ಗೋಕರ್ಣ: ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದ ಶಿವರಾತ್ರಿ ಮಹೋತ್ಸವ ಗುರುವಾರ ಸಂಜೆ ಸಂಪನ್ನವಾಯಿತು.
ಕೊನೆಯ ದಿನವಾದ ಗುರುವಾರ ಯಾಗಶಾಲೆಯಲ್ಲಿ 9 ಕುಂಡಗಳಲ್ಲಿ ಅಧಿವಾಸ ಹೋಮ, ಚೂರ್ಣೋತ್ಸವ ನಡೆಯಿತು.
ಸಂಜೆ ಶ್ರೀದೇವರ ಉತ್ಸವ ರಥಬೀದಿ ಮೂಲಕ ಕೋಟಿತೀರ್ಥಕ್ಕೆ ತೆರಳಿ ಇಲ್ಲಿನ ಪಶ್ಚಿಮ ಭಾಗದ ತೀರ್ಥಕಟ್ಟೆಯಲ್ಲಿ ಚಿತ್ತೈಯಿಸಿತು. ಇಲ್ಲಿ ಅವಭೃತಾಂಗ, ಪುಣ್ಯಾಹ, ವಾರುಣ ಹವನ ಪೂಜೆ ನಡೆದ ನಂತರ ಒಂಭತ್ತು ದಿನಗಳ ಕಾಲ ದೈವಿಕ ಕಾರ್ಯದಲ್ಲಿ ಭಾಗವಹಿಸಿದ ಅರ್ಚಕರು ಕೋಟಿತೀರ್ಥದಲ್ಲಿ ಸ್ನಾನ ಮಾಡಿ ಕಟ್ಟಿದ ಕಂಕಣ ತೆಗೆದು ಪೂಜೆ ನೆರವೇರಿಸಿದ ಬಳಿಕ ಜಲಾನಯನೋತ್ಸವ ಅಂದರೆ ಶ್ರೀದೇವರು ತೆಪ್ಪದಲ್ಲಿ ವಿರಾಜಮಾನರಾಗಿ ಕೋಟಿತೀರ್ಥದ ಮಧ್ಯಭಾಗದಲ್ಲಿರುವ ಕೋಟೇಶ್ವರನಿಗೆ ಪ್ರದಕ್ಷಿಣೆ (ಸುತ್ತುಹಾಕಿ) ಬಳಿಕ ಶ್ರೀದೇವರ ಉತ್ಸವ ಮಂದಿರಕ್ಕೆ ಮರಳಿತು. ಯಾಗಶಾಲೆಯಲ್ಲಿ ಶಿವರಾತ್ರಿ ಪ್ರಾರಂಭದ ದಿನ ಬಿತ್ತಿದ ನವಧಾನ್ಯಗಳಿಂದ ಹೊರ ಬಂದ ಅಂಕುರವನ್ನು (ಮೊಳಕೆ) ಸಾರ್ವಭೌಮನಿಗೆ ಸಮರ್ಪಿಸಿ ಮಹಾಪೂಜೆ ನೆರವೇರಿಸಿದ ಬಳಿಕ ಅಂಕುರ ಪ್ರಸಾದವನ್ನ ಭಕ್ತರಿಗೆ ನೀಡಲಾಯಿತು. ಮುಖ್ಯ ಅರ್ಚಕ ವೇ. ಅನಂತರಾಜ ಅಡಿ ಪೂಜಾ ಕೈಂಕರ್ಯ ನೆರವೇರಿಸಿದರು.ಮಂದಿರದ ಮೇಲುಸ್ತುವಾರಿ ಸಮಿತಿ ನೇತೃತ್ವದಲ್ಲಿ ನಡೆದ ದೈವಿಕ ಮಹೋತ್ಸವದಲ್ಲಿ ಸಮಿತಿ ಸದಸ್ಯರು, ವ್ಯವಸ್ಥಾಪಕರು, ಸಿಬ್ಬಂದಿ, ಅರ್ಚಕವೃಂದ, ಉಪಾಧಿವಂತರು, ಎಲ್ಲ ಸಮಾಜದವರು ಪಾಲ್ಗೊಂಡಿದ್ದರು. ಕೋಟಿತೀರ್ಥ ಪಶ್ಚಿಮ ಭಾಗದಲ್ಲಿ ನಡೆದ ಅವಬೃತ ಮಹೋತ್ಸವ ವೇ. ಶಿವರಾರಮ ಮಯ್ಯರ್ ನೇತೃತ್ವದಲ್ಲಿ ನಡೆಯಿತು.
ಕೃತಜ್ಞತೆ: ನವದಿನಗಳ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡಿ ತೆರಳಿದ್ದು, ಈ ವೇಳೆ ಸೂಕ್ತ ಬಂದೂಬಸ್ತ್ ಕಲ್ಪಿಸಿದ್ದ ಪೊಲೀಸ್ ಇಲಾಖೆ, ಆರೋಗ್ಯ, ಕಂದಾಯ, ಲೋಕೋಪಯೋಗಿ ಹಾಗೂ ಇತರೆ ಎಲ್ಲ ಇಲಾಖೆ, ದೇವಾಲಯದ ವ್ಯವಸ್ಥಾಪಕರು, ಸಮಿತಿ ಸದಸ್ಯರು, ಅರ್ಚಕವೃಂದ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ದೇವಾಲಯದ ಆಡಳಿತ ಕೃತಜ್ಞತೆ ಸಲ್ಲಿಸಿದೆ.