ಶ್ರದ್ಧಾಭಕ್ತಿಯಿಂದ ಜರುಗಿದ ಮಹಾದೇವತಾತ ಮಹಾರಥೋತ್ಸವ

KannadaprabhaNewsNetwork |  
Published : Jan 11, 2025, 12:47 AM IST
ಪವಾಡಪುರುಷ ಅಲ್ಲೀಪುರ ಶ್ರೀಮಹಾದೇವ ತಾತನವರ ಮಹಾರಥೋತ್ಸವ ಶುಕ್ರವಾರ ಸಂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. | Kannada Prabha

ಸಾರಾಂಶ

ದರ್ಶನಕ್ಕೆ ನೂಕು ನುಗ್ಗಲಾಗದಂತೆ ದೇವಸ್ಥಾನದ ಟ್ರಸ್ಟ್‌ ಕಮಿಟಿ ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿತು.

ಬಳ್ಳಾರಿ: ಪವಾಡಪುರುಷ ಅಲ್ಲೀಪುರ ಮಹಾದೇವ ತಾತನವರ ಮಹಾರಥೋತ್ಸವ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ರಥೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಬೆಳಗಿನ ಜಾವ 4 ಗಂಟೆಯಿಂದಲೇ ಮಹಾದೇವ ತಾತನವರ ಗದ್ದುಗೆಗೆ ಅಭಿಷೇಕ, ಪುಷ್ಪಾರ್ಪಣೆ ಹಾಗೂ ಬಿಲ್ವಪತ್ರೆ ಅರ್ಚನೆಗಳು ನಡೆದವು.

ಬಳ್ಳಾರಿ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತು ಮಹಾದೇವತಾತನವರ ದರ್ಶನ ಪಡೆದರು. ದರ್ಶನಕ್ಕೆ ನೂಕು ನುಗ್ಗಲಾಗದಂತೆ ದೇವಸ್ಥಾನದ ಟ್ರಸ್ಟ್‌ ಕಮಿಟಿ ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿತು. ಎಲ್ಲೂ ಜನಜಂಗುಳಿಯಾಗದಂತೆ ಕ್ರಮ ವಹಿಸಲಾಗಿತ್ತು.

ಮಹಾರಥೋತ್ಸವ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಮುಗಿದ ಬಳಿಕ ಗಂಗೆ ತರಲಾಯಿತು. ಸಮಾಳ, ವೀರಗಾಸೆ, ನಂದಿಕೋಲು ಸೇರಿದಂತೆ ವಿವಿಧ ಮಂಗಳವಾದ್ಯಗಳು ಪಾಲ್ಗೊಂಡಿದ್ದವು. ಬಳಿಕ ಮುಂಭಾಗ ಮಡಿತೇರು ಎಳೆಯಲಾಯಿತು.

ಶ್ರೀಮಹಾದೇವ ತಾತನವರ ಉತ್ಸವ ಮೂರ್ತಿಯನ್ನು ಹೊತ್ತ ಭಕ್ತರು ಮಡಿತೇರು ಸುತ್ತಲೂ ಪ್ರದಕ್ಷಿಣಿ ಹಾಕಿದರು. ಬಳಿಕ ಉತ್ಸವ ಮೂರ್ತಿಯನ್ನು ದೇವಸ್ಥಾನದ ಆವರಣಕ್ಕೆ ತರಲಾಯಿತು. ಮಠದ ಪುರೋಹಿತ ವರ್ಗ ಜಯಘೋಷಗಳ ನಡುವೆ ಉತ್ಸವ ಮೂರ್ತಿಯನ್ನು ಸ್ವಾಗತಿಸಿಕೊಂಡಿತು.

ಸಂಜೆ 5 ಗಂಟೆಗೆ ದೇವಸ್ಥಾನ ಮುಂಭಾಗದಿಂದ ಶ್ರೀಮಹಾದೇವ ತಾತನವರ ಮಹಾರಥೋತ್ಸವಕ್ಕೆ ಚಾಲನೆ ದೊರೆಯಿತು. ದೇವಸ್ಥಾನದ ಟ್ರಸ್ಟ್ ಕಮಿಟಿ ಸದಸ್ಯರು ಪೂಜೆ ಸಲ್ಲಿಸಿದ ಬಳಿಕ, ವಿವಿಧ ಪುಷ್ಪಗಳಿಂದ ಅಲಂಕೃತ ರಥವು ತೇರುಬೀದಿಯ ಮೂಲಕ ಸಾಗಿ ಬಂತು. ರಥೋತ್ಸವ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಭಕ್ತರು ಹೂವು-ಹಣ್ಣುಗಳನ್ನು ಸಮರ್ಪಿಸುವ ಮೂಲಕ ಹರಕೆ ತೀರಿಸಿಕೊಂಡರು.

ಮಹಾದೇವತಾತನವರ 37ನೇ ಪುಣ್ಯಾರಾಧನೆ ನಿಮಿತ್ತ ಗುರುವಾರ ಸಂಜೆಯಿಂದಲೇ ಶುರುಗೊಂಡ ಭಜನೆ ಕಾರ್ಯಕ್ರಮ ಇಡೀ ರಾತ್ರಿ ಜರುಗಿತು. ಬಳ್ಳಾರಿ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದ ಭಜನಾ ತಂಡಗಳು ಭಾಗವಹಿಸಿದ್ದವು.

ರಥೋತ್ಸವ ನಿಮಿತ್ತ ದೇವಸ್ಥಾನ ಆವರಣದಲ್ಲಿ ಏರ್ಪಡಿಸಲಾಗಿದ್ದ 10 ದಿನಗಳ ಗರಗದ ಶಿವಯೋಗಿ ಮಡಿವಾಳೇಶ್ವರರ ಪುರಾಣ ಪ್ರವಚನ ಶುಕ್ರವಾರ ಮಹಾಮಂಗಳವಾಯಿತು. ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಅವರು ಪ್ರವಚನ ಮಾಡಿದರು. ಹಾಲ್ವಿಯ ಮೌನೇಶ್ ಕುಮಾರ್ ತಬಲಾ ಸಾಥ್ ನೀಡಿದರು.

ರಥೋತ್ಸವಕ್ಕೆ ಆಗಮಿಸಿದ್ದ ಸುಮಾರು 30 ಸಾವಿರ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. 10 ಕ್ವಿಂಟಲ್ ಹುಗ್ಗಿ, 25 ಕ್ವಿಂಟಲ್ ಅನ್ನ, 15 ಸಾವಿರ ಲೀಟರ್ ಸಾಂಬಾರ್, ಮಜ್ಜಿಗೆ, ಚಟ್ನಿ ಸಿದ್ಧಪಡಿಸಲಾಗಿತ್ತು ಎಂದು ದೇವಸ್ಥಾನ ಟ್ರಸ್ಟ್‌ ಕಮಿಟಿ ತಿಳಿಸಿದೆ.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ