ಕನ್ನಡಪ್ರಭ ವಾರ್ತೆ ಮಹಾಲಿಂಗಪುರಕರ್ನಾಟಕದ ಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಜಾತ್ರೆಗಳಲ್ಲಿ ಒಂದಾದ ಮಹಾಲಿಂಗಪುರದ ಶ್ರೀಗುರು ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದ ಮರು ರಥೋತ್ಸವ ಭಾನುವಾರ ಸಂಜೆ ಶ್ರೀಗುರು ಮಹಾಲಿಂಗೇಶ್ವರ ಮಠದ ಶಿವಯೋಗಿ ಮಹಾಲಿಂಗೇಶ್ವರ ಮಹಾಸ್ವಾಮೀಜಿ ಪೂಜೆ ಸಲ್ಲಿಸಿ, ಮಹಾಮಂಗಳಾರತಿಯೊಂದಿಗೆ ಭಕ್ತಿಭಾವದ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರಕರ್ನಾಟಕದ ಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಜಾತ್ರೆಗಳಲ್ಲಿ ಒಂದಾದ ಮಹಾಲಿಂಗಪುರದ ಶ್ರೀಗುರು ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದ ಮರು ರಥೋತ್ಸವ ಭಾನುವಾರ ಸಂಜೆ ಶ್ರೀಗುರು ಮಹಾಲಿಂಗೇಶ್ವರ ಮಠದ ಶಿವಯೋಗಿ ಮಹಾಲಿಂಗೇಶ್ವರ ಮಹಾಸ್ವಾಮೀಜಿ ಪೂಜೆ ಸಲ್ಲಿಸಿ, ಮಹಾಮಂಗಳಾರತಿಯೊಂದಿಗೆ ಭಕ್ತಿಭಾವದ ಚಾಲನೆ ನೀಡಿದರು.
ಶನಿವಾರ ಸಂಜೆ 7 ಗಂಟೆಗೆ ಅದ್ಧೂರಿಯಾಗಿ ಆರಂಭಗೊಂಡ ತುಂಬಿದ ತೇರಿನ ರಥೋತ್ಸವ, ಸಾವಿರಾರು ಭಕ್ತರ ಜಯಘೋಷದ ನಡುವೆ ಸಾಗಿಬಂದು ಭಾನುವಾರ ಬೆಳಗ್ಗೆ 6 ಗಂಟೆಗೆ ಚನ್ನಗಿರೇಶ್ವರ ದೇವಸ್ಥಾನವನ್ನು ತಲುಪಿ, ಬಳಿಕ ವಾಡಿಕೆಯಂತೆ ಭಾನುವಾರ ಸಂಜೆ ಮರು ತೇರಿನ ಉತ್ಸವಕ್ಕೆ ಚಾಲನೆ ನೀಡಲಾಗಿದ್ದು, ಮರು ತೇರಿನ ದರ್ಶನಕ್ಕಾಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮರು ತೇರಿನ ಮುಂಭಾಗದಲ್ಲಿ ಕರಡಿ ಮಜಲು ಸೇರಿದಂತೆ ವಿವಿಧ ಮಂಗಳವಾದ್ಯಗಳ ನಿನಾದ ಮೊಳಗುತ್ತಿದ್ದರೆ, ಬಂಡಿ ಉಚ್ರಾಯಿ, ಕಂಡ್ಯಾಳ ಬಾಸಿಂಗ, ನಂದಿಕೋಲು ಹಾಗೂ ವಿವಿಧ ಜಾನಪದ ಮತ್ತು ಸಾಂಸ್ಕೃತಿಕ ಕಲಾ ತಂಡಗಳು ಉತ್ಸವಕ್ಕೆ ವಿಶೇಷ ಮೆರುಗು ನೀಡಿದವು. ವಾದ್ಯಗಳ ಸದ್ದು, ಭಕ್ತರ ಜಯಘೋಷ ಹಾಗೂ ದೇವರ ನಾಮಸ್ಮರಣೆಯಿಂದ ಪಟ್ಟಣದ ವಾತಾವರಣವೇ ಭಕ್ತಿಮಯವಾಗಿತ್ತು.ಮಠದ ಭಕ್ತರು ಬೆಂಡು, ಬೆತ್ತಾಸ್, ಉತ್ತುತ್ತಿಗಳನ್ನು ಹಾರಿಸಿ ತಮ್ಮ ಭಕ್ತಿಭಾವವನ್ನು ಸಮರ್ಪಿಸಿದರು. ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ಮರು ತೇರು ರಾತ್ರಿ ವೇಳೆಯಲ್ಲಿ ಕಣ್ಮನ ಸೆಳೆಯುವಂತಿತ್ತು. ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ತೇರನ್ನು ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ತೇರಿನ ದರ್ಶನ ಪಡೆದ ಭಕ್ತರು ದೇವರಿಗೆ ಕಾಯಿ, ಕರ್ಪೂರ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಅರ್ಪಿಸಿ ಹರಕೆ ತೀರಿಸಿದರು.
ಪಟ್ಟಣದ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಮಾಲೆಯೇ ನಡೆಯಿತು. ಬಯಲಾಟ, ಡೊಳ್ಳಿನ ಹಾಡು, ಪಾರಿಜಾತ, ಭಜನೆ, ರಸಮಂಜರಿ, ಚೌಡಕಿ ಪದ, ಗೀ ಗೀ ಪದ ಹಾಗೂ ಶಾವರಿಕೆ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ಜಾತ್ರೆಯ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸಿದವು. ಒಂದೆಡೆ ತೇರಿನ ಮೆರವಣಿಗೆ, ಮತ್ತೊಂದೆಡೆ ಜಾನಪದ ಕಲಾ ಪ್ರದರ್ಶನಗಳು ನಡೆಯುತ್ತಿದ್ದರಿಂದ ಇಡೀ ಪಟ್ಟಣವೇ ಸಂಭ್ರಮದ ತಾಣವಾಗಿ ಮಾರ್ಪಟ್ಟಿತ್ತು. ಜಾತ್ರೆಗೆ ಆಗಮಿಸಿದ ಲಕ್ಷಾಂತರ ಭಕ್ತರಿಗೆ ನಿರಂತರ ಅನ್ನದಾಸೋಹದ ವ್ಯವಸ್ಥೆಯನ್ನು ಜಾತ್ರಾ ಸಮಿತಿ ವತಿಯಿಂದ ಕಲ್ಪಿಸಲಾಗಿದ್ದು, ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಜನರು ಸೇರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ಭಾನುವಾರ ರಾತ್ರಿ ಜರುಗಿದ ಮರುತೇರು ಸೋಮವಾರ ಬೆಳಗಿನ ಜಾವ 6 ಗಂಟೆಗೆ ಮಹಾಲಿಂಗೇಶ್ವರ ದೇವಸ್ಥಾನವನ್ನು ತಲುಪಿತು. ಸೋಮವಾರ ಸ್ಥಳೀಯ ಮಹಾತ್ಮ ಗಾಂಧಿ ಕ್ರೀಡಾಂಗಣದ ಕುಸ್ತಿ ಮೈದಾನದಲ್ಲಿ ಜಂಗೀ ನಿಕಾಲಿ ಕುಸ್ತಿಗಳು ಜರುಗಿದವು. ನೂರಾರು ಕುಸ್ತಿಪಟುಗಳು ಹಾಗೂ ಸಾವಿರಾರು ಕುಸ್ತಿ ಪ್ರೇಮಿಗಳು ಹಾಗೂ ಪ್ರೇಕ್ಷಕರು ಪಂದ್ಯಾವಳಿ ವೀಕ್ಷಿಸಿ ಸಂಭ್ರಮಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.