ಮಹದಾಯಿ, ಕಳಸಾ ಬಂಡೂರಿ ಕಾಮಗಾರಿ ಶೀಘ್ರ ಆರಂಭಿಸಿ

KannadaprabhaNewsNetwork | Published : Feb 6, 2025 11:48 PM

ಸಾರಾಂಶ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಹದಾಯಿ ಯೋಜನೆಗೆ ಪರಿಸರ ಮತ್ತು ವನ್ಯಜೀವಿ ಮಂಡಳಿಯಿಂದ ಈ ತಿಂಗಳೊಳಗೆ ಅನುಮತಿ ಕೊಡಿಸದಿದ್ದರೆ ಅವರ ಹುಬ್ಬಳ್ಳಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಹುಬ್ಬಳ್ಳಿ:

ಮಹದಾಯಿ, ಕಳಸಾ-ಬಂಡೂರಿ ಯೋಜನೆಯ ಕಾಮಗಾರಿ ಆರಂಭಿಸಲು ಕೇಂದ್ರ ಪರಿಸರ ಮತ್ತು ವನ್ಯಜೀವಿ ಇಲಾಖೆಯಿಂದ ಪರವಾನಗಿ ನೀಡಲು ಒತ್ತಾಯಿಸಿ ಗುರುವಾರ ರೈತ ಸೇನಾ ಕರ್ನಾಟಕ ಸಂಘಟನೆಯಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಮೂರುಸಾವಿರ ಮಠದ ಆವರಣದಿಂದ ಆರಂಭವಾದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಗೆ ತೆರಳಿತು. ಅಲ್ಲಿ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಹದಾಯಿ ಯೋಜನೆಗೆ ಪರಿಸರ ಮತ್ತು ವನ್ಯಜೀವಿ ಮಂಡಳಿಯಿಂದ ಈ ತಿಂಗಳೊಳಗೆ ಅನುಮತಿ ಕೊಡಿಸದಿದ್ದರೆ ಅವರ ಹುಬ್ಬಳ್ಳಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸಚಿವ ಜೋಶಿ ಅವರು ಈ ವರೆಗೂ ಒಂದೂ ಸಭೆ ನಡೆಸಿಲ್ಲ. ಕಾನೂನು ತೊಡಕು ನಿವಾರಿಸಲು ಶ್ರಮಿಸಿಲ್ಲ. ಅಧಿಕಾರಿಗಳಿಂದ ಎಲ್ಲಿ ತಪ್ಪಾಗಿದೆ ಎಂಬುದನ್ನು ತಿಳಿದು ಅದನ್ನು ಸರಿಪಡಿಸುವ ಕೆಲಸ ಮಾಡಿಲ್ಲ. ಯೋಜನೆ ಅನುಷ್ಠಾನವಾದರೆ ಜೋಶಿ ಅವರ ಕ್ಷೇತ್ರಕ್ಕೆ ಹೆಚ್ಚು ನೀರು ಸಿಗುತ್ತದೆ. ಅದನ್ನು ಬಿಟ್ಟು ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಾ ಕಾಲಹರಣ ಮಾಡುವುದು, ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡುವುದನ್ನು ಬಿಡಲಿ ಎಂದರು.

2018ರ ಆ. 14ರಂದು ನ್ಯಾಯಾಧಿಕರಣದ ತೀರ್ಪು ಪ್ರಕಟವಾಗಿದ್ದು, ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಅಲ್ಲದೆ, ಯೋಜನೆಗೆ ಅನುಮೋದನೆ ನೀಡಬೇಕು ಎಂದು ಸುಪ್ರೀಂಕೋರ್ಟ್ 2019ರಲ್ಲಿ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದರೂ, ಪರಿಸರ ಹಾಗೂ ವನ್ಯಜೀವಿಗಳ ಇಲಾಖೆ ಪರವಾನಗಿ ಕೊಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.

ಈ ಹೋರಾಟದಲ್ಲಿ 11 ಜನ ರೈತರು ಪ್ರಾಣ ಬಿಟ್ಟಿದ್ದಾರೆ. ನೂರಾರು ಜನರು ಲಾಟಿ ಏಟು ತಿಂದಿದ್ದಾರೆ. ಆದರೆ, ಕಾಂಗ್ರೆಸ್, ಜೆಡಿಎಸ್‌, ಬಿಜೆಪಿ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ ಎಂದರು. ಕಳಸಾ-ಹಳತಾರ ನಾಲೆ ಪ್ರದೇಶದಲ್ಲಿ ಹುಲಿ ಕಾರಿಡಾರ್ ಇದೆ. ಅಲ್ಲಿ ಯೋಜನೆ ಅನುಷ್ಠಾನ ಮಾಡುವುದು ಕಷ್ಟ ಎಂದು ಸುಳ್ಳು ವರದಿ ನೀಡಲಾಗಿದೆ. ಅಲ್ಲಿ ರೆಸಾರ್ಟ್‌ಗಳನ್ನು ನಿರ್ಮಿಸಲು ಹುಲಿ ಕಾರಿಡಾರ್ ಅಡ್ಡಿ ಆಗಿಲ್ಲವೇ? ವಾಸ್ತವದಲ್ಲಿ ಅಲ್ಲಿ ಹುಲಿ ಕಾರಿಡಾರ್ ಇಲ್ಲ, ಇದು ಯೋಜನೆಗೆ ಅಡ್ಡಗಾಲು ಹಾಕುವ ಷಡ್ಯಂತ್ರ ಎಂದು ಕಿಡಿಕಾರಿದರು.

ಪಂಚಾಯಿತಿ ಕಟ್ಟೆಯಲ್ಲಿ ಕುಳಿತು ನೀರು ಹಂಚಿಕೆ ಮಾಡಿಲ್ಲ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಮಿತಿ ನೀರು ಹಂಚಿಕೆ ಮಾಡಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಗೋವಾ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ರಾಜ್ಯ ಸರ್ಕಾರ ಪರವಾನಗಿ ಪಡೆಯಲು ಪರಿಸರ ಇಲಾಖೆ, ವನ್ಯಜೀವಿ ಇಲಾಖೆಗೆ ಈಗಾಗಲೇ ಅಗತ್ಯ ದಾಖಲೆ ಹಸ್ತಾಂತರಿಸಿದ್ದು, ಕೂಡಲೇ ಪರವಾನಗಿ ನೀಡಬೇಕು ಎಂದರು.

ಈ ವೇಳೆ ಮಲ್ಲಣ್ಣ ಅಲೇಕರ, ಡಿ.ಎ. ನವಲಗುಂದ, ವಿ.ಬಿ. ಹೂಗಾರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

Share this article