ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದಲ್ಲಿನ ಕುರಿ ಮಾಂಸದ ಒಂದು ಮಳಿಗೆ ಟೆಂಡರ್ ನಲ್ಲಿ ಪಡೆದು ಪಕ್ಕದ ಮಳಿಗೆಯಲ್ಲೂ ವ್ಯಾಪಾರ ನಡೆಸುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂತು.
ಸಭೆಯಲ್ಲಿ ಸದಸ್ಯ ಮನ್ಸೂರ್ ವಿಷಯ ಪ್ರಸ್ತಾಪಿಸಿ, ಒಂದು ಮಳಿಗೆ ಮಾತ್ರ ಟೆಂಡರ್ ಪಡೆಯಲಾಗಿದೆ. ಇನ್ನೊಂದು ಮಳಿಗೆಯನ್ನು ಕೂಡ ಬಳಕೆ ಮಾಡಲಾಗುತ್ತಿದ್ದು, ನಗರಸಭೆಗೆ ಆದಾಯ ನೀಡದೆ ವಂಚನೆ ಮಾಡಲಾಗುತ್ತಿದೆ. ಈ ಹಣವನ್ನು ಪಡೆದುಕೊಳ್ಳುತ್ತಿರುವವರು ಯಾರು ಎಂದು ಪ್ರಶ್ನಿಸಿದರು.ಇದಕ್ಕೆ ಇತರೆ ನಗರಸಭಾ ಸದಸ್ಯರು ಕೂಡಾ ಪಕ್ಷಾತೀತವಾಗಿ ಧ್ವನಿಗೂಡಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಸಿಬ್ಬಂದಿ ಬಶೀರ್, ನಗರಸಭೆಯಿಂದ ಒಂದು ಕುರಿ ಮಾಂಸ ಮಳಿಗೆಗೆ ಮಾತ್ರ ಟೆಂಡರ್ ನೀಡಲಾಗಿದೆ. ಇನ್ನೊಂದು ಮಳಿಗೆಗೆ ಬಾಗಿಲು ಇಲ್ಲದ ಕಾರಣ ಆ ಮಳಿಗೆಯನ್ನು ಮೊದಲ ಅಂಗಡಿಯನ್ನು ಟೆಂಡರ್ ಕರೆದವರು ಬಳಸುತ್ತಿದ್ದಾರೆಂದು ಉತ್ತರಿಸಿದರು.
ಈ ವೇಳೆ ನಾಮ ನಿರ್ದೇಶನ ಸದಸ್ಯ ಯಾಕೂಬ್ ಅವರು ಮಾರುಕಟ್ಟೆ ವೀಡಿಯೋ ದೃಶ್ಯ ಪ್ರದರ್ಶಿಸಿ ಮತ್ತೊಂದು ಮಳಿಗೆಯಲ್ಲೂ ವ್ಯಾಪಾರ ನಡೆಸುತ್ತಿರುವುದನ್ನು ಸಭೆಯ ಮುಂದಿಟ್ಟರು. ಈ ವಂಚನೆ ಹಲವು ವರ್ಷಗಳಿಂದ ನಡೆಯುತ್ತಿದೆ ಎಂದು ಗಮನ ಸೆಳೆದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಉಮೇಶ್ ಸುಬ್ರಮಣಿ ಮಳಿಗೆಯನ್ನು ಬಂದ್ ಮಾಡಿದರೆ ಸಾಲದು ಎರಡು ವರ್ಷದಿಂದ ಈ ಅಕ್ರಮ ನಡೆಯುತ್ತಿದೆ. ಈ ಬಗ್ಗೆ ತನಿಖೆ ನಡೆದು ಸಂಬಂಧಿಸಿದವರ ವಿರುದ್ಧ ಕ್ರಮ ಆಗಬೇಕೆಂದು ಆಗ್ರಹಿಸಿದರು.
ಸದಸ್ಯರಾದ ಅರುಣ್ ಶೆಟ್ಟಿ, ಕೆ.ಎಸ್. ರಮೇಶ್, ಸತೀಶ್, ಮನ್ಸೂರ್, ಯಾಕೂಬ್ ಸೇರಿದಂತೆ ಹಲವರು ಬಶೀರ್ ಅವರನ್ನು ಅಮಾನತ್ತುಗೊಳಿಸಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.