ಪ್ರಾಚೀನ ಕಾವ್ಯಗಳನ್ನು ಓದುಗಬ್ಬ ಪಾಡುಗಬ್ಬಗಳಾಗಿ ನಮ್ಮ ಪರಂಪರೆ ಕಟ್ಟಿಕೊಟ್ಟಿದೆ. ಚಂಪೂ ಕಾವ್ಯಗಳು ಓದುಗಬ್ಬಗಳಾಗಿದ್ದು ರಾಗತಾಳ ಬದ್ಧವಾಗಿ, ಕಬ್ಬವಾಕ್ಯ ನಿಯಮಗಳೊಂದಿಗೆ ಗಮಕ ಕ್ರಮದಲ್ಲಿ ವಾಚಿಸಿದಾಗ ಕಾವ್ಯ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ವಿಶ್ರಾಂತ ಪ್ರಾಂಶುಪಾಲ, ತುಳು-ಕನ್ನಡ ಭಾಷಾ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣುಭಟ್ ಹೇಳಿದರು.
ಉಡುಪಿ: ಪ್ರಾಚೀನ ಕಾವ್ಯಗಳನ್ನು ಓದುಗಬ್ಬ ಪಾಡುಗಬ್ಬಗಳಾಗಿ ನಮ್ಮ ಪರಂಪರೆ ಕಟ್ಟಿಕೊಟ್ಟಿದೆ. ಚಂಪೂ ಕಾವ್ಯಗಳು ಓದುಗಬ್ಬಗಳಾಗಿದ್ದು ರಾಗತಾಳ ಬದ್ಧವಾಗಿ, ಕಬ್ಬವಾಕ್ಯ ನಿಯಮಗಳೊಂದಿಗೆ ಗಮಕ ಕ್ರಮದಲ್ಲಿ ವಾಚಿಸಿದಾಗ ಕಾವ್ಯ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ವಿಶ್ರಾಂತ ಪ್ರಾಂಶುಪಾಲ, ತುಳು-ಕನ್ನಡ ಭಾಷಾ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣುಭಟ್ ಹೇಳಿದರು.
ಅವರು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಗದಾಯುದ್ಧ ಸಂಗ್ರಹಂ-ಭೀಷ್ಮವಚನಂ ವಿಷಯ ಕುರಿತು ಉಪನ್ಯಾಸ ನೀಡಿದರು. ರನ್ನನ ಒಂದು ಕೃತಿ ಸಾಹಸ ಭೀಮ ವಿಜಯವಾಗಿದ್ದು ಗದಾಯುದ್ಧ ಅದರ ಜನಪ್ರಿಯ ಹೆಸರು. ಜನಪ್ರಿಯತೆಯ ಹೆಸರಿನಲ್ಲಿ ಪ್ರಾಚೀನ ಕಾವ್ಯಗಳು ನಾಮಾಂತರಗೊಂಡು ಜನಮಾನಸದಲ್ಲಿ ಬೇರೂರಿವೆ. ರನ್ನನ ಉದ್ದೇಶ ಭೀಮ-ದುರ್ಯೋಧನರ ಗದಾಯುದ್ಧ ಪ್ರಸಂಗದ ವರ್ಣನೆಯಾದರೂ, ಇಡೀ ಮಹಾಭಾರತದ ಕತೆಯನ್ನು ಸಿಂಹಾವಲೋಕನ ತಂತ್ರದ ಮೂಲಕ ಪರಿಣಾಮಕಾರಿಯಾಗಿ ಸಹೃದಯರ ಕಣ್ಣಿಗೆ ಕಟ್ಟಿಕೊಟ್ಟ ಶಕ್ತಿಕವಿ ರನ್ನ ಎಂದವರು ವಿಶ್ಲೇಷಿಸಿದರು. ಪ್ರಾಚೀನ ಕಾವ್ಯಗಳನ್ನು ಅರ್ಥಗರ್ಭಿತವಾಗಿ ಮನನ ಮಾಡಿಕೊಂಡರೆ ಅದು ಸುಲಿದ ಬಾಳೆಯ ಹಣ್ಣಿನಂತಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಇದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ಸಲಹೆ ನೀಡಿದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ ಭಟ್, ಡಾ. ರಘು ನಾಯ್ಕ, ಡಾ. ಶ್ರೀದೇವಿ ಕೆ, ಡಾ. ದತ್ತಕುಮಾರ್, ಉಪನ್ಯಾಸಕರಾದ ಭವ್ಯಾ, ಅರ್ಚನಾ, ಸಂಧ್ಯಾರಾಣಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಮಾರುತಿ ಸ್ವಾಗತಿಸಿದರು. ಕನ್ನಡ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ರತ್ನಮಾಲಾ ವಂದಿಸಿದರು, ಉಪನ್ಯಾಸಕಿ ಶರಿತಾ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.