ಸದ್ಯ ಕಾವೇರಿಗಾಗಿ ಬಂದ್ ಮಾಡುವ ಹಂತಕ್ಕೆ ಹೋಗಿದ್ದು, ಅದೇ ರೀತಿ ಮಹದಾಯಿ ವಿಚಾರದಲ್ಲೂ ಸರ್ಕಾರ ಗಂಭೀರವಾಗಿ ನಡೆದುಕೊಳ್ಳಬೇಕು. ಮಹದಾಯಿ ಪ್ರಕರಣ ಸದ್ಯ ನ್ಯಾಯಾಲಯದಲ್ಲಿದ್ದು, ವನ್ಯಜೀವಿ ಮಂಡಳಿಗೆ ಸಂಬಂಧಿಸಿದ ವಿಚಾರವೂ ಇದೆ.
ಧಾರವಾಡ:
ಕಾವೇರಿ ನೀರಿನ ವಿಚಾರವಾಗಿ ರಾಜ್ಯ ಸರ್ಕಾರ ನಡೆದುಕೊಳ್ಳುವ ರೀತಿಯಲ್ಲಿ ಉತ್ತರ ಕರ್ನಾಟಕ ಭಾಗದ ಮಹದಾಯಿ ನದಿ ನೀರಿನ ವಿಚಾರದಲ್ಲೂ ಗಂಭೀರತೆ ಪ್ರದರ್ಶಿಸಬೇಕೆಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಮಧು ಬಂಗಾರಪ್ಪ ಅವರದ್ದು ಎನ್ನಲಾಗದ ಆಡಿಯೋ, ಜೆಡಿಎಸ್-ಬಿಜೆಪಿ ನಡುವೆ ಸಮನ್ವಯದ ಕೊರತೆ ಹಾಗೂ ಕಾವೇರಿ-ಮಹದಾಯಿ ನದಿ ನೀರಿನ ಕುರಿತಾಗಿ ಹಲವು ವಿಚಾರಗಳನ್ನು ಬೆಲ್ಲದ ಅವರು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸದ್ಯ ಕಾವೇರಿಗಾಗಿ ಬಂದ್ ಮಾಡುವ ಹಂತಕ್ಕೆ ಹೋಗಿದ್ದು, ಅದೇ ರೀತಿ ಮಹದಾಯಿ ವಿಚಾರದಲ್ಲೂ ಸರ್ಕಾರ ಗಂಭೀರವಾಗಿ ನಡೆದುಕೊಳ್ಳಬೇಕು. ಮಹದಾಯಿ ಪ್ರಕರಣ ಸದ್ಯ ನ್ಯಾಯಾಲಯದಲ್ಲಿದ್ದು, ವನ್ಯಜೀವಿ ಮಂಡಳಿಗೆ ಸಂಬಂಧಿಸಿದ ವಿಚಾರವೂ ಇದೆ. ಕಾವೇರಿ ವಿಚಾರದಲ್ಲಿ ಸರ್ಕಾರ ವಕೀಲರನ್ನು ನಿಯೋಜಿಸುವಂತೆ ಮಹದಾಯಿ ವಿಚಾರದಲ್ಲೂ ಸಮರ್ಥ ವಕೀಲರನ್ನು ನೇಮಿಸಬೇಕು. ಸಭೆಗಳಿಗೆ ಕೇವಲ ಅಧಿಕಾರಿಗಳನ್ನು ಕಳುಹಿಸದೇ ಮುಖ್ಯಮಂತ್ರಿ ಹಾಗೂ ಸಚಿವರು ಖುದ್ದಾಗಿ ಭಾಗವಹಿಸಬೇಕು ಎಂದು ಒತ್ತಾಯಿಸಿದರು.
ಬೇಡವೇ ಬೇಡ ನಾಗೇಂದ್ರ:
ಇನ್ನು, ರಾಮನಗರದಿಂದ ಆರಂಭವಾದ ಬಿಡದಿ ಹೋರಾಟದಲ್ಲಿ ಆರ್. ಅಶೋಕ ಹಾಗೂ ವಿಜಯೇಂದ್ರ ಭಾಗವಹಿಸಿದ್ದು, ಅಧಿವೇಶನದಲ್ಲೂ ನಡೆಯುವ ಹೋರಾಟದಲ್ಲೂ ತಾವೆಲ್ಲರೂ ಭಾಗವಹಿಸುವುದಾಗಿ ಹೇಳಿದರು.
ಸಚಿವ ನಾಗೇಂದ್ರ ರಾಜೀನಾಮೆಗೆ ಆರ್. ಅಶೋಕ ಆಗ್ರಹಿಸಿರುವುದು ಸರಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲೇ ಹಣದ ಅವ್ಯವಹಾರದ ಬಗ್ಗೆ ಚರ್ಚೆಯಾಗಿದೆ. ಈ ಪ್ರಕರಣದಲ್ಲಿ ನಾಗೇಂದ್ರ ಜೈಲಿಗೂ ಹೋಗಿದ್ದರು. ಇಂತಹ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸಬಾರದು. ಆದ್ದರಿಂದ ಅವರನ್ನು ಸಚಿವ ಸಂಪುಟದಿಂದ ಕೆಳಗಿಳಿಸುವವರೆಗೆ ಸದನದ ಕಲಾಪ ನಡೆಸಲು ಬಿಡುವುದಿಲ್ಲ ಎಂದು ಬೆಲ್ಲದ ಸಹ ಎಚ್ಚರಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು, ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಬೆಲ್ಲದ ಉತ್ತರಿಸಿದರು.
ಕಲಾಭವನಕ್ಕೆ ಅರವಿಂದ ಬೆಲ್ಲದ ಭೇಟಿ:
ಧಾರವಾಡ-ಕಲಾಭವನದ ಮೇಲ್ಚಾವಣಿ ಕಾಮಗಾರಿ ಪರಿಶೀಲಿಸಿದ ಶಾಸಕ ಅರವಿಂದ ಬೆಲ್ಲದ, ಕಲಾಭವನದಲ್ಲಿ ಕೈಗೊಂಡಿರುವ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸ್ವರ ಸಾಮ್ರಾಟ್ ಮಲ್ಲಿಕಾರ್ಜುನ ಮನಸೂರ ಟ್ರಸ್ಟ್ ಅಧ್ಯಕ್ಷ ಪಂ. ಎಂ. ವೆಂಕಟೇಶಕುಮಾರ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಪಾಲಿಕೆ ಸದಸ್ಯ ಸುರೇಶ ಬೇದರೆ ಸೇರಿದಂತೆ ಇತರರಿದ್ದರು. ಇತ್ತೀಚಿನ ಸಭೆಯಲ್ಲಿ ಕಲಾಭವನವನ್ನು ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ನಿರ್ವಹಣೆಗಾಗಿ ಕೊಡಬೇಕೆಂಬ ಒತ್ತಾಯವೂ ಕೇಳಿ ಬಂದಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.