ಗದಗ: ಉಪವಾಸ ವ್ರತಾಚರಣೆ, ಜಾಗರಣೆ ಹಾಗೂ ಶಿವನಾಮ ಜಪ ಮೂಲಕ ವಿಶೇಷವಾಗಿ ಆಚರಿಸಲಾಗುವ ಮಹಾ ಶಿವರಾತ್ರಿಯನ್ನು ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಸಂಭ್ರಮ-ಸಡಗರ, ಭಕ್ತಿ-ಭಾವದಿಂದ ಆಚರಿಸಲಾಯಿತು.
ನಗರದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯ ಅಂಗವಾಗಿ ಬೆಳಗ್ಗೆಯಿಂದಲೇ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಶಿವಲಿಂಗಕ್ಕೆ ರುದ್ರಾಭಿಷೇಕ, ವಿಶೇಷ ಅಲಂಕಾರ, ಬಿಲ್ವ ಪತ್ರೆ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಅವಳಿ ನಗರದ ಸಾವಿರಾರು ಭಕ್ತರು ಬೆಳಗ್ಗೆಯಿಂದಲೂ ದೇವಸ್ಥಾನಕ್ಕೆ ಬಂದು ಸಾಲುಗಟ್ಟಿ ನಿಂತು ಶಿವನ ದರ್ಶನ ಪಡೆದರು.ವೀರನಾರಾಯಣ ದೇವಸ್ಥಾನ ಸೇರಿದಂತೆ ಬಸವೇಶ್ವರ ನಗರ, ಸಿದ್ಧಲಿಂಗ ನಗರ, ನಂದೀಶ್ವರ ನಗರ, ರಾಜೀವಗಾಂಧಿ ನಗರದ ಈಶ್ವರ ದೇವಸ್ಥಾನ ಹಾಗೂ ಇನ್ನಿತರ ಬಡಾವಣೆಗಳಲ್ಲಿರುವ ವಿವಿಧ ಶಿವಾಲಯಗಳಲ್ಲಿ ಪೂಜಾಲಂಕಾರ, ಅಭಿಷೇಕ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಕ್ತ ಸಮೂಹ ದೇವಸ್ಥಾನಕ್ಕೆ ಬಂದು ಶಿವನಿಗೆ ಬಿಲ್ವಪತ್ರೆ, ಹೂ-ಹಣ್ಣು ಅರ್ಪಿಸಿ ತಮ್ಮ ಇಷ್ಟಾರ್ಥಗಳಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಇನ್ನು ಗಜೇಂದ್ರಗಡದ ಕಾಲಕಾಲೇಶ್ವರ, ಲಕ್ಷ್ಮೇಶ್ವರ ಸೋಮೇಶ್ವರ ದೇವಸ್ಥಾನ, ಮುಳಗುಂದ ಸಿದ್ದೇಶ್ವರ ದೇವಸ್ಥಾನ, ನೀಲಗುಂದ ಗುದ್ನೇಶ್ವರ ಮಠದ ತ್ರಿಲಿಂಗು ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ, ಗ್ರಾಮಗಳಲ್ಲಿರುವ ಶಿವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಶಿವರಾತ್ರಿ ಜಾಗರಣೆ ಕಾರ್ಯಕ್ರಮಗಳು ನೆರವೇರಿದವು.
ಉಪವಾಸ ವ್ರತಾಚರಣೆ: ಮಹಾ ಶಿವರಾತ್ರಿಯೆಂದರೆ ಉಪವಾಸ ವ್ರತಾಚರಣೆಯೇ ಪ್ರಮುಖವಾಗಿದೆ. ಮನೆಯಲ್ಲಿರುವ ಹಿರಿಯರು, ಮಕ್ಕಳು, ಮಹಿಳೆಯರು ಒಟ್ಟಾಗಿ ಸೇರಿ ಬೆಳಗ್ಗೆಯೇ ಶಿವನ ದರ್ಶನ ಪಡೆದು, ನಂತರ ಸಂಜೆಯವರೆಗೂ ಉಪವಾಸವಿದ್ದು, ಶಿವನ ಜಪದಲ್ಲಿ ತೊಡಗಿದರು. ಶಿವನ ದರ್ಶನ ಮಾಡಿ ಅವಲಕ್ಕಿ, ಬಾಳೆ ಹಣ್ಣು, ಖರ್ಜೂರ, ಕಡಲೆಕಾಳು, ಕಲ್ಲಂಗಡಿ, ದ್ರಾಕ್ಷಿಯಂತಹ ಅಲ್ಪೋಪಹಾರವನ್ನು ಸೇವಿಸಿ, ವ್ರತಾಚರಣೆಯನ್ನು ಪೂರ್ಣಗೊಳಿಸಿ ಭಕ್ತಿ-ಭಾವ ಮೆರೆದರು.ಉಪವಾಸ ಮಾಡುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಅನುಕೂಲತೆಗಳಾಗುತ್ತವೆ ಎನ್ನುವುದರಿಂದ ದೇವರ ಹೆಸರಿನಲ್ಲಿ ಉಪವಾಸ ಮಾಡಿ, ಆರೋಗ್ಯವನ್ನು ಸುಧಾರಣೆ ಮಾಡಿಕೊಳ್ಳುವುದು ಕೂಡಾ ಇದರ ಹಿಂದಿರುವ ವೈಜ್ಞಾನಿಕ ಹಿನ್ನೆಲೆಯಾಗಿದ್ದು, ಹಬ್ಬ ಹರಿದಿನಗಳಲ್ಲಿ ಆಚರಿಸುವ ಅನೇಕ ಆಚರಣೆಗಳು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿರುವುದಕ್ಕೆ ಇದು ಉದಾಹರಣೆಯಾಗಿದೆ.