ಹಾವೇರಿ: ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಕೊರತೆ ಇಲ್ಲ. ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಅತಿಯಾದ ರಸಗೊಬ್ಬರ ಬಳಕೆ ಮಾನವ ಹಾಗೂ ಭೂಮಿಗೆ ಹಾನಿಕರವಾಗಿದ್ದು, ನ್ಯಾನೋ ಯೂರಿಯಾ ಬಳಕೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಭೂಮಿಗೂ ಹಾನಿ ತಪ್ಪಿಸಬಹುದು. ಹಾಗಾಗಿ ರೈತರು ನ್ಯಾನೋ ಯೂರಿಯಾ ಬಳಕೆಗೆ ಒತ್ತು ನೀಡಬೇಕು. ರೈತರು ವದಂತಿಗಳಿಗೆ ಕಿವಿಗೊಡದೆ, ತಾಳ್ಮೆಯಿಂದ ಅಗತ್ಯವಿದ್ದಷ್ಟು ಮಾತ್ರ ರಸಗೊಬ್ಬರ ಪಡೆದುಕೊಳ್ಳಬೇಕು ಎಂದರು.
ರೈತರು ಬೆಳೆಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರವನ್ನು ಬಳಸುತ್ತಿದ್ದು, ಹೆಚ್ಚುವರಿ ಯೂರಿಯಾ ಬಳಸುವುದರಿಂದ ನೀರಿನಲ್ಲಿ ಕರಗಿ, ಗಾಳಿ ಮುಖಾಂತರ ಆವಿಯಾಗಿ ಹಾಗೂ ಬೆಳೆಗಳಿಗೆ ಲಭ್ಯವಿರದ ಸ್ಥಿತಿಗೆ ಪರಿವರ್ತನೆಯಾಗಿ ನಷ್ಟವಾಗುತ್ತದೆ.ಜತೆಗೆ ಮಣ್ಣು, ನೀರು ಮತ್ತು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ರೈತರು ಕೇವಲ ಯೂರಿಯಾ ರಸಗೊಬ್ಬರ ಬಳಸುವುದರಿಂದ ಬೆಳೆಗಳಿಗೆ ಶೇ. 30ರಷ್ಟು ಲಭ್ಯವಾಗುತ್ತಿದ್ದು, ಪರ್ಯಾಯವಾಗಿ ನ್ಯಾನೋ ಯೂರಿಯಾ ರಸಗೊಬ್ಬರವನ್ನು ಎಲೆಗಳ ಮೇಲೆ ಸಿಂಪರಣೆ ಮಾಡುವುದರಿಂದ ಶೇ. 80ರಷ್ಟು ಬೆಳೆಗಳು ಹೀರಿಕೊಳ್ಳುತ್ತವೆ. ಆದ್ದರಿಂದ ರೈತರು ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆಗೆ ಒತ್ತು ನೀಡಬೇಕು ಎಂದರು.
ಶೇ. 98.26 ಬಿತ್ತನೆ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, 3,14,589 ಹೆಕ್ಟೇರ್ ಬಿತ್ತನೆ ಗುರಿಗೆ ಶೇ. 98.26 ರಷ್ಟು ಅಂದರೆ 3,09,125 ಹೆಕ್ಟೇರ್ ಬಿತ್ತನೆಯಾಗಿರುತ್ತದೆ. ಪ್ರಮುಖವಾಗಿ ಮೆಕ್ಕೆಜೋಳ 2,06,338 ಹೆಕ್ಟೇರ್ ಬಿತ್ತನೆ ಗುರಿಗೆ, 2,48,493 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಸುಮಾರು 28 ಸಾವಿರ ಹೆಕ್ಟೇರ್ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ ಎಂದರು.ಹೆಚ್ಚುವರಿ ಮೆಕ್ಕೆಜೋಳ ಬಿತ್ತನೆ ಪ್ರದೇಶ ಹಾಗೂ ಜಿಲ್ಲೆಯಲ್ಲಿ ನಿರಂತರವಾಗಿ ಆಗುತ್ತಿರುವ ಮಳೆಯಿಂದ ಭೂಮಿಯಲ್ಲಿ ಹೆಚ್ಚಿನ ತೇವಾಂಶ ಇರುವುದರಿಂದ ರೈತರಿಂದ ಯೂರಿಯಾ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆಯಿರುತ್ತದೆ. ಹೆಚ್ಚಿನ ಯೂರಿಯಾ ಬೇಡಿಕೆ ಸರಿದೂಗಿಸಲು ಜಿಲ್ಲೆಗೆ ಹಂಚಿಕೆಯಾಗಿರುವ ರಸಗೊಬ್ಬರಕ್ಕೆ ಹೆಚ್ಚುವರಿಯಾಗಿ 8 ಸಾವಿರ ಟನ್ ಪೂರೈಸಲು ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.ಕಳಪೆ ಬೀಜ, ಗೊಬ್ಬರ ತಡೆಗೆ ಕ್ರಮ: ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ, ನಕಲಿ ರಸಗೊಬ್ಬರ, ಕಳಪೆ ಕೀಟನಾಶಕ ಹಾವಳಿ ತಡೆಗೆ ಕೃಷಿ ಇಲಾಖೆ ವಿಜಿಲೆನ್ಸ್ ತಂಡ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಹಾಗೂ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಮಳಿಗೆಗೆ ಅನಿರೀಕ್ಷಿತ ದಾಳಿ ನಡೆಸುವಂತೆ ಸೂಚನೆ ನೀಡಲಾಗಿದೆ. ಜತೆಗೆ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಪ್ರಕರಣ ಹಾಗೂ ಲಿಂಕ್ ರಸಗೊಬ್ಬರ ಖರೀದಿಗೆ ರೈತರನ್ನು ಒತ್ತಾಯಿಸಿದ ಪ್ರಕರಣ ಕಂಡುಬಂದಲ್ಲಿ ಕೂಡಲೇ ಅಂತಹ ಮಾರಾಟಗಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ಜಂಟಿ ಕೃಷಿ ನಿರ್ದೇಶಕ ಡಾ. ಮಲ್ಲಿಕಾರ್ಜುನ ಮಾತನಾಡಿ, ಜಿಲ್ಲೆಯಲ್ಲಿ ರೈತರ ಬೇಡಿಕೆ ಅನುಗುಣವಾಗಿ ರಸಗೊಬ್ಬರ ಪೂರೈಕೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರು ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆ ಮಾಡುವುದರಿಂದ ಆರ್ಥಿಕವಾಗಿ ಸಹಾಯವಾಗಲಿದೆ. ಜಿಲ್ಲೆಯಲ್ಲಿ ಈಗಾಗಲೇ ಒಂದು ಲಕ್ಷ ಲೀಟರ್ ನ್ಯಾನೋ ಯೂರಿಯಾ ಮಾರಾಟವಾಗಿದ್ದು, ಎರಡು ಲಕ್ಷ ಲೀಟರ್ ದಾಸ್ತಾನಿದೆ ಎಂದು ಮಾಹಿತಿ ನೀಡಿದರು.ಮಾಧ್ಯಮ ಗೋಷ್ಠಿಯಲ್ಲಿ ಕೃಷಿ ಇಲಾಖೆ ಉಪನಿರ್ದೇಶಕರಾದ ಕರಿಯಲ್ಲಪ್ಪ, ಕೃಷ್ಣಮೂರ್ತಿ, ವಿಜಲನ್ಸ್ ತಂಡದ ಸಹಾಯಕ ನಿರ್ದೇಶಕ ಶಿವಲಿಂಗು, ಎಲ್ಲ ತಾಲೂಕಾ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು.
ಪರವಾನಗಿ ರದ್ದುರಾಣಿಬೆನ್ನೂರು ನಗರದಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟ ವಿತರಣೆ ಹಿನ್ನೆಲೆ ಶಿವಂ ಸೀಡ್ಸ್, ಮರುಳಸಿದ್ದೇಶ್ವರ ಸೀಡ್ಸ್, ನಿಸರ್ಗ ಸೀಡ್ಸ್ ಬಿತ್ತನೆ ಬೀಜ ಮಾರಾಟ ಪರವಾನಗಿ ರದ್ದು ಮಾಡಲಾಗಿದೆ. ಸೂರ್ಯೋದಯ, ಪ್ರಕಾಶ, ನಂದಿ, ಕೆ.ಬಿ, ಮಣಿಕಂಠ, ಗುರು, ಗುರುಶಾಂತೇಶ್ವರ ಹಾಗೂ ಮಂಗಳಾ ಸೀಡ್ಸ್ ಮಳಿಗೆಗಳನ್ನು ಜಪ್ತಿ ಮಾಡಲಾಗಿದೆ. ಕಾನೂನು ಕ್ರಮ ಪ್ರಗತಿಯಲ್ಲಿದೆ. ನಿಸರ್ಗ ಮೆಕ್ಕೆಜೋಳ ಬಿತ್ತನೆ ಬೀಜವು ಸರಿಯಾಗಿ ಮಳೆಯೊಡೆಯದ ಹಾಗೂ ಬೆಳೆ ಸರಿಯಾಗಿ ಬೆಳೆಯದ ಕಾರಣ ಪರಿಹಾರಕ್ಕಾಗಿ ಜಿಲ್ಲೆಯಲ್ಲಿ 337 ಅರ್ಜಿಗಳು ಸ್ವೀಕೃತವಾಗಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ನೋಟಿಸ್ ಜಾರಿ
ರಾಣಿಬೆನ್ನೂರು ನಗರದಲ್ಲಿ ಕಳಪೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಸ್ವಸ್ತಿಕ್ ಬನಶಂಕರಿ ಆಗ್ರೋ ಸೆಂಟರ್ ಮಾರಾಟ ಮಳಿಗೆಗೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಕೊಪ್ಪಳದ ವಿನಾಯಕ ಅಗ್ರೋ ಇಂಡಸ್ಟ್ರೀಸ್ ಸರಬರಾಜು ಮಾಡಿದ ರಸಗೊಬ್ಬರ ಮಾರಾಟಮಾಡದಂತೆ ನೋಟಿಸ್ ಜಾರಿ ಮಾಡಿದ್ದಾರೆ.ಹಾವೇರಿ ನಗರದ ಶ್ರೀನಿವಾಸ ಆಗ್ರೋ ಸೆಂಟರ್‌ನವರು ಮುಳ್ಳುಸಜ್ಜೆ ಕಳೆ ನಿಯಂತ್ರಿಸಲು ರೈತರಿಗೆ ನೀಡುತ್ತಿದ್ದ ಕಳೆನಾಶಕ ಅಂಶ ಇರುವುದಿಲ್ಲ ಎಂದು ವರದಿ ಬಂದಿದೆ. ಹಾಗಾಗಿ ಈ ಮಾರಾಟಗಾರರ ವಿರುದ್ಧ ಪ್ರಕರಣದ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.