ಮಾಗಡಿ ಪುರಸಭೆ ಆಡಳಿತ ಕಾಂಗ್ರೆಸ್ ವಶಕ್ಕೆ

KannadaprabhaNewsNetwork | Published : Sep 19, 2024 1:50 AM

ಸಾರಾಂಶ

ಮಾಗಡಿ: ಸ್ಪಷ್ಟ ಬಹುಮತ ಹೊಂದಿದ್ದ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದು ಕಾಂಗ್ರೆಸ್ ಪಕ್ಷ ಹೆಣೆದ ತಂತ್ರದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಹಿಡಿಯುವಲ್ಲಿ ಸಫಲವಾಯಿತು.

ಮಾಗಡಿ: ಸ್ಪಷ್ಟ ಬಹುಮತ ಹೊಂದಿದ್ದ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದು ಕಾಂಗ್ರೆಸ್ ಪಕ್ಷ ಹೆಣೆದ ತಂತ್ರದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಹಿಡಿಯುವಲ್ಲಿ ಸಫಲವಾಯಿತು.

ಪುರಸಭೆಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ 22ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ರಮ್ಯಾ ನರಸಿಂಹಮೂರ್ತಿ, ಉಪಾಧ್ಯಕ್ಷರಾಗಿ 14ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ರಿಯಾಜ್ ಅಹಮದ್ ತಲಾ 11 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ಶರತ್ ಕುಮಾರ್ ಘೋಷಿಸಿದರು.

ಒಟ್ಟು 23 ಸದಸ್ಯರ ಬಲ ಹೊಂದಿರುವ ಪುರಸಭೆಯಲ್ಲಿ ಜೆಡಿಎಸ್ 12 ಸದಸ್ಯರು, ಕಾಂಗ್ರೆಸ್ 10 ಸದಸ್ಯರು, ಬಿಜೆಪಿ ಓರ್ವ ಸದಸ್ಯೆಯನ್ನು ಒಳಗೊಂಡಿದೆ. ಜೆಡಿಎಸ್ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯ ಓರ್ವ ಸದಸ್ಯ ಬೆಂಬಲದಿಂದ 13 ಸ್ಥಾನ ಮತ್ತು ಸಂಸದ ಡಾ. ಮಂಜುನಾಥ್ ಅವರ ಮತ ಸೇರಿ 14 ಮತಗಳನ್ನು ಹೊಂದಿದ್ದರೂ ಜೆಡಿಎಸ್ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. ಜೆಡಿಎಸ್‌ನ ಆಂತರಿಕ ಭಿನ್ನಾಭಿಪ್ರಾಯವನ್ನು ಕಾಂಗ್ರೆಸ್ ಬಳಸಿಕೊಂಡು ಮಾಗಡಿ ಪುರಸಭೆ ಅಧಿಕಾರ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ನಾಲ್ವರು ಸದಸ್ಯರಾದ ರಹಮತ್, ರಾಮು, ಹೇಮಲತಾ, ಕಾಂತರಾಜು ತಟಸ್ಥರಾಗಿ ಯಾರಿಗೂ ಮತ ಚಲಾವಣೆ ಮಾಡಲಿಲ್ಲ. ಬಿಜೆಪಿಯಿಂದ ಗೆದ್ದಿದ್ದ ಭಾಗ್ಯಮ್ಮನಾರಾಯಣಪ್ಪ ಕೂಡ ಚುನಾವಣೆಯಲ್ಲಿ ಗೈರಾಗುವ ಮೂಲಕ ಚುನಾವಣೆಯಲ್ಲಿ ಯಾರಿಗೂ ಬೆಂಬಲ ಸೂಚಿಸಲಿಲ್ಲ. ಸಂಸದ ಡಾ. ಸಿ.ಎನ್.ಮಂಜುನಾಥ್ ಪುರಸಭೆಯಲ್ಲಿ ಮತದಾನದ ಹಕ್ಕಿದ್ದರೂ ಗೈರು ಹಾಜರಾದರು. ಈ ಎಲ್ಲಾ ಅವಕಾಶಗಳನ್ನು ಸದ್ಬಳಸಿಕೊಂಡ ಕಾಂಗ್ರೆಸ್‌ ಸದಸ್ಯರು ಸುಲಭವಾಗಿ ಪುರಸಭೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿದರು.

ನೂತನ ಅಧ್ಯಕ್ಷೆ ರಮ್ಯಾನರಸಿಂಹಮೂರ್ತಿ ಮಾತನಾಡಿ, ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕರಿಸಿದ ಶಾಸಕರು ಹಾಗೂ ಸದಸ್ಯರಿಗೆ ಕೃತಜ್ಞನೆ ಸಲ್ಲಿಸುತ್ತೇನೆ. ಪಟ್ಟಣದ ಸಮಸಗ್ರ ಅಭಿವೃದ್ಧಿಗೆ ಎಲ್ಲರ ಸಲಹೆ ಪಡೆದು ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಹಾಗೂ ಹಲವು ಮುಖಂಡರು ಭಾಗವಹಿಸಿದರು.

ಬಾಕ್ಸ್‌........

ತಟಸ್ಥ ಜೆಡಿಎಸ್‌ ಸದಸ್ಯರು ಪಕ್ಷಕ್ಕೆ ಬಂದರೆ ಸ್ವಾಗತ

ಕಾಂಗ್ರೆಸ್‌ನಿಂದ ಗೆದ್ದಿದ್ದ ಹತ್ತು ಸದಸ್ಯರು ಹಾಗೂ ನನ್ನ ಮತ ಸೇರಿ 11 ಮತಗಳನ್ನು ಪಡೆಯುವ ಮೂಲಕ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ಅಭಿನಂದಿಸಿದರು.

ಜೆಡಿಎಸ್‌ ಭಿನ್ನಾಭಿಪ್ರಾಯದಿಂದಲೇ ಅವರು ಅಧಿಕಾರ ಕಳೆದುಕೊಂಡಿದ್ದಾರೆ. ತಟಸ್ಥ ರಾಗಿ ಉಳಿದಿರುವ ನಾಲ್ವರು ಜೆಡಿಎಸ್ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಬರುವುದಾದರೆ ಸ್ವಾಗತ ಕೋರುತ್ತೇವೆ. ನಾವು ಯಾವುದೇ ರೀತಿ ಆಪರೇಷನ್ ಹಸ್ತ ಮಾಡಿಲ್ಲ. ನಮ್ಮಲ್ಲಿದ್ದ ಸದಸ್ಯರು ಒಗ್ಗಟ್ಟಾಗಿ ಚುನಾವಣೆ ಎದುರಿಸಿ, ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷರು ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಮಾಗಡಿ ಪಟ್ಟಣದ ಸಮಗ್ರ ಅಭಿವೃದ್ಧಿ ಶ್ರಮಿಸಬೇಕು. ಚುನಾವಣೆ ಸಮಯದಲ್ಲಿ ಮಾತ್ರ ಪಕ್ಷ ಎಂದು ಹೇಳುತ್ತೇವೆ. ಚುನಾವಣೆ ನಂತರ ಅಭಿವೃದ್ಧಿ ವಿಷಯದಲ್ಲಿ ಪಕ್ಷಬೇಧವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಕೈ ಸೋಡಿಸಬೇಕು ಎಂದು ವಿರೋಧಿ ಬಣದ ಸದಸ್ಯರಿಗೂ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

18ಮಾಗಡಿ1 :

ಮಾಗಡಿ ಪುರಸಭೆಗೆ ಆಯ್ಕೆಯಾಗಿರುವ ನೂತನ ಅಧ್ಯಕ್ಷೆ ರಮ್ಯಾ ನರಸಿಂಹಮೂರ್ತಿ, ಉಪಾಧ್ಯಕ್ಷರಾಗಿ ರಿಯಾಜ್ ಅವರನ್ನು ಶಾಸಕ ಬಾಲಕೃಷ್ಣ ಹಾಗೂ ಬೆಂಬಲಿಗರು ಅಭಿನಂದಿಸಿದರು.

Share this article