ಗೋಕರ್ಣದಲ್ಲಿ ಸಂಭ್ರಮದ ಮಹಾಬಲೇಶ್ವರ ರಥೋತ್ಸವ

KannadaprabhaNewsNetwork |  
Published : Mar 01, 2025, 01:07 AM IST
ಸ | Kannada Prabha

ಸಾರಾಂಶ

ಸಹಸ್ರಾರು ಭಕ್ತರು ರಥಕ್ಕೆ ಬಾಳೆಹಣ್ಣು, ಕಡಲೆ ಸಮರ್ಪಿಸಿ ಭಕ್ತಿ ಮೆರೆದರು.

ಗೋಕರ್ಣ: ಪುರಾಣ ಪ್ರಸಿದ್ಧ, ಐತಿಹಾಸಿಕ ಗೋಕರ್ಣದ ಮಹಾಪ್ರಭು ಮಹಾಬಲೇಶ್ವರ ಸ್ವಾಮಿಯ ರಥೋತ್ಸವ ಶುಕ್ರವಾರ ಶ್ರದ್ಧಾ ಭಕ್ತಿಯೊಂದಿಗೆ ಅಪಾರ ಭಕ್ತರ ಪರಶಿವನ ಧ್ಯಾನ, ಜಯಷೋಷದ ನಡುವೆ ವಿಜ್ರಂಭಣೆಯಿಂದ ನೆರವೇರಿತು.

ಸಹಸ್ರಾರು ಭಕ್ತರು ರಥಕ್ಕೆ ಬಾಳೆಹಣ್ಣು, ಕಡಲೆ ಸಮರ್ಪಿಸಿ ಭಕ್ತಿ ಮೆರೆದರು. ಶಿವರಾತ್ರಿ ಅಮಾವಾಸ್ಯೆಯ ಮಾರನೇ ದಿನ ಫಾಲ್ಗುಣ ಶುದ್ಧ ಪ್ರತಿಪದೆಯಂದು ರಥೋತ್ಸವ ಜರಗುವುದು ಸಂಪ್ರದಾಯ.

ಬೆಳಿಗ್ಗೆಯಿಂದ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿ, ನಂತರ ಮಧ್ಯಾಹ್ನ ಶ್ರೀದೇವರ ಉತ್ಸವ ರಥಬೀದಿಗೆ ಆಗಮಸಿ ಅಲ್ಲಿ ವಿವಿಧ ತಾಂತ್ರಿಕ ಕೈಂಕರ್ಯಗಳು ನಡೆದವು.

ನಂತರ ಶ್ರೀದೇವರು ರಥಾರೋಹಣವಾದ ಬಳಿಕ ಸಮರ್ಪಣೆಯಾದ ನಂತರ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ರಥವನ್ನು ವೆಂಕಟ್ರಮಣ ದೇವಾಲಯದವರೆಗೆ ಎಳೆದು ನಂತರ ಪುನಃ ರಥವನ್ನು ನೆಲೆಗೆ ತಂದು ಪುನೀತರಾದರು.

ದೇಶದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ಮತ್ತು ವಿದೇಶಿ ಪ್ರವಾಸಿಗರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನಂತರದಲ್ಲಿ ರಥ ಕಾಣಿಕೆ ಸಮರ್ಪಣೆ ನಡೆಯಿತು. ಮಂದಿರದ ಅಮೃತೇಶ ಹಿರೇ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿತು. ಸಂಸ್ಥಾನ ಗೌಡ ಪಾದಾಚಾರ್ಯ ಕವಳೆ ಮಠದ ಶಿವಾನಂದ ಸರಸ್ವತಿ ಶ್ರೀ ರಥೋತ್ಸವದ ಮುನ್ನ ಆಗಮಿಸಿ ದೇವರಿಗೆ ರಥ ಕಾಣಿಕೆ ಸಲ್ಲಿಸಿದರು. ನಂತರ ರಥೋತ್ಸವನ್ನು ವಿಕ್ಷೀಸಿ ತೆರಳಿದರು.

ರಾರಾಜಿಸಿದ ಕನ್ನಡ, ಕೇಸರಿ ಧ್ವಜ:

ರಥ ಎಳೆಯವ ಸಮಯದಲ್ಲಿ ಕನ್ನಡ ಸಂಘಟನೆಯ ಲಂಬೋಧರ ಗೌಡರವರ ತಂಡದಲ್ಲಿ ಬೃಹತ್ ಕನ್ನಡ ಧ್ವಜ ಹಿಡಿದು ಸಾಗುವುದು ಒಂದೆಡೆಯಾದರೆ, ಮತ್ತೊಂದೆಡೆ ಕೇಸರಿ ಬಾವುಟ ರಾರಾಜಿಸಿದವು. ಇನ್ನು ಬಾಳೆಹಣ್ಣು, ಕಡಲೆಯನ್ನು ಎಸೆದು ಭಕ್ತರು ತಮ್ಮ ಇಷ್ಟಾರ್ಥಕ್ಕೆ ಪ್ರಾರ್ಥಿಸಿದರು. ಅದರಂತೆ ಬಾಳೆಹಣ್ಣಿನ ಮೇಲೆ ತಮ್ಮ ನೆಚ್ಚಿನ ಕ್ರಿಕೆಟ್ ತಂಡ ಗೆಲ್ಲುವಂತೆ ಬರೆದು ಹಾಕಿರುವುದು, ಮನೆಯ ಸಮಸ್ಯೆ ಮತ್ತಿತರ ಕುರಿತು ಪರಿಹರಿಸುವಂತೆ ಮಹಾದೇವಗೆ ಬೇಡಿಕೆ ಇಟ್ಟು ವಂದಿಸಿದರು.

ಪೊಲೀಸ್ ಬಂದೋಬಸ್ತ್‌:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಖುದ್ದು ಸ್ಥಳದಲ್ಲಿದ್ದು, ಅವರ ನೇತೃತ್ವದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸೂಕ್ತ ಬಂದೋಬಸ್ತ್‌ ಒದಗಿಸಿದ್ದರು.

ಗೋಕರ್ಣದಲ್ಲಿ ಮಹಾಬಲ ರಥೋತ್ಸವ ನೆರವೇರಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನೀತರಾಜಕುಮಾರ ಪುತ್ಥಳಿ ಅನಾವರಣ
ಬೆಂಗಳೂರು ನಗರದಲ್ಲಿ ಮತ್ತೊಂದು ಮೇಲ್ಸೇತುವೆ ನಿರ್ಮಾಣ