ಕನ್ನಡಪ್ರಭ ವಾರ್ತೆ ಅರಸೀಕೆರೆ
ಏಪ್ರಿಲ್ 13ರಿಂದ 17ರವರೆಗೆ ಸುಮಾರು 5 ದಿನಗಳ ಕಾಲ ಜರುಗಿದ ಈ ಜಾತ್ರಾ ಮಹೋತ್ಸವದಲ್ಲಿ ಒಂದೊಂದು ದಿನವೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಪೂಜಾ ಕೈಂಕರ್ಯ ಜರುಗಿದ್ದು, ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾಗಿದ್ದು ವಿಶೇಷವಾಗಿತ್ತು. ಬುಧವಾರ ರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರುಗಳ ಉತ್ಸವವು ನಡೆಯಿತು. ಬೆಳಿಗ್ಗೆ ಪ್ರಾತಃ ಕಾಲದಲ್ಲಿ ಸಿಡಿ ಉತ್ಸವ ನೆರವೇರಿತು.
ರಥೋತ್ಸವದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಗ್ರಾಮ ದೇವತೆಗಳಾದ ರಂಗನಾಥ ಸ್ವಾಮಿ, ಹೊನ್ನಾಲದಮ್ಮ ದೇವಿ, ಅಮ್ಮಯ್ಯಜ್ಜಿ ದೇವಿ, ಧೂತರಾಯ ಸ್ವಾಮಿ, ವೀರಭದ್ರೇಶ್ವರ ಸ್ವಾಮಿ, ಧೂತರಾಯ ಸ್ವಾಮಿ, ಹೊಸಪಟ್ಟಣ ಗ್ರಾಮದ ಧೂತರಾಯ ಸ್ವಾಮಿ, ಚಿಕ್ಕಮ್ಮ ದೇವಿ, ದೇವತೆಗಳಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು, ಹೊನ್ನಾಲದಮ್ಮ ಹಾಗೂ ಅಮ್ಮಯ್ಯಜ್ಜಿ ದೇವಿಯರು ಹಾಗೂ ಚಿಕ್ಕಮ್ಮ ದೇವಿ, ಹುತ್ತದಮ್ಮ ದೇವಿಗೆ ಮೂಲಸ್ಥಾನದಲ್ಲಿ ಅಭಿಷೇಕ ಮತ್ತು ವಿಶೇಷ ಪೂಜೆ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.ರಥೋತ್ಸವದ ಸಂದರ್ಭದಲ್ಲಿ ಕೆಲವು ಭಕ್ತರು ಹಾಗೂ ಗ್ರಾಮಸ್ಥರು, ಹೊನ್ನಾಲದಮ್ಮ ದೇವಿ ಹಾಗೂ ವೀರಭದ್ರೇಶ್ವರ ಸ್ವಾಮಿ ಮತ್ತು ಚಿಕ್ಕಮ್ಮ ದೇವಿಯರ ನಾಮಸ್ಮರಣೆಯ ಜಯಘೋಷದೊಂದಿಗೆ ರಥವನ್ನು ಎಳೆದರು, ಉಳಿದ ಭಕ್ತರು ರಥದ ಕಲಶಕ್ಕೆ ಬಾಳೆಹಣ್ಣು ಮತ್ತು ದವನವನ್ನು ಅರ್ಪಿಸಿ ಸುಡುವ ಬಿಸಿಲಿನಲ್ಲೂ ಭಕ್ತಿಯ ಧನ್ಯತಾಭಾವ ಮೆರೆದರು.
ನಾಗತಿಹಳ್ಳಿ, ಕಾಟಿಕೆರೆ, ಬೇರನಾಯಕನಹಳ್ಳಿ, ಗೊಲ್ಲರಹಟ್ಟಿ, ಬಿ. ಜಿ. ಹಟ್ಟಿ ಗ್ರಾಮಗಳು ಹಾಗೂ ಜಾಜೂರು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.