಸಲ್ಲುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಶ್ರೀಧರ ಪ್ರಸಾದ್ ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಭಾಗ್ಯಲಕ್ಷ್ಮೀ ಉಪ್ಪೂರು ಹಾಗೂ ರೋಹಿತ್ ಮಲ್ಪೆ ಇವರಿಂದ ಡಾ. ರಾಜ್ ಕುಮಾರ್ ಗೀತ ಗಾಯನ ನಡೆಯಿತು.

ಕಾಲೇಜಿನ ವಿದ್ಯಾರ್ಥಿನಿಗಳಾದ ದಿಯಾ, ದಿಶಾ ಹಾಗೂ ಶ್ರೀಪದ ನಾಡಗೀತೆ ಹಾಡಿದರು, ಕಾಲೇಜಿನ ಪ್ರೊ. ಡಾ. ರಾಜೇಂದ್ರ ಕೆ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಮತ್ತು ಕಲಾನಿಕಾಯ ಡೀನ್ ಪ್ರೊ. ನಿಕೇತನ ವಂದಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...