ಕನ್ನಡಪ್ರಭ ವಾರ್ತೆ ಅರಸೀಕೆರೆ
ಮಾಲೇಕಲ್ ಅಮರಗಿರಿ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ದೇವಾಲಯಕ್ಕೆ ಮುಂಜಾನೆಯಿಂದಲೇ ಆಗಮಿಸಿದ ಭಕ್ತರು, ಸರದಿ ಸಾಲಿನಲ್ಲಿ ನಿಂತು ಗಜೇಂದ್ರ ಮೋಕ್ಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಗೋವಿಂದರಾಜ ಸ್ವಾಮಿಯ ದರ್ಶನ ಮಾಡಿದರು. ನಂತರ ಸ್ವಾಮಿಯ ಪಾದದ ದಿಕ್ಕಿನಲ್ಲಿ ಬರುವ ವೈಕುಂಠ ದ್ವಾರದ ಮೂಲಕ ನಿರ್ಗಮಿಸಿದರೆ ಮನದ ಇಷ್ಟಾರ್ಥ ಮಾತ್ರವಲ್ಲ, ಮೋಕ್ಷ ದೊರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇರುವುದರಿಂದ ವೈಕುಂಠ ದ್ವಾರದ ಮೂಲಕ ನಿರ್ಗಮಿಸಿ ಧನ್ಯತಾ ಭಾವ ಅನುಭವಿಸಿದರು.
ಸಹಸ್ರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಭಕ್ತರು ಆಗಮಿಸುವ ನಿರೀಕ್ಷೆಯಿದ್ದ ಹಿನ್ನೆಲಲ್ಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು, ದೇವಾಲಯದ ಅಭಿವೃದ್ಧಿ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರು ಹಾಗೂ ಪೊಲೀಸರು ಮುಂಜಾಗ್ರತವಾಗಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು. ನಗರದಿಂದ ಆನೇಕಲ್ ತಿರುಪತಿಗೆ ವಿಶೇಷವಾಗಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಿ ಕೊಡಲಾಗಿತ್ತು.ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷ, ಶಾಸಕ ಕೆ . ಎಂ ಶಿವಲಿಂಗೇಗೌಡ ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿ ಲಕ್ಷ್ಮೀ ವೆಂಕಟರಮಣನ ದರ್ಶನ ಪಡೆದರು.
ವೈಷ್ಣವ ದೇವಾಲಯಗಳಲ್ಲಿ ಭಕ್ತರ ಪೂಜೆ:
ಬಿಳಿ ಕಲ್ಲು ರಂಗನಾಥ ಸ್ವಾಮಿ ದೇವಾಲಯ, ಹಾರನಹಳ್ಳಿ ಚನ್ನಕೇಶ್ವರನ ದೇವಾಲಯ, ಬೆಂಡೆಕೆರೆ ಸಮೀಪವಿರುವ ಓರಗಲ್ ತಿಮ್ಮಪ್ಪ ಸ್ವಾಮಿ ದೇವಾಲಯ, ಬೆಟ್ಟದಪುರದ ರಂಗನಾಥ ಸ್ವಾಮಿ ದೇವಾಲಯ ಸೇರಿ ನಗರದ ರುಕ್ಮಿಣಿ ಪಾಂಡುರಂಗ ದೇವಾಲಯ, ಪ್ರಾಚೀನ ಆಂಜನೇಯ ಸ್ವಾಮಿ ದೇವಾಲಯಗಳಲ್ಲೂ ಸಹ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು.