ಕನ್ನಡಪ್ರಭ ವಾರ್ತೆ ಕುಕನೂರು
ಪಟ್ಟಣದ ಮುಸ್ಲಿಂ ಕುಟುಂಬದ ಮನೆಯೊಂದರಲ್ಲಿ ಹಿಂದೂ ಸಂಪ್ರದಾಯದಂತೆ ದೀಪಾವಳಿ ಹಬ್ಬದ ಪ್ರಯುಕ್ತ ಮಹಾಲಕ್ಷ್ಮೀ ಪೂಜೆ ನೆರವೇರಿಸಲಾಗಿದೆ. ಪಟ್ಟಣದ 11ನೇ ವಾರ್ಡ್‌ನ ರಾಜಾಸಾಬ್ ಹವಾಲ್ದಾರ ಮನೆಯಲ್ಲಿ ಶುಕ್ರವಾರ ಮಹಾಲಕ್ಷ್ಮಿ ಪೂಜೆ ಮಾಡಲಾಗಿದೆ. ಹಿಂದೂ ಸಂಪ್ರದಾಯದ ಹಾಗೆ ಮನೆಗೆ ತಳಿರು-ತೋರಣ ಕಟ್ಟಿ ಮಹಾಲಕ್ಷ್ಮೀಗೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಿದ್ದಾರೆ.ಈ ಮೂಲಕ ಭಾವೈಕ್ಯತೆ, ಸಾಮರಸ್ಯಕ್ಕೆ ಹವಾಲ್ದಾರ ಕುಟುಂಬ ಸಾಕ್ಷಿಯಾಗಿದೆ.
ಈ ವೇಳೆ ಮಾತನಾಡಿದ ಹವಾಲ್ದಾರ ಕುಟುಂಬದ ಇಮಾಮ್ ಹುಸೇನ್, ನಾವು ಮೊದಲಿನಿಂದಲೂ ಮುಸ್ಲಿಂ ಧರ್ಮದ ಎಲ್ಲ ಹಬ್ಬಗಳನ್ನು ಮತ್ತು ಹಿಂದೂ ಧರ್ಮದ ಮಹಾಲಕ್ಷ್ಮಿ ಪೂಜೆಯನ್ನು ನೆರವೇರಿಸುತ್ತಾ ಬಂದಿದ್ದೇವೆ. ಮನೆಗೆಲ್ಲ ವಿದ್ಯುತ್ ದೀಪ ಅಲಂಕಾರ ಹಾಗೂ ತಳಿರು ತೋರಣ ಕಟ್ಟಿದ್ದೇವೆ. ದೀಪದ ಹಣತೆ ಸಹ ಹಚ್ಚಿದ್ದೇವೆ. ಹೋಳಿಗೆ ನೈವೇದ್ಯ ಸಹ ಸಮರ್ಪಿಸುತ್ತೇವೆ ಎಂದರು.ಯಲಬುರ್ಗಾದಲ್ಲಿ ಸಡಗರದ ದೀಪಾವಳಿ:
ಬೆಳಗಿನ ಹಬ್ಬವನ್ನು ದೀಪಾವಳಿಯನ್ನು ಯಲಬುರ್ಗಾ ತಾಲೂಕಿನಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.ಶನಿವಾರ ದೀಪಾವಳಿ ಪಾಡ್ಯ ಪೂಜೆ ಮತ್ತು ಪಾಂಡವರನ್ನು ಸ್ಥಾಪಿಸಿ, ದೀಪದಿಂದ ದೀಪ ಹಚ್ಚಿ ಬಾಳು ಬೆಳಕಾಗಿರಲೆಂದು ಪ್ರಾರ್ಥಿಸಿ ಪ್ರತಿ ಮನೆ ಮನೆ, ದೇವಸ್ಥಾನಗಳಲ್ಲೂ ಭಕ್ತರು ಪೂಜೆ ಮಾಡಿದರು. ಚಿಣ್ಣರು, ಯುವಕರು, ಯುವತಿಯರು ಎನ್ನದೆ ಮನೆಮಂದಿಯೆಲ್ಲ ಪಟಾಕಿ ಸಿಡಿಸಿ ಹಬ್ಬ ಆಚರಿಸಿದರು.
ಕಿರಾಣಿ ಅಂಗಡಿ, ಬಟ್ಟೆ, ಜ್ಯುಲೇವರಿ, ಸ್ಟೇಷನರಿ ಸೇರಿದಂತೆ ಎಲ್ಲ ಅಂಗಡಿಗಳಲ್ಲಿ, ಖಾಸಗಿ ಕಚೇರಿ ಸೇರಿದಂತೆ ಎಲ್ಲೆಡೆಯೊ ಲಕ್ಷ್ಮೀ ಪೂಜೆ ನಡೆಯಿತು. ಮಾರುಕಟ್ಟೆ,ಪ್ರಮುಖ ವಾಣಿಜ್ಯ ಮಳಿಗೆಗಳ ಮುಂದೆ ಪಟಾಕಿಗಳದ್ದೇ ಸದ್ದು, ಕುಟುಂಬದಲ್ಲಿ, ಅಕ್ಕಪಕ್ಕದವರೆಲ್ಲ ಸೇರಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಪಾಂಡವರ ಸ್ಥಾಪನೆ:ದೀಪಾವಳಿ ಪಾಡ್ಯದೆಂದು ಸಂಪ್ರಾದಾಯದಂತೆ ಪ್ರತಿಯೊಬ್ಬರ ಮನೆ ಮುಂದೆ, ಮನೆಯೊಳಗೆ ಪಾಂಡವರನ್ನು ಸ್ಥಾಪಿಸಿದರು. ಆಕಳ ಸಗಣಿಯಿಂದ ವೃತ್ತಾಕಾರ ತಟ್ಟೆಯಂತೆ ತಯಾರು ಮಾಡಿ. ಅದರಲ್ಲಿ ಸೆಗಣಿಯಿಂದಲೇ ಮಾಡಿದ ಐದು ಕುಂಡಲಗಳನ್ನು ಸ್ಥಾಪಿಸಿ ವಿವಿಧ ಹೂವಿನಿಂದ ಅಲಂಕಾರ ಮಾಡಿ ಹಾಲುತ್ರಾಣಿ ಮತ್ತು ಮುಳ್ಳುತ್ರಾಣಿ ಹಾಗೂ ವನ್ನಮ್ರಿ ಹೂವುಗಳನ್ನು ಹಾಕಿ ಸಿಂಗರಿಸಿ, ಪೂಜಿಸಿದರು.