ಕನ್ನಡಪ್ರಭ ವಾರ್ತೆ ಮಡಿಕೇರಿ
ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ ವತಿಯಿಂದ ‘ಯುವನಿಧಿ’ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಮಂಗಳವಾರ ಚಾಲನೆ ದೊರೆತಿದೆ.ಈ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ‘ಭಿತ್ತಿಪತ್ರ’ ಬಿಡುಗಡೆ ಮಾಡುವ ಮೂಲಕ ‘ಯುವನಿಧಿ’ ಯೋಜನಾ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು.ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, 2023ನೇ ವರ್ಷದಲ್ಲಿ ತೇರ್ಗಡೆಯಾಗಿ, ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ (ವೃತ್ತಿಪರ ಕೋರ್ಸ್ ಸೇರಿದಂತೆ) ಪ್ರತೀ ತಿಂಗಳು 3 ಸಾವಿರ ರು. ಹಾಗೂ ಡಿಪ್ಲೋಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತೀ ತಿಂಗಳು 1500 ರು. ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ದೊರೆಯಲಿದೆ ಎಂದು ತಿಳಿಸಿದರು.
ಪದವಿ/ ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಲಭಿಸದೇ ಇರುವ ಕನ್ನಡಿಗರಿಗೆ ಮಾತ್ರ ಈ ಯೋಜನೆಯು ಅನ್ವಯವಾಗುತ್ತದೆ. ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯವನ್ನು ಸ್ಥಗಿತಗೊಳ್ಳಲಿದೆ. ಭತ್ಯೆಯನ್ನು ಡಿಬಿಟಿ ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು, ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು. ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು ಎಂದು ತಿಳಿಸಿದ್ದಾರೆ.ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಉಮಾ ಮಾಹಿತಿ ನೀಡಿ, ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರಿಸುವವರು, ಶಿಶಿಕ್ಷ ವೇತನವನ್ನು ಪಡೆಯುತ್ತಿರುವವರು, ಸರ್ಕಾರಿ/ ಖಾಸಗಿ ವಲಯದಲ್ಲಿ ಉದ್ಯೋಗ ಪಡೆದಿರುವವರು. ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ ಎಂದು ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಬಿಕಾಂ ವಿಭಾಗದಲ್ಲಿ 300, ಬಿಸಿಎ ವಿಭಾಗದಲ್ಲಿ 120, ಬಿಬಿಎ ವಿಭಾಗದಲ್ಲಿ 84, ಬಿಎ ವಿಭಾಗದಲ್ಲಿ 120, ಬಿಎಸ್ಸಿ ವಿಭಾಗದಲ್ಲಿ 70, ಡಿಪ್ಲೋಮಾ ವಿಭಾಗದಲ್ಲಿ 187 ಒಟ್ಟು 881 ಅಭ್ಯರ್ಥಿಗಳನ್ನು ಯುವನಿಧಿ ಯೋಜನೆಗೆ ಗುರುತಿಸಲಾಗಿದೆ ಎಂದು ಉಮಾ ಮಾಹಿತಿ ನೀಡಿದರು.ಯುವನಿಧಿ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಲು ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಗೆ ಭೇಟಿ ನೀಡಬಹುದು. ಉಚಿತವಾಗಿ ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಸಹಾಯವಾಣಿ ಸಂಖ್ಯೆ 18005999918 ಸಂಪರ್ಕಿಸಬಹುದು.ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ಸಾಂಖ್ಯಿಕ ಅಧಿಕಾರಿ ಡಾ.ಎಚ್.ಜೆ.ರೂಪ, ಜಿಲ್ಲಾ ಸಂಯೋಜಕರಾದ ಎನ್.ಆರ್.ರವಿಕುಮಾರ್, ಇತರರು ಇದ್ದರು.