ಕನ್ನಡಪ್ರಭ ವಾರ್ತೆ ತಾಳಿಕೋಟೆ
ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಖಾಸ್ಗತೇಶ್ವರರ ಹಾಗೂ ವಿರಕ್ತಶ್ರೀಗಳ ಮಹಾ ಗದ್ದುಗೆಗೆ ಹಾಗೂ ಪ್ರಭು ಶ್ರೀರಾಮಚಂದ್ರನ ಭಾವಚಿತ್ರಕ್ಕೆ ಬಾಲಶಿವಯೋಗಿ ಸಿದ್ದಲಿಂಗದೇವರು ವಿಶೇಷ ಪೂಜೆ ಸಲ್ಲಿಸಿದರು. ಅಂದರೆ ಡೋಣಿ ಹನುಮಾನ ಮಂದಿರದ ಹತ್ತಿರವಿರುವ ಪುರಾತನ ಶ್ರೀರಾಮ ಮಂದಿರದಲ್ಲಿ, ಗ್ರಾಮದೇವತೆ(ದ್ಯಾವಮ್ಮದೇವಿ) ದೇವಸ್ಥಾನ, ಶಿವಭವಾನಿ ಮಂದಿರ, ಭಾವಸಾರ ಕ್ಷತ್ರೀಯ ಸಮಾಜದ ಅಂಬಾಭವಾನಿ ಮಂದಿರ, ಕಾಳಿಕಾದೇವಿ ಮಂದಿರ, ರಜಪೂತ ಸಮಾಜ ಬಾಂಧವರ ಅಂಬಾಭವಾನಿ ಮಂದಿರ, ತಿಲಕ ರಸ್ತೆಯ ಹಿಂದು ಮಹಾ ಗಣಪತಿ, ಶ್ರೀದೇವಿ ಮಾತೃಮಂಡಳಿಯ ಸ್ಥಳದಲ್ಲಿ ಒಳಗೊಂಡು ಅನೇಕ ದೇವಸ್ಥಾನಗಳಲ್ಲಿ ಶ್ರೀರಾಮ ಮಂತ್ರ ಪಠಣದೊಂದಿಗೆ ಶ್ರೀರಾಮ ತಾರಕ ಹೋಮ ಕಾರ್ಯಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಭಕ್ತಾದಿಗಳು ಶ್ರೀರಾಮನಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಇದು ಅಲ್ಲದೇ ಕೆಲವೆಡೆ ಶ್ರೀರಾಮ-ಜಯರಾಮ ಎಂಬ ಘೋಷವ್ಯಾಕ್ಯಗಳು ಮೊಳಗಿದ್ದು ಕಂಡುಬಂದಿತು.
ಎಲ್ಲೆಡೆ ಪ್ರಸಾದದ ವ್ಯವಸ್ಥೆ:ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಪಟ್ಟಣದ ಭಹುತೇಕ ದೇವಸ್ಥಾನಗಳಲ್ಲಿ ಮಹಾ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತಲ್ಲದೇ ಇದರಲ್ಲಿ ವಿಶೇಷವಾಗಿ ಸಿಹಿ ಪದಾರ್ಥಗಳಿಗೆ ಹೆಚ್ಚಿಗೆ ಒತ್ತು ನೀಡುವುದರೊಂದಿಗೆ ಕರಿಗಡಬು, ಸೀರಾ, ಫಲಾವು, ಬುಂಧೆ, ಒಳಗೊಂಡಂತೆ ಬಾಳೆ ಹಣ್ಣು ಅಲ್ಲದೇ ಇನ್ನಿತರ ಪ್ರಸಾದದ ರೂಪದಲ್ಲಿ ಭಕ್ತಾಧಿಗಳಿಗೆ ನೀಡುತ್ತಿರುವುದು ಕಂಡು ಬಂದಿತು.
ಪಟ್ಟಣದ ಪ್ರತಿಯೊಬ್ಬರು ಮನೆಯ ಜಗಲಿಯ ಮೇಲೆ ಇಟ್ಟ ಮಂತ್ರಾಕ್ಷತೆಯ ಜೊತೆಗೆ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಸಂಜೆ ತಮ್ಮ ತಮ್ಮ ಮನೆಗಳ ಮುಂದೆ ದೀಪಗಳನ್ನು ಹಚ್ಚಿ ಸಂಭ್ರಮಿಸಿದರೇ ಇನ್ನೂ ದೇವಸ್ಥಾನಗಳ ಮುಂದೆ ಮಹಿಳೆಯರ ಸಾಲು ಗಟ್ಟಿ ದೀಪಬೆಳಗಿಸುವುದರೊಂದಿಗೆ ಸಂಭ್ರಮಿಸುತ್ತಿದ್ದು ಕಂಡುಬಂದಿತು. ಅದರಂತೆ ಯುವಕರು ಕೂಡಾ ದೇವಸ್ಥಾನಗಳ ಮುಂದೆ ಮತ್ತು ತಮ್ಮ ಬಡಾವಣೆಗಳಲ್ಲಿ ಶ್ರೀರಾಮಲಲ್ಲಾ ಭಕ್ತಿಯ ಹಾಡಿಗೆ ತಕ್ಕಂತೆ ಹೆಜ್ಜೆಹಾಕಿ ಸಂಭ್ರಮಿಸಿದರು. ನಂತರ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ದೀಪಾವಳಿ ಸಂಭ್ರಮದಂತೆ ಪಟಾಕ್ಷಿಗಳನ್ನು ಹಚ್ಚುವುದರೊಂದಿಗೆ ಖುಷಿಪಟ್ಟರು.
ಶ್ರೀರಾಮ ಮಂತ್ರ ತಾರಕ ಹೋಮ ಕಾರ್ಯಕ್ರಮದಲ್ಲಿ ಪೊರೋಹಿತ ವೃಂದದವರು ಪಾಲ್ಗೊಳ್ಳುವುದರೊಂದಿಗೆ ಹೋಮ ಕಾರ್ಯಕ್ರಮ ನೆರವೇರಿಸಿ ಭಕ್ತಾಧಿಗಳಿಗೆ ಶ್ರೀರಾಮನ ಮಂತ್ರಪಠಣವನ್ನೂ ಕೂಡಾ ಮಾಡಿಸಿದರು.ಕೆಲವು ದೇವಸ್ಥಾನಗಳಲ್ಲಿ ಟಿವಿ ಮೂಲಕ ಶ್ರೀರಾಮ ಮೂರ್ತಿಯ ಪ್ರತಿಷ್ಠಾಪನೆಯ ನೇರ ಪ್ರಸಾರ ವೀಕ್ಷಿಸಲು ಭಕ್ತರಿಗೆ ಅನುವು ಮಾಡಿಕೊಡಲಾಗಿತ್ತಲ್ಲದೇ ಎಲ್ಲರ ಮನೆ ಮಗಳಲ್ಲಿ ಶ್ರೀರಾಮ-ಜಯರಾಮ, ಭಜರಂಗ ಬಲಿ ಎಂಬ ಘೋಷವಾಖ್ಯಗಳು ಮೊಳಗಿದ್ದು ಕಂಡು ಬಂದಿತು.