ಮಾಗಳ ಸರ್ಕಾರಿ ಶಾಲೆ ನಾಡಿಗೆ ಪ್ರೇರಣೆ: ಡಾ. ಹಿರಿ ಶಾಂತವೀರ ಸ್ವಾಮೀಜಿ

KannadaprabhaNewsNetwork |  
Published : Mar 09, 2025, 01:51 AM IST
ಹೂವಿನಹಡಗಲಿ ತಾಲೂಕಿನ ಮಾಗಳ ಗ್ರಾಮದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಗವಿಮಠದ ಡಾ.ಹಿರಿಶಾಂತ ವೀರ ಸ್ವಾಮೀಜಿ.  | Kannada Prabha

ಸಾರಾಂಶ

ಶತಮಾನೋತ್ಸವ ಆಚರಿಸಿಕೊಂಡಿರುವ ಗ್ರಾಮೀಣ ಭಾಗದ, ಮಾಗಳ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಾಡಿಗೆ ಪ್ರೇರಣೆಯಾಗಿದೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಶತಮಾನೋತ್ಸವ ಆಚರಿಸಿಕೊಂಡಿರುವ ಗ್ರಾಮೀಣ ಭಾಗದ, ಮಾಗಳ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಾಡಿಗೆ ಪ್ರೇರಣೆಯಾಗಿದೆ ಎಂದು ಗವಿಸಿದ್ದೇಶ್ವರ ಮಠದ ಡಾ. ಹಿರಿ ಶಾಂತವೀರ ಸ್ವಾಮೀಜಿ ಹೇಳಿದರು.

ತಾಲೂಕಿನ ಮಾಗಳ ಗ್ರಾಮದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಐತಿಹಾಸಿಕ ಪರಂಪರೆ ಹೊಂದಿರುವ ಈ ಗ್ರಾಮದ ಶಾಲೆಯಲ್ಲಿ, ಎಲ್ಲ ವರ್ಗದ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಅತಿ ಹೆಚ್ಚು ಮಕ್ಕಳ ದಾಖಲಾತಿ ಹೊಂದಿದೆ. ಭಾವನಾತ್ಮಕ ಹಾಗೂ ಭಾವೈಕ್ಯ ಸಂಬಂಧ ಬೆಸೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ನಮ್ಮಲ್ಲಿ ಅಡಗಿರುವ ಜಾಢ್ಯತೆ ತೊಲಗಿಸುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಗುರು ಹಿರಿಯರ ಬಗ್ಗೆ ಗೌರವದಿಂದ ಕಾಣುವಂತಹ ಗುಣ ಬೆಳೆಸಿ, ನಾಡಿನ ಭಾಷೆ, ಕಲೆ, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಿ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ ಪೂಜಾರ್‌, ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಾಗಿದ್ದು, ಈ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಈ ಮಾಗಳ ಶಾಲೆಯಲ್ಲಿ ಹೆಚ್ಚು ರೈತರು ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಜತೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಆಸಕ್ತಿ ವಹಿಸಿ ಬೋಧಿಸಬೇಕು ಎಂದು ಹೇಳಿದರು.

ಗ್ರಾಮದಲ್ಲಿ ಸಾಕಷ್ಟು ಶ್ರೀಮಂತಿಕೆ ಹೊಂದಿದ್ದರೂ, ಯಾರು ಕೂಡಾ ಖಾಸಗಿ ಶಾಲೆ ತೆರೆಯುವಂತಹ ಕೆಲಸಕ್ಕೆ ಕೈ ಹಾಕದೇ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಮುಖ್ಯ ಶಿಕ್ಷಕ ಡಿ. ವಿರೂಪಣ್ಣ ಮಾತನಾಡಿ, ಗ್ರಾಮಾಂತರದ ಈ ಶಾಲೆಯಲ್ಲಿ 1ರಿಂದ 6 ವರೆಗೂ ಆಂಗ್ಲ ಮಾಧ್ಯಮ, 1ರಿಂದ 7ರ ವರೆಗೂ ಕನ್ನಡ ಮಾಧ್ಯಮ ಹಾಗೂ ಪಿಎಂಶ್ರೀ ಯೋಜನೆಯ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳು ನಡೆಯುತ್ತಿದ್ದು, 690 ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಎಂ. ಶಾಂತರಾಜ, ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಬಿ. ಜಗದೀಶ, ಗ್ರಾಪಂ ಉಪಾಧ್ಯಕ್ಷ ಯಳಮಾಲಿ ವಿರೂಪಾಕ್ಷಪ್ಪ, ಶಿಕ್ಷಕ ಯೇಸು ಮಾತನಾಡಿದರು.

ಇಟಿಗಿ ಮಠದ ಗುರುಶಾಂತ ಶಿವಾಚಾರ್ಯ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ಎಲ್‌. ಬಸಮ್ಮ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷೆ ಕೆ. ಮಮತಾ, ಕೆ. ಸತ್ಯನಾರಾಯಣರೆಡ್ಡಿ, ತೋಟರ ಮಲ್ಲಿಕಾರ್ಜುನಪ್ಪ, ಎಲ್‌. ಮಂಜುನಾಥ, ಟಿ. ಧರ್ಮಣ್ಣ, ಶ್ರೀಮಂತ, ಉತ್ತಂಗಿ ಆನಂದ, ಜಿಲಾನ್‌, ಜಯಕೀರ್ತಿ, ಮಠದ ವೀರಣ್ಣ, ನಿಂಗಪ್ಪ, ತೋಟರ ಹಾಲೇಶ ಇತರರಿದ್ದರು.

ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!