ಮಡಿಕೇರಿ: ಮಾಜಿ ಸೈನಿಕರಿಗೆ ರೋಟರಿ ವುಡ್ಸ್ ಸನ್ಮಾನ

KannadaprabhaNewsNetwork | Published : Jul 27, 2024 12:46 AM

ಸಾರಾಂಶ

ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಾಲ್ವರು ಯೋಧರನ್ನು ಸನ್ಮಾನಿಸುವ ಮೂಲಕ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಶುಕ್ರವಾರ ನಗರ ರೋಟರಿ ಸಭಾಂಗಣದಲ್ಲಿ ಕಾರ್ಗಿಲ್‌ ವಿಜಯೋತ್ಸವ ಆಚರಿಸಲಾಯಿತು. ಸಮಾರಂಭದಲ್ಲಿ ಮಾಜಿ ಸೇನಾಧಿಕಾರಿಗಳಾದ ಹಾನರರಿ ಕ್ಯಾ.ಜಿ.ಎಸ್‌. ರಾಜಾರಾಮ್, ಎನ್. ಚಂದ್ರನ್, ಪ್ರಮೋದ್ ಕುಮಾರ್ ಸಿ., ಬಾಬು ಪ್ರಸಾದ್ ರೈ ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಾಲ್ವರು ಯೋಧರನ್ನು ಸನ್ಮಾನಿಸುವ ಮೂಲಕ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಶುಕ್ರವಾರ ನಗರ ರೋಟರಿ ಸಭಾಂಗಣದಲ್ಲಿ ಕಾರ್ಗಿಲ್‌ ವಿಜಯೋತ್ಸವ ಆಚರಿಸಲಾಯಿತು.

ಸಮಾರಂಭದಲ್ಲಿ ಮಾಜಿ ಸೇನಾಧಿಕಾರಿಗಳಾದ ಹಾನರರಿ ಕ್ಯಾ.ಜಿ.ಎಸ್‌. ರಾಜಾರಾಮ್, ಎನ್. ಚಂದ್ರನ್, ಪ್ರಮೋದ್ ಕುಮಾರ್ ಸಿ., ಬಾಬು ಪ್ರಸಾದ್ ರೈ ಅವರನ್ನು ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು, ಕಾರ್ಯದರ್ಶಿ ಕಿರಣ್ ಕುಂದರ್, ವಲಯ ಸೇನಾನಿ ಅನಿತಾ ಪೂವಯ್ಯ, ಅರಣ್ಯಾಧಿಕಾರಿ ಮಯೂರ್, ರೋಟರಿ ಪ್ರಮುಖರಾದ ಬಿ.ಜಿ., ಅನಂತಶಯನ, ಅನಿಲ್ ಎಚ್‌.ಟಿ., ಎಸ್.ಎಸ್‌. ಸಂಪತ್ ಕುಮಾರ್ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ,ಎಸ್ ರಾಜಾರಾಮ್, ಕಾರ್ಗಿಲ್ ಪ್ರದೇಶದಲ್ಲಿ ದೇಶರಕ್ಷಣೆಗಾಗಿ ಕರ್ತವ್ಯ ಸಲ್ಲಿಸುವುದು ಜೀವನದ ಮಹೋನ್ನತ ಅನುಭವವಾಗಿದೆ. ಕಾರ್ಗಿಲ್‌ ಸಮರದ ಬಳಿಯ ದೇಶದ ರಕ್ಷಣಾ ಇಲಾಖೆಯು ಕಾರ್ಗಿಲ್ ಗೆ ಅಗತ್ಯವಾಗಿದ್ದ ಅತ್ಯಾಧುನಿಕ ರಕ್ಷಣಾ ಉಪಕರಣ 445 ಕಿ.ಮೀ. ವಿದ್ಯುತ್ ಬೇಲಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿತ್ತು. ಪ್ರವಾಸಿಗರು ಜೀವನದಲ್ಲಿ ಒಮ್ಮೆಯಾದರೂ ಕಾರ್ಗಿಲ್‌ ಯುದ್ಧ ಪ್ರದೇಶಕ್ಕೆ ತೆರಳಿ ಅಲ್ಲಿನ ಪ್ರಾಕೃತಿಕ ಸೌಂದಯ೯ದ ಜತೆಗೇ ಸೈನಿಕರ ಕಠಿಣ ಜೀವನ ಶೈಲಿ, ಪರಿಶ್ರಮ, ತ್ಯಾಗವನ್ನು ಕಾಣುವುದು ಸೂಕ್ತ , ನಾವು ಜೀವಿಸುವ ದೇಶದ ಗಡಿಯಲ್ಲಿ ಏನೇನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.

ಸನ್ಮಾನಿತ ಎನ್‌.ಚಂದ್ರನ್‌ ಮಾತನಾಡಿ, ಕಾರ್ಗಿಲ್‌ ವಿಜಯ ದಿವಸ್ ದಿನ ಮಾತ್ರ ಸೈನಿಕರನ್ನು ಸ್ಮರಿಸಿಕೊಳ್ಳುವಂತಾಗಬಾರದು, ಹಗಲಿರುಳು ಪರಿಶ್ರಮದಿಂದ ಗಡಿಗಳಲ್ಲಿ, ದೇಶದ ಬೇರೆ ಬೇರೆ ಕಡೆ ದೇಶಸೇವೆಯ ಕರ್ತವ್ಯ ಸಲ್ಲಿಸುತ್ತಿರುವ ಸೈನಿಕರನ್ನು ಸ್ಮರಿಸಿಕೊಂಡು ಯೋಧರನ್ನು ಗೌರವಿಸುವ ಕಾರ್ಯ ಸಮಾಜ ಬಾಂಧವರಿಂದ ಆಗಬೇಕು ಎಂದು ಮನವಿ ಮಾಡಿದರು,

ಸನ್ಮಾನಿತ ಸಿ.ಪ್ರಮೋದ್ ಕುಮಾರ್‌ ಮಾತನಾಡಿ, ಕಾರ್ಗಿಲ್‌ ಸಮರದ ಸಂದರ್ಭ ಮೊದಲ ಹಂತವಾಗಿ ಕಾರ್ಗಿಲ್ ಶಿಖರವೇರಿದ 17 ಸೈನಿಕರ ಪೈಕಿ ಕೇವಲ 7 ಸೈನಿಕರು ಮಾತ್ರ ಶಿಖರದ ತುತ್ತ ತುದಿ ತಲುಪಲು ಸಾಧ್ಯವಾಯಿತು. ಯೋಗೀಂದ್ರ ಸಿಂಗ್ ಯಾದವ್ ಎಂಬವರ ದೇಹಕ್ಕೆ 9 ಬುಲೆಟ್‌ ನುಗ್ಗಿದರೂ ಶೌರ್ಯದಿಂದ ಕಾದಾಡಿ, ಶತ್ರು ಸೈನಿಕರ ಸದೆ ಬಡಿಯುವ ಕಾರ್ಯಾಚರಣೆಯ ಮುಂದಾಳತ್ವ ವಹಿಸಿ ಜೀವಂತವಾಗಿ ಇಂದಿಗೂ ಇದ್ದಾರೆ ಎಂದು ಸ್ಮರಿಸಿದರು.

ಸನ್ಮಾನಿತ ಮಾಜಿ ಸೇನಾನಿ ಬಾಬು ಪ್ರಸಾದ್ ರೈ ಮಾತನಾಡಿ, ಸೈನ್ಯದಲ್ಲಿ ಸಂಕಷ್ಟ ಎದುರಾಗುವುದೇ ಶತ್ರುಗಳು ಆಕ್ರಮಣ ಮಾಡುವ ರಾತ್ರಿ ವೇಳೆಯಾಗಿದ್ದು ಈ ಸಂದರ್ಭ ಪ್ರತೀಯೋರ್ವ ಯೋಧನೂ ಜಾಗೃತನಾಗಿ ದೇಶ ಕಾಯುತ್ತಿರುತ್ತಾನೆ. ಸೈನಿಕನಾಗಿ ದೇಶಕ್ಕಾಗಿ ಕತ೯ವ್ಯ ಸಲ್ಲಿಸುವುದು ಜೀವನದಲ್ಲಿ ದೊರಕುವ ಪುಣ್ಯದ ಅವಕಾಶ ಎಂದರು.

ವಲಯ ಸೇನಾನಿ ಅನಿತಾ ಪೂವಯ್ಯ ಮಾತನಾಡಿ, ನಮ್ಮ ದೇಶದ ತಿರಂಗ ಕೇವಲ ಗಾಳಿಯಿಂದ ಹಾರಾಡುತ್ತಿಲ್ಲ, ಅದರ ಹಾರಾಟದ ಹಿನ್ನಲೆಯಲ್ಲಿ ದೇಶಕ್ಕಾಗಿ ವೀರ ಮರಣವನ್ನಪ್ಪಿದ ಸೈನಿಕರ ಉಸಿರಿನಿಂದ ಎಂದರು.

ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲು ಮಾತನಾಡಿ, ದೇಶಕ್ಕಾಗಿ ತಮ್ಮೆಲ್ಲಾ ಸುಖ ಸಂತೋಷ ಬದಿಗಿಟ್ಟು ಕರ್ತವ್ಯ ಸಲ್ಲಿಸುತ್ತಿರುವ ವೀರರನ್ನು ಸ್ಮರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.

ರೋಟರಿ ವುಡ್ಸ್ ಕಾರ್ಯದರ್ಶಿ ಕಿರಣ್ ಕುಂದರ್ ವಂದಿಸಿದರು. ಕಿಗ್ಗಾಲು ರಂಜಿತ್, ರವಿಕುಮಾರ್, ಚಂದ್ರಶೇಖರ್, ಪ್ರವೀಣ್ ಕುಮಾರ್ ನಿರ್ವಹಿಸಿದರು.

ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿನ ಅಮರ್ ಜವಾನ್ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ರೋಟರಿ ವುಡ್ಸ್ ವತಿಯಿಂದ ಪುಷ್ಪ ನಮನ ಸಲ್ಲಿಸಲಾಯಿತು.

Share this article