ಉಡುಪಿ : ಸ್ವಸ್ಥ ಸಮಾಜ ಮತ್ತು ಸುರಕ್ಷಿತ ಭಾರತ ಸಂಕಲ್ಪದೊಂದಿಗೆ ಸನಾತನ ಸಂಸ್ಥೆಯ ವತಿಯಿಂದ ಇಲ್ಲಿನ ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಶ್ರೀ ಮಹಾಧನ್ವಂತರಿ ಯಾಗ ಸಂಪನ್ನಗೊಂಡಿತು. ಈ ಯಾಗದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು.
ಈ ಯಾಗದ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಭೇಟಿ ನೀಡಿದರು, ನಂತರ ಅವರು ದೇಶದ ರಕ್ಷಣೆ ಹಾಗೂ ನಾಗರಿಕರ ಆರೋಗ್ಯ, ಶಾಂತಿ ಮತ್ತು ಉತ್ತಮ ಭವಿಷ್ಯಕ್ಕಾಗಿ ಉಡುಪಿಯಲ್ಲಿ ನಡೆದ ಶ್ರೀ ಮಹಾಧನ್ವಂತರಿ ಯಾಗವು ಸ್ಮರಣೀಯವಾಗಿದೆ ಎಂದು ಹೇಳಿದರುಜ್ಯೋತಿರ್ಲಿಂಗ ಅಂಶ ದರ್ಶನ: ಈ ಯಾಗದ ಪ್ರಮುಖ ಆಕರ್ಷಣೆಯಾಗಿ ಸೊರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯಾಂಶಗಳ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಸಾವಿರ ವರ್ಷಗಳ ಹಿಂದೆ ಮಹಮ್ಮದ್ ಘಜ್ನಿ ದ್ವಂಸಗೊಳಿಸಿದ್ದ ಸೋಮನಾಥ ಜ್ಯೋತಿರ್ಲಿಂಗದ ಅಂಶಗಳನ್ನು ಸಾವಿರಾರು ಭಕ್ತರು ವೀಕ್ಷಿಸಿ ಪುನಿತರಾದರು. ಯಾಗಸ್ಥಳದಲ್ಲಿ 15ಕ್ಕೂ ಅಧಿಕ ಪ್ರದರ್ಶನ ಮಳಿಗೆಗಳನ್ನು ಸಜ್ಜುಗೊಳಿಸಲಾಗಿತ್ತು. ಇಲ್ಲಿ ಸನಾತನ ಸಂಸ್ಥೆಯ ಗ್ರಂಥಗಳು, ಅಗ್ನಿಹೋತ್ರ, ಆಯುರ್ವೇದ ಔಷಧಗಳು, ಔಷಧೀಯ ಸಸ್ಯಗಳು ಮತ್ತು ಧರ್ಮಾಚರಣೆಯ ಮಹತ್ವವನ್ನು ತಿಳಿಸುವ ಫಲಕಗಳು ಜಿಜ್ಞಾಸುಗಳ ಆಕರ್ಷಣೆಯ ಕೇಂದ್ರಬಿಂದುವಾದವು.