ಬಳ್ಳಾರಿ: ವಚನ ಸಾಹಿತ್ಯ ಕಾಲದಲ್ಲಿ ಸರ್ವರಿಗೂ ಸಮಪಾಲು-ಸಮಬಾಳು ಒದಗಿಸಲು ಅನೇಕ ಶರಣರು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಅಂತಹವರ ವಿಚಾರಧಾರೆಗಳನ್ನು ಇಂದಿನ ಪೀಳಿಗೆಗೆ ಮನದಟ್ಟು ಮಾಡಲು ನಮ್ಮ ಸರ್ಕಾರ ಜಯಂತಿ ಕಾರ್ಯಕ್ರಮಗಳನ್ನು ಆಚರಿಸುತ್ತಿದೆ ಎಂದು ಮೇಯರ್ ಪಿ.ಗಾದೆಪ್ಪ ತಿಳಿಸಿದರು.
ಜಯಂತಿ ಕಾರ್ಯಕ್ರಮ ಆಚರಣೆಗೆ ಹೆಚ್ಚಿನ ಅನುದಾನಕ್ಕಾಗಿ ಮಹಾನಗರ ಪಾಲಿಕೆಯಿಂದ ವಿಶೇಷ ಅನುದಾನ ನೀಡಲಾಗುವುದು. ಈ ಕುರಿತು ಸಂಸದರ, ಶಾಸಕರ, ಪಾಲಿಕೆ ಸದಸ್ಯರ ಜೊತೆಗೂಡಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು. ಪ್ರತಿಯೊಂದು ಸಮುದಾಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ಸಮುದಾಯಗಳು ಒಗ್ಗಟ್ಟಾಗಿ ಶಿಕ್ಷಣ ಪಡೆಯುವುದರ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಮಾತನಾಡಿ, ಭಾರತ ಹುಣ್ಣಿಮೆಯ ದಿನದಂದೇ ಮಡಿವಾಳ ಮಾಚಿದೇವರ ಜಯಂತಿ ಆಚರಿಸುತ್ತಿಸುವುದು ನಮ್ಮೆಲ್ಲರ ಸೌಭಾಗ್ಯ. ಜಾತಿ, ಮತ, ಲಿಂಗ ಭೇದವನ್ನು ತಿರಸ್ಕರಿಸಿದ ಬಸವಣ್ಣನವರ ಸಾಮಾಜಿಕ ಕ್ರಾಂತಿಯಲ್ಲಿ ತೊಡಗಿಸಿಕೊಂಡಿದ್ದವರು ಮಡಿವಾಳ ಮಾಚಿದೇವರು ಒಬ್ಬರಾಗಿದ್ದರು ಎಂದು ಹೇಳಿದರು.12ನೇ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು -ಕೀಳು ತಾರತಮ್ಯ, ಅಸ್ಪೃಶ್ಯತೆ, ಮೂಢನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ತುಳಿತಕ್ಕೆ ಒಳಗಾಗಿದ್ದ ಜನರ ಏಳ್ಗೆಗಾಗಿ ಅನೇಕ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ಬಳಿಕ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಬಳ್ಳಾರಿಯ ದೊಡ್ಡಯ್ಯ ವಿ.ಕಲ್ಲೂರು ತಂಡ ವಚನ ಸಂಗೀತ ಗಾಯನ ಪ್ರಸ್ತುತಪಡಿಸಿದರು.
ಬಳ್ಳಾರಿಯ ಹೊಂಗಿರಣ ಸಭಾಂಗಣದಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮೇಯರ್ ಪಿ.ಗಾದೆಪ್ಪ ಮಾತನಾಡಿದರು.