ಮಹದಾಯಿ: ಸಾವಂತ ಹೇಳಿಕೆಗೆ ಬಿಜೆಪಿ ನಿಲುವೇನು?: ಸಲೀಂ

KannadaprabhaNewsNetwork |  
Published : Jul 25, 2025, 12:31 AM IST
ಸಲೀಂಅಹ್ಮದ | Kannada Prabha

ಸಾರಾಂಶ

ಮಹದಾಯಿಗೆ ಕ್ಲಿಯರನ್ಸ್ ಕೊಡಿಸಿ, ಯೋಜನೆ ಜಾರಿ ಮಾಡಿ ವಿಜಯೋತ್ಸವ ಮಾಡುತ್ತೇವೆ. ಅದಕ್ಕೆ ಕಾಂಗ್ರೆಸ್‌ನವರನ್ನು ಕರೆಯುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದರು. ಎಲ್ಲಿದೆ ಕ್ಲಿಯರನ್ಸ್? ಕ್ಲಿಯರನ್ಸ್ ಕೊಡಿಸುವ ಶಕ್ತಿ ಜೋಶಿ ಅವರಿಗೆ ಇಲ್ಲವೇ?.

ಹುಬ್ಬಳ್ಳಿ: ಮಹದಾಯಿ ನೀರನ್ನು ಕರ್ನಾಟಕಕ್ಕೆ ಕೊಡುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅಲ್ಲಿನ ಸದನದಲ್ಲೇ ಹೇಳಿಕೆ ನೀಡಿದ್ದಾರೆ. ಇದು ಅತ್ಯಂತ ಖಂಡನೀಯ. ಈ ಬಗ್ಗೆ ಕರ್ನಾಟಕ ಬಿಜೆಪಿ, ಕೇಂದ್ರ ಸರ್ಕಾರ ತಮ್ಮ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈ ಬಗ್ಗೆ ಏನು ಹೇಳುತ್ತಾರೆ ಎಂದು ವಿಧಾನಪರಿಷತ್‌ ಮುಖ್ಯಸಚೇತಕ ಸಲೀಂ ಅಹ್ಮದ ಪ್ರಶ್ನಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋವಾ ಮುಖ್ಯಮಂತ್ರಿ ಈ ರೀತಿ ಹೇಳಿಕೆ ಕೊಡಬೇಕೆಂದರೆ ಅದು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಗೊತ್ತಿಲ್ಲದೇ ಇರುತ್ತದೆಯೇ? ಎಂದು ಪ್ರಶ್ನಿಸಿದರು.

ಅಲ್ಲದೇ, ಮಹದಾಯಿಗೆ ಕ್ಲಿಯರನ್ಸ್ ಕೊಡಿಸಿ, ಯೋಜನೆ ಜಾರಿ ಮಾಡಿ ವಿಜಯೋತ್ಸವ ಮಾಡುತ್ತೇವೆ. ಅದಕ್ಕೆ ಕಾಂಗ್ರೆಸ್‌ನವರನ್ನು ಕರೆಯುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದರು. ಎಲ್ಲಿದೆ ಕ್ಲಿಯರನ್ಸ್? ಕ್ಲಿಯರನ್ಸ್ ಕೊಡಿಸುವ ಶಕ್ತಿ ಜೋಶಿ ಅವರಿಗೆ ಇಲ್ಲವೇ? ಎಂದು ಕಿಡಿಕಾರಿದರು.

ಮಹದಾಯಿ ವಿಚಾರದಲ್ಲಿ ರಾಜ್ಯದ ಬಿಜೆಪಿ ಸಂಸದರು ಧ್ವನಿ ಎತ್ತಬೇಕು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲರೂ ಗೋವಾ ಸಿಎಂ ಹೇಳಿಕೆ ಖಂಡಿಸಬೇಕು. ತಮ್ಮ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಮಹದಾಯಿ ವಿಷಯವಾಗಿ ಕಾಂಗ್ರೆಸ್‌ ಹೋರಾಟ ನಡೆಸಲಿದೆ. ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗುವ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ದೇಶದಲ್ಲಿ ಬೆಲೆ ಏರಿಕೆ ನಿಯಂತ್ರಣ ಮಾಡಲು ಆಗುತ್ತಿಲ್ಲ. ರಾಜ್ಯದ ತೆರಿಗೆ ಪಾಲು ಕೊಡಿ ಎಂದರೆ ನ್ಯಾಯ ಕೊಡುವ ಕೆಲಸ ಕೇಂದ್ರದಿಂದ ಆಗುತ್ತಿಲ್ಲ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯಿಂದ ಜನರು ಭ್ರಮನಿರಸನಗೊಂಡಿದ್ದಾರೆ ಎಂದು ಆರೋಪಿಸಿದರು.

ವಿರೋಧ ಪಕ್ಷದ ನಾಯಕರನ್ನು ಹಣಿಯಲು ಇ.ಡಿ, ಸಿಬಿಐ ಸೇರಿದಂತೆ ಕೇಂದ್ರದ ಹಲವು ಸಂಸ್ಥೆಗಳನ್ನು ಬಿಜೆಪಿ ಸರ್ಕಾರವು ದರ್ಬಳಕೆ ಮಾಡುತ್ತಿದೆ ಎಂದು ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಹೇಳುತ್ತ ಬಂದಿದೆ. ಇದೀಗ ಸುಪ್ರೀಂಕೋರ್ಟ್ ಇಡಿಗೆ ತಪರಾಕಿ ಹಾಕಿರುವುದು ಕೇಂದ್ರ ಸರ್ಕಾಕ್ಕೆ ಕಪಾಳ ಮೋಕ್ಷ ಮಾಡಿದಂತಾಗಿದೆ. ರಾಜಕೀಯ ಮಾಡುವುದಿದ್ದರೆ ಚುನಾವಣೆಯಲ್ಲಿ ಮಾಡಿಕೊಳ್ಳಿ. ಹೀಗೆ ಸರ್ಕಾರದ ಸಂಸ್ಥೆಗಳನ್ನು ದುರ್ಬಳಕೆ ಮಾಡಬೇಡಿ ಎಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದೆ ಎಂದರು.

ಇದು ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಸರ್ಕಾರ ಅಲ್ಲ. ಸಬ್‌ ಕಾ ವಿನಾಶ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳ್ಳ ಮತದಾನ: ಕರ್ನಾಟಕದ ಒಂದು ಕ್ಷೇತ್ರ ಸೇರಿದಂತೆ ಕೆಲ ರಾಜ್ಯಗಳ ಲೋಕಸಭೆ ಚುನಾವಣೆಯಲ್ಲಿ ಕಳ್ಳ ವೋಟಿಂಗ್ ಆಗಿರುವ ಬಗ್ಗೆ ಸಮೀಕ್ಷೆ ಟೀಂ ಹೇಳಿದೆ. ಬಿಜೆಪಿಗೆ ಜಾಸ್ತಿ ಮತ ಬರುವಂತೆ ಮಾಡಲಾಗಿದೆ. ಮುಂಬರುವ ಬಿಹಾರ ಚುನಾವಣೆಯಲ್ಲಿಯೂ ಇಂತಹ ತಂತ್ರ ಮಾಡುವ ಬಗ್ಗೆ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ. ಬಿಜೆಪಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಹೊರಟಿದೆ. ಇದರ ಬಗ್ಗೆ ಚರ್ಚೆ ಆಗಲಿ ಎಂದು ಹೇಳಿದ್ದಾರೆ ಎಂದು ಅವರು ಪ್ರತಿಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಅನಿಲಕುಮಾರ ಪಾಟೀಲ ಸೇರಿದಂತೆ ಹಲವರಿದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ