ವನ್ಯಜೀವಿ ಮಂಡಳಿಯಿಂದ ಮಹಾದಾಯಿಗೆ ಸಿಗಲಿ ಅನುಮತಿ

KannadaprabhaNewsNetwork |  
Published : Jul 29, 2025, 01:01 AM IST
ಎನ್‌.ಎಚ್‌. ಕೋನರಡ್ಡಿ | Kannada Prabha

ಸಾರಾಂಶ

ಗೋವಾ ಮುಖ್ಯಮಂತ್ರಿಗಳು ಅಧಿಕೃತವಾಗಿ ವಿಧಾನಸಭೆಯಲ್ಲಿ ಮಹದಾಯಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅಲ್ಲಿಯ ಕೇಂದ್ರ ಸಚಿವರು ಯಾವುದೇ ಕಾರಣಕ್ಕಾಗಿ ಈ ಯೋಜನೆ ಜಾರಿಯಾಗಲ್ಲ‌ ಎಂದು ಮಾತು ಕೊಟ್ಟಿರುವ ಬಗ್ಗೆ ಮಾಹಿತಿ ಇದೆ.

ಧಾರವಾಡ: ಮಹದಾಯಿ ನೀರು ಹಂಚಿಕೆ ವಿಚಾರ ಕೊನೆಯ ಹಂತಕ್ಕೆ ಬಂದು ನಿಂತಿದೆ. ವನ್ಯಜೀವಿ ಮಂಡಳಿ ಅನುಮತಿಗಾಗಿ ಕಾಯುತ್ತಿದ್ದು, ಕೇಂದ್ರ ಸರ್ಕಾರ ಈ ಅನುಮತಿ ಕೊಡಬೇಕು ಎಂದು ಶಾಸಕ ಎನ್.ಎಚ್‌. ಕೋನರಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾ ಮುಖ್ಯಮಂತ್ರಿಗಳು ಅಧಿಕೃತವಾಗಿ ವಿಧಾನಸಭೆಯಲ್ಲಿ ಮಹದಾಯಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅಲ್ಲಿಯ ಕೇಂದ್ರ ಸಚಿವರು ಯಾವುದೇ ಕಾರಣಕ್ಕಾಗಿ ಈ ಯೋಜನೆ ಜಾರಿಯಾಗಲ್ಲ‌ ಎಂದು ಮಾತು ಕೊಟ್ಟಿರುವ ಬಗ್ಗೆ ಮಾಹಿತಿ ಇದೆ. ನ್ಯಾಯಾಧೀಕರಣದಲ್ಲಿ ಈ‌ ಬಗ್ಗೆ ವಾದ ಆಗಿದೆ. ಅದರ ನಂತರ ತೀರ್ಪು ಬಂದಿದೆ. ಆದೇಶಕ್ಕೆ ಎಲ್ಲರೂ ತಲೆ‌ಬಾಗಬೇಕು. ಗೋವಾ‌ ಮುಖ್ಯಮಂತ್ರಿಗಳು ಯಾವ ಭರವಸೆ ಮೇಲೆ ಈ ಹೇಳಿಕೆ ನೀಡುತ್ತಾರೆ ಎಂದು ಕೋನರಡ್ಡಿ ಪ್ರಶ್ನಿಸಿದರು.

ಮಹದಾಯಿ ಬಗ್ಗೆ ಸಂಸದ ಬೊಮ್ಮಾಯಿ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕೋನರಡ್ಡಿ, ಅವರು ಹಿಂದೆ ಜಲ ಸಂಪನ್ಮೂಲ ಇಲಾಖೆ ಸಚಿವರಾಗಿದ್ದು, ಅನುಭವ ಇದ್ದವರು. ಅವರ ಬಗ್ಗೆ ನಮಗೆ ಗೌರವ ಇದೆ. ಸದ್ಯ ವಿರೋಧ ಪಕ್ಷದಲ್ಲಿದ್ದು, ರಾಜ್ಯ ಸರ್ಕಾರದ ವಿರುದ್ಧ ಟೀಕೆ ಸಾಮಾನ್ಯ. ಆದರೆ, ರಾಜ್ಯ ಸರ್ಕಾರ ಮಹಾದಾಯಿ ವಿಷಯದಲ್ಲಿ ಜಾರಿ ಮಾಡಲು ಉತ್ಸುಕವಾಗಿದೆ. ಮಹದಾಯಿ ನ್ಯಾಯಾಧೀಕರಣ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಿದೆ. ಈ ಬಗ್ಗೆ ಅಧಿಸೂಚನೆ ಸಹ ಹೊರಡಿಸಿದೆ. ಆದರೆ, ವನ್ಯಜೀವಿ ಮಂಡಳಿ ಅಡ್ಡಿಯಾಗಿದೆ ಎಂದರು.

ನಾವು ಗೋವಾಗೆ ಅಕಸ್ಮಾತ್ ಹಾಲು, ತರಕಾರಿ ಕೊಡದೇ ಇದ್ದರೆ ಅವರ ಗತಿ ಎಲ್ಲಿಗೆ ಬರುತ್ತದೆ? ಎಂದು ಪ್ರಶ್ನಿಸಿದ ಕೋನರಡ್ಡಿ, ಕರ್ನಾಟಕವು ಬೇರೆ ಬೇರೆ ರಾಜ್ಯಗಳಿಗೆ ಕುಡಿಯಲು‌ ನೀರು ಕೊಡುತ್ತಿದೆ. ಯಾವ ರಾಜ್ಯಕ್ಕೂ ನಾವು ನೀರು ಕೊಡುವುದಿಲ್ಲ ಎಂದಿಲ್ಲ. ನಾನು ಕೂಡಾ ಗೋವಾದ ತಮ್ನಾರ್ ಯೋಜನೆಗೆ ತಡೆ ಒಡ್ಡಿ ಎಂದು ಹೇಳಿದ್ದೇನೆ. ಎಲ್ಲಿಯ ವರೆಗೆ ವನ್ಯಜೀವಿ ಮಂಡಳಿ ಅನುಮತಿ ಕೊಡಲ್ಲವೋ ಅಲ್ಲಿಯ ವರೆಗೆ ತಮ್ನಾರ ಯೋಜನೆಗೆ ತಡೆಯೊಡ್ಡಿ ಎಂದಿದ್ದೇನೆ ಎಂದರು.

ಮಂತ್ರಿ ಮಂಡಲ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಈ ವಿಚಾರವಾಗಿ ಏನೂ ಮಾತನಾಡದಂತೆ ಹೈಕಮಾಂಡ್ ಸೂಚನೆ ನೀಡಿದೆ. ಅದನ್ನು ನಾವೆಲ್ಲರೂ ಪಾಲನೆ ಮಾಡುತ್ತಿದ್ದೇವೆ. ಉಪಮುಖ್ಯಮಂತ್ರಿ ಡಿ‌.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಗಳ ಸ್ಥಾನ ಖಾಲಿ ಇಲ್ಲ ಎಂದಿದ್ದಾರೆ ಎಂದರು.

ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆಗೆ ಕೇಂದ್ರದ ಅನೋದನೆ ವಿಚಾರವಾಗಿ ಮಾತನಾಡಿದ ಕೋನರಡ್ಡಿ, ಈ ಯೋಜನೆ ಜಾರಿಗೆ ಸ್ವಾಗತ ಮಾಡುತ್ತೇನೆ. ರಾಜ್ಯಕ್ಕೆ ಬರುವ ಯೋಜನೆಗೆ ಬೇಡ ಎನ್ನಲಾಗುವುದಿಲ್ಲ ಎಂದರು.

PREV

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು