ಚನ್ನಪಟ್ಟಣ: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಭಾವ ಮಹದೇವಯ್ಯ ಹತ್ಯೆಗೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆನ್ನಲಾಗಿದೆ. ಮತ್ತೋರ್ವ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಿದ್ದು, ಪ್ರಕರಣದಲ್ಲಿ ಒಟ್ಟು ನಾಲ್ವರು ಭಾಗಿಯಾಗಿದ್ದಾರೆಂದು ಶಂಕಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುರುಗೇಶನ್ ಅನ್ನು ಬಂಧಿಸಿ, ಬಂಧನಕ್ಕೂ ಮುಂಚೆ ಈತನಿಗೆ ಹಾವು ಕಚ್ಚಿದ್ದರಿಂದ ಚನ್ನಪಟ್ಟಣದಲ್ಲಿ ಚಿಕಿತ್ಸೆ ಕೊಡಿಸಿದ್ದ ಪೊಲೀಸರು, ಶನಿವಾರ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆತನ ಆರೋಗ್ಯದಲ್ಲಿ ಏರುಪೇರು ಕಂಡ ಬಂದ ಹಿನ್ನೆಲೆಯಲ್ಲಿ ರಾಮನಗರ ಕಾರಾಗೃಹದಿಂದ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಆರೋಪಿಗಳೆಲ್ಲರೂ ತಮಿಳುನಾಡು ಮೂಲದ ಧರ್ಮಪುರಿ ಜಿಲ್ಲೆಯ ಪೆನ್ನಾಗ್ರಂ ಮೂಲದವರು ಎನ್ನಲಾಗಿದೆ. ಮುರುಗೇಶನ್ ಪತ್ನಿ ಮತ್ತು ಆತನ ಮಲ ಸಹೋದರನನ್ನು ಸಹ ವಶಕ್ಕೆ ಪಡೆಯಲಾಗಿದೆ. ಈ ಪೈಕಿ, ಆತನ ಮಲ ಸಹೋದರ ಮುರುಗೇಶನ್ ಜೊತೆ ಕೃತ್ಯದಲ್ಲಿ ಭಾಗಿಯಾಗಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಕೊಲೆಗೆ ಆತನ ಪತ್ನಿಯೂ ಸಹಕರಿಸಿರುವ ಶಂಕೆ ಇರುವುದರಿಂದ ಆಕೆಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ. ಪೊಲೀಸರು ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಬಿಟ್ಟುಕೊಡುತ್ತಿಲ್ಲ. ಇನ್ನು ಎ2 ಆರೋಪಿಗಾಗಿ ಪೊಲೀಸರು ಶೋಧ ಮುಂದುವರಿದಿದೆ.
ಬೆನ್ನಟ್ಟಿ ಬಂಧನ: ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಮುರುಗೇಶನ್ ಅನ್ನು ಬಂಧಿಸಲು ತನಿಖಾ ತಂಡ ತಮಿಳುನಾಡಿಗೆ ತೆರಳಿತ್ತು. ಆದರೆ, ಆರೋಪಿ ಹಾವು ಕಚ್ಚಿದ್ದರಿಂದ ಧರ್ಮಪುರಿಯ ಆಸ್ಪತ್ರೆಗೆ ದಾಖಲಾಗಿದ್ದ. ಪೊಲೀಸರು ಆಸ್ಪತ್ರೆಗೆ ಹೋಗುವಷ್ಟರಲ್ಲಿ ವಿಚಾರ ತಿಳಿದು, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಬೆನ್ನತ್ತಿ ಬಂಧಿಸಿದ್ದಾರೆ ಎನ್ನಲಾಗಿದೆ.ಕೈಕೊಟ್ಟ ಹ್ಯಾಂಡ್ ಬ್ರೇಕ್: ಮಹದೇವಯ್ಯ ಅವರನ್ನು ಕೊಲೆ ಮಾಡಿದ ಹಂತಕರು ಅವರದೇ ಕಾರಿನಲ್ಲಿ ಶವ ಎತ್ತಿಕೊಂಡು ತೋಟದ ಮನೆಯಿಂದ ಹ್ಯಾಂಡ್ ಬ್ರೇಕ್ ಹಾಕದೇ ಕಾರು ಚಲಾಯಿಸಿಕೊಂಡು ಹೋಗಿದ್ದು, ತಾಲೂಕಿನ ಭೈರಾಪಟ್ಟಣದ ಬಳಿ ಕಾರು ನಿಂತಿದೆ. ಅಲ್ಲಿಗೆ ತೆರಳಿದ ಒಬ್ಬ ವ್ಯಕ್ತಿ ಕಾರು ಸ್ಟಾರ್ಟ್ ಮಾಡಿಕೊಟ್ಟಿದ್ದು, ನಂತರ ಹಂತಕರು ಹನೂರು ತಲುಪಿದ್ದಾರೆ. ಅಲ್ಲಿ ರಾಮಪುರದಿಂದ ನಾಲ್ ರೋಡ್‌ಗೆ ತೆರಳುವ ಮಾರ್ಗದಲ್ಲಿನ ಅರಣ್ಯ ಪ್ರದೇಶದಲ್ಲಿ ಶವ ಎಸೆದು, ಕಾರನ್ನು ಅಲ್ಲಿಯೇ ಬಿಟ್ಟು, ಅಲ್ಲಿಂದ ಬಸ್‌ನಲ್ಲಿ ಮಹದೇಶ್ವರ ದೇವಸ್ಥಾನಕ್ಕೆ ತೆರಳಿ, ಒಬ್ಬ ಆರೋಪಿ ಮುಡಿ ನೀಡಿ, ಬಸ್‌ನಲ್ಲಿ ಮೂರು ಟಿಕೆಟ್ ಪಡೆದಿದ್ದು, ಇದು ಸಹ ಸುಳಿವು ನೀಡಿತ್ತು ಎನ್ನಲಾಗಿದೆ. ಅಲ್ಲಿಂದ ಇಬ್ಬರು ಆರೋಪಿಗಳು ತಮಿಳುನಾಡಿಗೆ ತೆರಳಿದ್ದರೆ ಒಬ್ಬ ಚನ್ನಪಟ್ಟಣಕ್ಕೆ ಬಂದಿದ್ದಾನೆ.
ಶಿಫ್ಟ್ ಕಾರಿನಲ್ಲಿ ತೆರಳಿದ್ದ?: ಮಹದೇವಯ್ಯ ಹಂತಕರು ಶಿಫ್ಟ್ ಕಾರಿನಲ್ಲಿ ಬಂದಿದ್ದು, ಇಲ್ಲಿ ಒಂದು ಕಡೆ ಶಿಫ್ಟ್ ಕಾರನ್ನು ನಿಲ್ಲಿಸಿ ತೆರಳಿದ್ದರು ಎನ್ನಲಾಗಿದೆ. ಚನ್ನಪಟ್ಟಣಕ್ಕೆ ಬಂದ ಒಬ್ಬ ಹಂತಕ ಶಿಫ್ಟ್ ಕಾರನ್ನು ಇಲ್ಲಿಂದ ತೆಗೆದುಕೊಂಡು ನಗರದ ಸಾತನೂರು ರಸ್ತೆ ಮುಖಾಂತರ ಹಲಗೂರಿಗೆ ತೆರಳಿ ಅಲ್ಲಿಂದ ತಮಿಳುನಾಡಿಗೆ ತೆರಳಿದ್ದಾನೆ. ಈ ವೇಳೆ ಅಚಾನಕ್ಕಾಗಿ ಮಹದೇವಯ್ಯ ಅವರ ಮೊಬೈಲ್ ಸಾತನೂರು ರಸ್ತೆಯಲ್ಲಿ ಆನ್ ಆಗಿದ್ದು, ಹಂತಕ ಕರೆಯನ್ನು ಸ್ವೀಕರಿಸಿದ್ದಾನೆನ್ನಲಾಗಿದೆ.ಮಗನನ್ನು ಶಾಲೆಗೆ ಸೇರಿಸಿದ್ದ ಹಂತಕ: ಚನ್ನಪಟ್ಟಣದಲ್ಲಿ 20 ವರ್ಷಗಳಿಂದ ನೆಲೆಸಿದ್ದ ಹಂತಕ ಮುರುಗೇಶನ್ ವಿವಿಧ ಕಡೆ ತೋಟ ಕಾಯುವ ಕೆಲಸ ಮಾಡಿದ್ದ. ಇತ್ತೀಚೆಗೆ ಚಕ್ಕೆರೆಯ ಶಾಲೆಗೆ ತನ್ನ ಮಗನನ್ನು ದಾಖಲಿಸಿದ್ದು, ನಂತರ ತಾವು ತಮಿಳುನಾಡಿಗೆ ತೆರಳುತ್ತಿದ್ದು, ಮಗನ ದಾಖಲೆಗಳನ್ನು ನೀಡುವಂತೆ ವಿನಂತಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.ಮುರುಗೇಶನ್ ಹೆಂಡತಿಯೇ ಮಾಸ್ಟರ್ ಮೈಂಡ್?: ಹಂತಕ ಮುರುಗೇಶನ್ ಹಂಡತಿಯೇ ಮಾಸ್ಟರ್ ಮೈಂಡ್ ಎನ್ನಲಾಗಿದ್ದು, 8 ದಿನದಲ್ಲಿ ಈಕೆ 8 ಮೊಬೈಲ್‌ಗಳನ್ನು ಬದಲಿಸಿದ್ದಳು ಎನ್ನಲಾಗಿದೆ. ಮುರುಗೇಶನ್ ಮಾವ ಒಬ್ಬ ಚನ್ನಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದು, ಈತನೂ ಸಹಕರಿಸಿರುವ ಕುರಿತು ಶಂಕೆ ಇದೆ. ಪೊಲೀಸರು ಅಧಿಕೃತ ಮಾಹಿತಿ ನೀಡುವವರೆಗೂ ಸತ್ಯಕ್ಕಾಗಿ ಕಾಯಬೇಕಿದೆ.