ಮಡಿವಾಳ ಸಮಾಜ ಶಿಕ್ಷಣಕ್ಕೆ ಆದ್ಯತೆ ನೀಡಲಿ: ಸಿದ್ಧಾರ್ಥ ಸಿಂಗ್‌

KannadaprabhaNewsNetwork | Published : Feb 22, 2024 1:47 AM

ಸಾರಾಂಶ

ಶರಣರು ಈ ನಾಡಿಗೆ ಸಮಾನತೆಯ ತತ್ತ್ವ ಸಾರಿದ್ದಾರೆ. ಶರಣರ ವಚನಗಳನ್ನು ಮಡಿವಾಳ ಮಾಚಿದೇವರು ಸಂರಕ್ಷಿಸಿದ್ದಾರೆ.

ಹೊಸಪೇಟೆ: ಮಡಿವಾಳ ಸಮಾಜ ಶ್ರಮಿಕ ಸಮಾಜವಾಗಿದೆ. ಈ ಸಮಾಜದವರು ಕಾಯಕದ ಜತೆಗೆ ಶಿಕ್ಷಣದ ಕಡೆಗೆ ಒತ್ತು ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ಹುದ್ದೆಗೇರಲು ಒತ್ತು ನೀಡಬೇಕು ಎಂದು ಯುವ ಮುಖಂಡ ಸಿದ್ಧಾರ್ಥ ಸಿಂಗ್‌ ತಿಳಿಸಿದರು.

ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ವಿಜಯನಗರ ಜಿಲ್ಲಾ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ, ತಾಲೂಕು, ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ, ಗ್ರಾಮಾಂತರ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಬುಧವಾರ ನಡೆದ ವಚನ ಸಂರಕ್ಷಕ ಶ್ರೀ ವೀರಘಂಟೆ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶರಣರು ಈ ನಾಡಿಗೆ ಸಮಾನತೆಯ ತತ್ತ್ವ ಸಾರಿದ್ದಾರೆ. ಶರಣರ ವಚನಗಳನ್ನು ಮಡಿವಾಳ ಮಾಚಿದೇವರು ಸಂರಕ್ಷಿಸಿದ್ದಾರೆ. ಸ್ವತಃ ಬಸವಣ್ಣನವರು ಇವರ ಕುರಿತು ವಚನ ಬರೆದಿದ್ದಾರೆ. ಹಾಗಾಗಿ ನಾವು ಮಡಿವಾಳ ಮಾಚಿದೇವರು ಹಾಗೂ ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕು. ಮಡಿವಾಳ ಸಮಾಜ ನಾಗರಿಕರು ಶುಭ್ರವಾಗಿರಲು ಶ್ರಮಿಸುತ್ತಿದ್ದಾರೆ. ಈಗ ನಾನು ಕೂಡ ಸುಂದರ ಬಟ್ಟೆ ಹಾಕಿಕೊಂಡು ತಿರುಗಾಡಲು ಮಡಿವಾಳ ಸಮಾಜದ ಕೊಡುಗೆ ಇದೆ. ಹಾಗಾಗಿ ಸಮಾಜ ಕಾಯಕದ ಜತೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಇದರಿಂದ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆ ಕಾಣುತ್ತದೆ ಎಂದರು.

ಮಡಿವಾಳ ಮಾಚಿದೇವರ ಕುರಿತು ಎಂ. ನಾಗರಾಜ್ ಅವರು ಉಪನ್ಯಾಸ ನೀಡಿದರು. ಕೊಟ್ಟೂರು ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, 12ನೇ ಶತಮಾನದಲ್ಲಿ ನಾಡಿನಲ್ಲಿ ಶರಣರು ಸಮಾನತೆಯ ಕ್ರಾಂತಿ ಮಾಡಿದ್ದಾರೆ. ಅವರ ಆದರ್ಶವನ್ನು ನಾವೆಲ್ಲರೂ ಪರಿಪಾಲಿಸಬೇಕು. ಸನ್ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.

ಹಡಪದ ಅಪ್ಪಣ್ಣ ಸ್ವಾಮೀಜಿ, ಸಂಘದ ಉತ್ತರ ಕರ್ನಾಟಕದ ಅಧ್ಯಕ್ಷ ಎಂ.ಕೆ. ಹನುಮಂತಪ್ಪ, ಜಿಲ್ಲಾ ಕುಷ್ಟರೋಗ ನಿಯಂತ್ರಣ ಅಧಿಕಾರಿ ಭಾಸ್ಕರ್, ಮುಖಂಡರಾದ ಪರಸಪ್ಪ, ದುರುಗೇಶ್, ರಾಮಣ್ಣ, ರಮೇಶ್ ಗಣೇಶ್ ಮಡಿವಾಳ್ ಮತ್ತಿತರರಿದ್ದರು.

Share this article