ಗದಗ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ರೈತರ ಪರದಾಟ

KannadaprabhaNewsNetwork |  
Published : Jul 25, 2025, 12:31 AM IST
ಮುಳಗುಂದದಲ್ಲಿ ಯೂರಿಯಾ ಗೊಬ್ಬರಕ್ಕಾಗಿ ಸರದಿಯಲ್ಲಿ ನಿಂತು ಕಾಯುತ್ತಿರುವ ರೈತರು. | Kannada Prabha

ಸಾರಾಂಶ

ಗದಗ ಗ್ರಾಮೀಣ, ಮುಳಗುಂದ, ಲಕ್ಷ್ಮೇಶ್ವರ, ಗಜೇಂದ್ರಗಡ, ನರಗುಂದ ತಾಲೂಕಿನಲ್ಲಿ ರೈತರು ಗೊಬ್ಬರದ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ.

ಗದಗ: ಜಿಲ್ಲೆಯಾದ್ಯಂತ ರೈತರು ಯೂರಿಯಾ ಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ.

ಗದಗ ಗ್ರಾಮೀಣ, ಮುಳಗುಂದ, ಲಕ್ಷ್ಮೇಶ್ವರ, ಗಜೇಂದ್ರಗಡ, ನರಗುಂದ ತಾಲೂಕಿನಲ್ಲಿ ರೈತರು ಗೊಬ್ಬರದ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ.

ಜು. 16ರಿಂದ ಜು. 22ರ ವರೆಗೆ 15 ಮಿಮೀ ವಾಡಿಕೆ ಮಳೆ ಬದಲು 52 ಮಿಮೀ ಆಗಿದೆ. ತೇವಾಂಶ ಹೆಚ್ಚಿ ಬೆಳೆಗಳಿಗೆ ಹಳದಿ ರೋಗ ಬಾಧಿಸುತ್ತಿದೆ. ರೋಗ ನಿಯಂತ್ರಣಕ್ಕೆ ರೈತರು ಯೂರಿಯಾ ಗೊಬ್ಬರ ಮೊರೆ ಹೋಗುತ್ತಿದ್ದಾರೆ.

ಹೆಚ್ಚಿದ ಬೇಡಿಕೆ: ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳು ರೋಗಕ್ಕೆ ತುತ್ತಾಗುತ್ತಿದ್ದು, ಬೆಳೆಗಳು ನಾಶವಾಗುತ್ತದೆ ಎಂಬ ಆತಂಕದಲ್ಲಿ ರೈತರಿದ್ದಾರೆ. ಯೂರಿಯಾ ಗೊಬ್ಬರ ಬಳಸಿದರೆ ಬೆಳೆ ಉಳಿಸಿಕೊಳ್ಳಬಹುದು ಎಂಬುದು ರೈತರ ಆಲೋಚನೆ. ಹೀಗಾಗಿ ಯೂರಿಯಾ ಗೊಬ್ಬರಕ್ಕೆ ಮುಗಿಬಿದ್ದಿದ್ದಾರೆ.

ಜಿಟಿ ಜಿಟಿ ಮಳೆಯಲ್ಲೂ ಹಲವೆಡೆ ಸರದಿ ಸಾಲಿನಲ್ಲಿ ನಿಂತು ಕಾದಿದ್ದಾರೆ. ಕೆಲ ರೈತರಿಗೆ ಗೊಬ್ಬರ ದೊರೆತರೆ ಇನ್ನು ಕೆಲ ರೈತರಿಗೆ ಸಿಕ್ಕಿಲ್ಲ. ಕೆಲವೆಡೆ ರೈತರು ಹಾಗೂ ಅಂಗಡಿಕಾರರ ನಡುವೆ ವಾಗ್ವಾದ ನಡೆದಿದೆ.

ಸಮರ್ಪಕ ಗೊಬ್ಬರ ಪೂರೈಕೆಗೆ ಆಗ್ರಹ: 3,06,185 ಹೆಕ್ಟರ್‌ ಬಿತ್ತನೆ ಗುರಿಗೆ 3,03,831 ಹೆಕ್ಟೇರ್‌ ಶೇ. 99.23ರಷ್ಟು ಬಿತ್ತನೆ ಆಗಿದೆ. ಹೆಸರು 1,25,956 ಹೆಕ್ಟೇರ್‌, ಗೋವಿನ ಜೋಳ 1,42,741 ಹೆಕ್ಟೇರ್‌ ಹಾಗೂ 14,505 ಹೆಕ್ಟೇರ್‌ಗಳಷ್ಟು ಶೇಂಗಾ ಬೆಳೆಯನ್ನು ಬಿತ್ತಲಾಗಿದೆ. ಹೆಚ್ಚಿನ ಪ್ರದೇಶದಲ್ಲಿ ಗೋವಿನ ಜೋಳ, ಹೆಸರು ಬಿತ್ತನೆ ಮಾಡಲಾಗಿದ್ದು, ಹೆಸರು ಬೆಳೆಗೆ ಹಳದಿ ರೋಗ ಬಾಧಿಸುತ್ತಿದೆ. ರೋಗ ನಿಯಂತ್ರಣಕ್ಕೆ ಯೂರಿಯಾ ಗೊಬ್ಬರ ನೀಡುವುದು ರೈತರು ಅನುಸರಿಸುವ ವಿಧಾನ. ಆದರೆ ಕೃಷಿ ಇಲಾಖೆ ನ್ಯಾನೂ ಯೂರಿಯಾ ಬಳಸಿ ಎಂದು ಸಲಹೆ ನೀಡಿದೆ. ಬೆಳೆಗಳು ಎತ್ತರಕ್ಕೆ ಬೆಳೆದಿದ್ದು, ನ್ಯಾನೂ ಯೂರಿಯಾ ಸಿಂಪರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕೃಷಿ ಇಲಾಖೆ ಯೂರಿಯಾ ಗೊಬ್ಬರವನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.

ಜಿಲ್ಲೆಯಲ್ಲಿ ಎಷ್ಟು ಪ್ರದೇಶದಲ್ಲಿ ಬಿತ್ತನೆಯಾದ ಬಗ್ಗೆ ಕೃಷಿ ಇಲಾಖೆಗೆ ಮಾಹಿತಿ ಇರುತ್ತದೆಯೋ ಅದಕ್ಕೆ ಅನುಗುಣವಾಗಿಯಾದರೂ ಯೂರಿಯಾ ಗೊಬ್ಬರ ಪೂರೈಕೆ ಮಾಡಬೇಕು. ಒಂದು ಅಥವಾ ಎರಡು ಲೋಡ್‌ ಗೊಬ್ಬರ ಪೂರೈಸುತ್ತಾರೆ. ಕೆಲವು ರೈತರಿಗೆ ದೊರೆತರೆ ಇನ್ನು ಕೆಲವು ರೈತರಿಗೆ ದೊರೆಯುವುದಿಲ್ಲ. ಸಮರ್ಪಕವಾಗಿ ಯೂರಿಯಾ ಗೊಬ್ಬರ ಪೂರೈಸದ್ದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಮುಳಗುಂದ ರೈತ ಸಂಘದ ಅಧ್ಯಕ್ಷ ದೇವರಾಜ ಸಂಗನಪೇಟಿ ಹೇಳುತ್ತಾರೆ.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ