ಮಂಗಳೂರು ದಸರಾ ಮಹೋತ್ಸವಕ್ಕೆ ವೈಭವದ ಚಾಲನೆ

KannadaprabhaNewsNetwork | Published : Oct 4, 2024 1:07 AM

ಸಾರಾಂಶ

ಶ್ರೀ ಮಹಾಗಣಪತಿ, ಶಾರದೆ, ಆದಿಶಕ್ತಿ, ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ ದೇವಿಯರ ಪ್ರತಿಷ್ಠಾಪನೆ ದೇವಸ್ಥಾನದ ದರ್ಬಾರು ಮಂಟಪದಲ್ಲಿ ನೆರವೇರಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಮಂಗಳೂರು ದಸರಾ ಮಹೋತ್ಸವವನ್ನು ಕೇಂದ್ರ ಮಾಜಿ ಸಚಿವ, ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಜನಾರ್ದನ ಪೂಜಾರಿ ಗುರುವಾರ ಉದ್ಘಾಟಿಸಿದರು. ಇದೇ ಸಂದರ್ಭ ದೇವಾಲಯದ ದರ್ಬಾರ್‌ ಹಾಲ್‌ನಲ್ಲಿ ಶ್ರೀ ಮಹಾಗಣಪತಿ ಸಹಿತ ನವದುರ್ಗೆಯರ ಪ್ರತಿಮೆಗಳನ್ನು ಪ್ರತಿಷ್ಠಾಪಿಸುವುದರೊಂದಿಗೆ ಅ.14ರವರೆಗೆ ನಡೆಯಲಿರುವ ನವರಾತ್ರಿಗೆ ವಿಧ್ಯುಕ್ತ ಚಾಲನೆ ದೊರೆಯಿತು.

ಶ್ರೀ ಮಹಾಗಣಪತಿ, ಶಾರದೆ, ಆದಿಶಕ್ತಿ, ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ ದೇವಿಯರ ಪ್ರತಿಷ್ಠಾಪನೆ ದೇವಸ್ಥಾನದ ದರ್ಬಾರು ಮಂಟಪದಲ್ಲಿ ನೆರವೇರಿತು.

ಬೆಳಗ್ಗೆ ದೇವಸ್ಥಾನದಲ್ಲಿ ಗುರುಪ್ರಾರ್ಥನೆ, ಕಲಶ ಪ್ರತಿಷ್ಠೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಬಳಿಕ ಬ್ಯಾಂಡ್‌, ಚಂಡೆ, ಹುಲಿ ವೇಷ, ಸ್ಯಾಕ್ಸ್‌ಫೋನ್‌ ವಾದನದೊಂದಿಗೆ ನವರಾತ್ರಿಯ ವಿಶೇಷ ಆಕರ್ಷಣೆಯಾದ ಶಾರದಾಮಾತೆಯ ಮೂರ್ತಿಯನ್ನು ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ಬಳಿಕ ಪ್ರತಿಷ್ಠಾಪನೆ ಮಾಡಲಾಯಿತು. ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಮಂದಿ ದೇವಾಲಯಕ್ಕೆ ಆಗಮಿಸಿದ್ದರು.

ಹುಲಿಕುಣಿತ ಸೇವೆ:

ಉದ್ಘಾಟನಾ ಸಮಾರಂಭದ ವೇಳೆ ಶ್ರೀ ಶಾರದಾ ಮಾತೆಯ ವಿಗ್ರಹದ ಎದುರು ಹುಲಿ ವೇಷಧಾರಿಗಳಿಂದ ಕುಣಿತ ಸೇವೆ ನಡೆಯಿತು. 9 ತಿಂಗಳ ಮಗುವಿಗೆ ಹುಲಿ ವೇಷ ಹಾಕಿದ್ದು ಗಮನ ಸೆಳೆಯಿತು.

ನವರಾತ್ರಿ ಒಳಿತು ಮಾಡಲಿ- ಪೂಜಾರಿ:

ದಸರಾ ಮಹೋತ್ಸವ ಚಾಲನೆ ನೀಡಿ ಮಾತನಾಡಿದ ಜನಾರ್ದನ ಪೂಜಾರಿ, ಮಂಗಳೂರು ದಸರಾ ಜನರಿಂದಲೇ ಆಚರಿಸಲ್ಪಡುವ ಜನರ ದಸರಾ. ಲೋಕಕ್ಕೆ, ಸರ್ವ ಜನರಿಗೂ ದೇವರು ಒಳ್ಳೆಯದನ್ನೇ ಮಾಡಲಿ. ಎಲ್ಲವೂ ಗೋಕರ್ಣನಾಥ ದೇವರು ಮತ್ತು ಬ್ರಹ್ಮಶ್ರೀ ನಾರಾಯಣ ಅನುಗ್ರಹಗಳಿಂದ ನಡೆಯುತ್ತಿದೆ ಎಂದು ಹೇಳಿದರು.13ರಂದು ಶೋಭಾಯಾತ್ರೆ:

ಮಂಗಳೂರು ದಸರಾದ ವಿಶೇಷ ಆಕರ್ಷಣೆಯಾದ ದೇವರ ಮೂರ್ತಿಗಳ ಶೋಭಾಯಾತ್ರೆಯು ಅ.13ರಂದು ಹತ್ತಾರು ಟ್ಯಾಬ್ಲೋಗಳೊಂದಿಗೆ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ನಗರದ ರಾಜಬೀದಿಗಳು ವಿದ್ಯುದ್ದೀಪಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿವೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ, ಕ್ಷೇತ್ರದ ಅಧ್ಯಕ್ಷ ಎಚ್‌. ಎಸ್‌. ಸಾಯಿರಾಂ, ಮಾಲತಿ ಜೆ. ಪೂಜಾರಿ, ಉಪಾಧ್ಯಕ್ಷೆ ಉರ್ಮಿಳಾ ರಮೇಶ್‌ ಕುಮಾರ್‌, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿ​ಕಾರಿ ಪದ್ಮರಾಜ್‌ ಆರ್‌., ಟ್ರಸ್ಟಿಗಳಾದ ರವಿಶಂಕರ ಮಿಜಾರು, ಶೇಖರ್‌ ಪೂಜಾರಿ, ಜಗದೀಪ್‌ ಡಿ. ಸುವರ್ಣ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಡಾ.ಬಿ.ಜಿ. ಸುವರ್ಣ, ಅಭಿವೃದ್ಧಿ ಸಮಿತಿ ಸದಸ್ಯರಾದ ವೇದಕುಮಾರ್‌, ಹರಿಕೃಷ್ಣ ಬಂಟ್ವಾಳ್‌, ರಾಧಾಕೃಷ್ಣ, ಎಚ್‌.ಎಸ್‌. ಜೈರಾಜ್‌, ಕೃತಿನ್‌ ಡಿ. ಅಮೀನ್‌, ಜತಿನ್‌ ಅತ್ತಾವರ, ಎನ್‌. ಹರೀಶ್ಚಂದ್ರ, ಚಂದನ್‌ದಾಸ್‌, ಕಿಶೋರ್‌ ದಂಡೆಕೇರಿ, ಲೀಲಾಕ್ಷ ಕರ್ಕೇರ, ಗೌರವಿ ರಾಜಶೇಖರ್‌, ಲತೀಶ್‌ ಎಂ. ಸುವರ್ಣ, ವಾಸುದೇವ ಕೋಟ್ಯಾನ್‌ ಇದ್ದರು.

ಸಂಸದ ಬ್ರಿಜೇಶ್‌ ಚೌಟ, ಕಾರ್ಪೊರೇಟರ್‌ ಪ್ರವೀಣ್‌ಚಂದ್ರ ಆಳ್ವ, ಅನಿಲ್‌ ಪೂಜಾರಿ, ಕಾಂಗ್ರೆಸ್‌ ಮುಖಂಡ ಉದಯ ಕುಮಾರ್‌ ಶೆಟ್ಟಿ ಮುನಿಯಾಲು, ರಾಜು ಪೂಜಾರಿ ಕ್ಷೇತ್ರಕ್ಕೆ ಭೇಟಿ ನೀಡಿದರು.

Share this article