ಕನ್ನಡಪ್ರಭ ವಾರ್ತೆ ಹಾಸನ ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮಡಿವಾಳ ಯುವ ಘಟಕ ಸಂಘದಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಜಿಲ್ಲಾ ಮಡಿವಾಳ ಯುವ ಘಟಕ ಸಂಘದ ಅಧ್ಯಕ್ಷ ಎಸ್.ಡಿ. ರಘು ಮತ್ತು ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮಿ ಅಂಜನಪ್ಪ ಮಾಧ್ಯಮದೊಂದಿಗೆ ಮಾತನಾಡಿ, ಅತ್ಯಾಚಾರದಿಂದ ಅಸ್ವಸ್ಥವಾಗಿರುವ ಐದು ವರ್ಷದ ಅಪ್ರಾಪ್ತ ಬಾಲಕಿಯು ತೀರ ಹಿಂದುಳಿದ ಮಡಿವಾಳ ಜನಾಂಗಕ್ಕೆ ಸೇರಿದ್ದಾಳೆ. ಬಾಲಕಿಯ ಮೇಲೆ ಚನ್ನರಾಯಪಟ್ಟಣ ತಾಲೂಕಿನ ಹಿರಿಸೇವೆಯಲ್ಲಿ ವಾಸವಾಗಿರುವ ಗಂಗಾಧರ ಗೌಡ ಅಲಿಯಾಸ್ ಪರಮೇಶ್ವರ್‌ರವರ ಮಗ ಯಶಸ್ ಗೌಡಅತ್ಯಾಚಾರ ಎಸಗಿದ್ದು, ಹಾಸನ ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿರುತ್ತಾಳೆ. ಈಕೆಯ ಪೋಷಕರು ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದವರಾಗಿರುತ್ತಾರೆ. ಅತ್ಯಾಚಾರವೆಸಗಿರುವ ಆರೋಪಿಯು ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢರಾಗಿರುತ್ತಾರೆ. ಇವರು ಮತ್ತು ಇವರ ಕಡೆಯವರು ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯ ಪೋಷಕರು ಹಾಗೂ ಸಂಬಂಧಿಕರ ಮೇಲೆ ದೌರ್ಜನ್ಯ ವೆಸಗುವ ಹಾಗೂ ವೈಯಕ್ತಿಕವಾಗಿ ಹಲ್ಲೆ ನಡೆಸುವ ಪ್ರಾಣಭಯ ಉಂಟುಮಾಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿ ಮತ್ತು ಬಾಲಕಿಯ ಪೋಷಕರಿಗೆ ಸೂಕ್ತ ರಕ್ಷಣೆ ಕೊಟ್ಟು ಹಾಗೂ ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯ ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಉಂಟಾಗಿದ್ದು, ಆಕೆಯ ಭವಿಷ್ಯ ರೂಪಿಸಿಕೊಳ್ಳಲು ಸೂಕ್ತ ಪರಿಹಾರ ಹಾಗೂ ಆರೋಪಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು. ಆರೋಪಿ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿ ಮತ್ತು ಪೋಷಕರ ಪರವಾಗಿ ಕೋರಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಮಡಿವಾಳ ಯುವ ಘಟಕ ಸಂಘದ ಟಿ. ಶಶಿಧರ್, ಎಚ್.ಎನ್. ಮಲ್ಲೇಶ್, ಸೋಮಣ್ಣ, ಬಿ.ಟಿ. ಜಯಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.