ನಮ್ಮ ಸ್ಮಶಾನ ಭೂಮಿ ನಮಗೆ ಸಲ್ಲಬೇಕು

KannadaprabhaNewsNetwork |  
Published : Jun 18, 2025, 11:49 PM IST
 ಕಾಗವಾಡ | Kannada Prabha

ಸಾರಾಂಶ

ಕಳೆದ ಅನೇಕ ದಿನಗಳಿಂದ ವಿವಾದಕ್ಕೆ ಕಾರಣವಾಗಿರುವ ಶಹಾಪೂರ ಸ್ಮಶಾನ ಭೂಮಿ ವಿವಾದ ತಾರಕ್ಕೇರಿದ್ದು, ನಮ್ಮ ಗ್ರಾಮದ ಸ್ಮಶಾನ ಭೂಮಿ ನಮಗೆ ಬೇಕು ಎಂದು ಶಹಾಪೂರ ಗ್ರಾಮಸ್ಥರು ಜುಗೂಳ ಗ್ರಾಮ ಪಂಚಾಯತಿ ಎದುರು ಸೋಮವಾ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಕಳೆದ ಅನೇಕ ದಿನಗಳಿಂದ ವಿವಾದಕ್ಕೆ ಕಾರಣವಾಗಿರುವ ಶಹಾಪೂರ ಸ್ಮಶಾನ ಭೂಮಿ ವಿವಾದ ತಾರಕ್ಕೇರಿದ್ದು, ನಮ್ಮ ಗ್ರಾಮದ ಸ್ಮಶಾನ ಭೂಮಿ ನಮಗೆ ಬೇಕು ಎಂದು ಶಹಾಪೂರ ಗ್ರಾಮಸ್ಥರು ಜುಗೂಳ ಗ್ರಾಮ ಪಂಚಾಯತಿ ಎದುರು ಸೋಮವಾ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಜುಗೂಳ ಗ್ರಾಮದ ಪಂಚಾಯತಿ ವ್ಯಾಪ್ತಿಯ ಶಹಾಪೂರ ಗ್ರಾಮಸ್ಥರು ನಮ್ಮ ಸ್ಮಶಾನ ಭೂಮಿ ನಮ್ಮ ಗ್ರಾಮಕ್ಕೆ ಸೇರಬೇಕು ಎಂದು ಆಗ್ರಹಿಸಿದರು. ಶಹಾಪೂರದಿಂದ ಜುಗಳ ಗ್ರಾಮ ಪಂಚಾಯತಿಯವರೆಗೆ ಅಧಿಕಾರಿಗಳ ವಿರುದ್ದ ಧಿಕ್ಕಾರಗಳನ್ನು ಕೂಗುತ್ತ ಪ್ರತಿಭಟನೆ ಮೂಲಕ ಗ್ರಾಮ ಪಂಚಾಯತಿ ಎದುರಿಗೆ ಧರಣಿ ಕುಳಿತರು. ಈ ವೇಳೆ ಗ್ರಾಪಂ ಸದಸ್ಯ ವಿಜಯ ನಾಯಿಕ ಮಾತನಾಡಿ, 200 ವರ್ಷಗಳ ಹಿಂದೆ ಸಂಕೇಶ್ವರದ ಜಗದ್ದುರುಗಳು ನಮಗೆ ಈ ಜಮೀನನ್ನು ದಾನ ನೀಡಿದ್ದು, ಲಿಂಗಾಯತ ಸ್ಮಶಾನ ಭೂಮಿಯಾಗಿದೆ. ಅದು ಕೇವಲ ಶಹಾಪೂರ ಗ್ರಾಮಸ್ಥರಿಗೆ ಸೇರಿದೆ. ಅದರಲ್ಲಿ ಜುಗೂಳ ಗ್ರಾಮಸ್ಥರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಅಷ್ಟಾಗಿಯೂ ಜುಗೂಳ ಗ್ರಾಮದ ಜನರಿಗೆ ಇಲ್ಲಿಯವರೆಗೆ ಸಹಕಾರ ನೀಡಿ, ಶವಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದೇವು. ಆದರೆ, ಈಗ ಏಕಾಏಕಿಯಾಗಿ ರಾಜಕೀಯ ಒತ್ತಡಕ್ಕೆ ಮಣಿದು ನಮಗೆ ಸೇರಿದ ಸ್ಮಶಾನ ಭೂಮಿಯನ್ನು ಜುಗೂಳ ಗ್ರಾಮಸ್ಥರಿಗೆ ನೀಡುವ ಹುನ್ನಾರ ಮಾಡಿ, ನಾವು ಹಾಕಿರುವ ತಂತಿ ಬೇಲಿಯನ್ನು ಪೊಲೀಸ್‌ರ ರಕ್ಷಣೆಯಲ್ಲಿ ತೆರವುಗೊಳಿಸಿದ್ದಾರೆ. ಅದನ್ನು ಪ್ರಶ್ನಿಸಲು ಹೋದರೆ ನಮಗೆ ಬೆದರಿಕೆ ನೀಡುತ್ತಿದ್ದಾರೆ. ಆದ್ದರಿಂದ ನಮ್ಮ ಗ್ರಾಮಕ್ಕೆ ಸೇರಿದ ಸ್ಮಶಾನ ಭೂಮಿ ನಮಗೆ ಸೇರಬೇಕು. ಅದು ಸರ್ಕಾರಿ ಜಾಗ ಅಲ್ಲ ಇದನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.

ನಮ್ಮ ಸಮಸ್ಯೆಗೆ ಕೂಡಲೇ ಸ್ಪಂದಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಕಾಗವಾಡ ತಹಸೀಲ್ದಾರ್‌ ಕಚೇರಿ ಎದುರು ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.ಸ್ಥಳಕ್ಕೆ ತಾಪಂ ಇಒ ವೀರಣ್ಣ ವಾಲಿ, ಉಪತಹಸೀಲ್ದಾರ್‌ ರಶ್ಮಿ ಜಕಾತೆ, ಉಪತಹಸೀಲ್ದಾರ್‌ ಅಣ್ಣಾಸಾಬ ಕೋರೆ, ಪಿಡಿಒ ಶೈಲಶ್ರೀ ಬಜಂತ್ರಿ ಆಗಮಿಸಿ ಪ್ರತಿಭಟನಾಕಾರ ಮನವೊಲಿಸಿ, ತಮ್ಮ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದರು.ಪ್ರತಿಭಟನೆಯಲ್ಲಿ ಮುಖಂಡರಾದ ದೀಪಕ ಪಾಟೀಲ, ಮಾದಗೌಡ ಪಾಟೀಲ, ಸಂತೋಶ ಪಾಟೀಲ, ಬಬನ ಕಮತೆ, ಪ್ರಮೋದ ಪಾಟೀಲ, ಬಾಬು ಕಾಂಬಳೆ, ತುಕಾರಾಮ ಕಾಂಬಳೆ, ಕಲ್ಲಪ್ಪ ದೊಡಮನಿ, ತಾತ್ಯಾಸಾಬ್‌ ಜಾಧವ, ರಾಮಚಂದ್ರ ಸನದಿ, ಶ್ರೀಪಾಲ ಸನದಿ, ಸುಶೀಲಾ ಕಾಂಬಳೆ, ಗುಣವಂತಿ ಕಾಂಬಳೆ, ವಿಜಯಾ ಕಾಂಬಳೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಪಿಎಸೈ ಗಂಗಾ ಬಿರಾದರ ಸೂಕ್ತ ಬಂದೋಬಸ್ತ ಕೈಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ