ಕನ್ನಡಪ್ರಭ ವಾರ್ತೆ ಕಲಬುರಗಿ
ಶನಿವಾರ ಅವರ ಶ್ವಾಸಕೋಶದಲ್ಲಿ ಸೋಂಕು ಕಂಡಿದ್ದರಿಂದ ತಕ್ಷಣ ಕುಟುಂಬದವರು ಡಾ। ಅಪ್ಪಾ ಅವರನ್ನು ಕಲಬುರಗಿಯ ಚಿರಾಯು ಆಸ್ಪತ್ರೆಗೆ ದಾಖಲಿಸಿದ್ದು, ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ಮುಂದುವರಿದಿದೆ. ಅಪ್ಪಾಜಿಯವರು ನ್ಯೂಮೇನಿಯಾದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾಹಿತಿ ನೀಡಿದ್ದಾರೆ.
ಡಾ.ಮಂಜುನಾಥ ದೋಶೆಟ್ಟಿ ಸಲಹೆಯಂತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಇನ್ನೊಂದು ದಿನ ಆಸ್ಪತ್ರೆಯಲ್ಲಿರಿಸಿಕೊಂಡು ಮನೆಗೆ ಕಳುಹಿಸುವುದಾಗಿ ವೈದ್ಯರು ಹೇಳಿದ್ದಾರೆ. ಅಪ್ಪಾಜಿ ಶತಾಯುಷಿಗಳಾಗಲಿದ್ದು, ಯಾರೂ ಆತಂಕ ಪಡಬಾರದು ಎಂದು ಬಸವರಾಜ ದೇಶಮುಖ ಮನವಿ ಮಾಡಿದ್ದಾರೆ.ಮಾತೋಶ್ರೀ ದಾಕ್ಷಾಯಾಣಿ ಅವ್ವಾಜಿ ಸೇರಿದಂತೆ ಶರಣಬಸವ ವಿವಿಯ ಎಲ್ಲಾ ಹಿರಿಯ ಅಧಿಕಾರಿಗಳು, ಕುಟುಂಬದ ಸದಸ್ಯರೆಲ್ಲರೂ ಚಿರಾಯು ಆಸ್ಪತ್ರೆಯಲ್ಲಿಯೇ ಇದ್ದಾರೆ. ಕಲಬುರಗಿ ಮಹಾನಗರ ಪೊಲೀಸ್ ಕಮೀಷನರ್ ಡಾ। ಶರಣಪ್ಪ ಢಗೆ ಅವರು, ಚಿರಾಯು ಆಸ್ಪತ್ರೆಗೆ ಭೇಟಿ ನೀಡಿ ಶರಣಬಸವಪ್ಪ ಅಪ್ಪಾಜಿಯವರ ಆರೋಗ್ಯ ವಿಚಾರಿಸಿದ್ದಾರೆ.