ಹುಬ್ಬಳ್ಳಿ: ಕಳೆದ 12 ದಿನಗಳಿಂದ ಇಲ್ಲಿನ ವರೂರಲ್ಲಿ ನಡೆದ ನವಗ್ರಹ ತೀರ್ಥದ ತೀರ್ಥಂಕರ ಮಹಾಮಸ್ತಕಾಭಿಷೇಕ ಮಹೋತ್ಸವವು ಭಾನುವಾರ ಸಂಪನ್ನಗೊಂಡಿತ್ತು. ವಿವಿಧ ರಾಜ್ಯಗಳ ಗಣ್ಯಾತಿಗಣ್ಯರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದೇ ಸಂದರ್ಭದಲ್ಲಿ ಮಹಾಮಸ್ತಕಾಭಿಷೇಕದಲ್ಲಿ ಉಳಿದ ಹಣವನ್ನು ಜಿಲ್ಲೆಯ ಸರ್ಕಾರಿ ಶಾಲೆಗಳ ಮೇಲ್ಛಾವಣಿ ಅಭಿವೃದ್ಧಿಗೆ ನೀಡುವುದಾಗಿ ಆಚಾರ್ಯ ಗುಣಧರನಂದಿ ಮಹಾರಾಜರು ಹೇಳಿದರಲ್ಲದೇ, ಇನ್ನಷ್ಟು ದಾನ ನೀಡುವುದಾಗಿ ತಿಳಿಸಿದರು. ಕ್ಷೇತ್ರದಲ್ಲಿ ಮುಂದಿನ ವರ್ಷದಿಂದ ಉಚಿತ ಸಿಬಿಎಸ್‌ಸಿ ಸ್ಕೂಲ್ ಆರಂಭಿಸಿ ಬಡವರಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದರು.ಕೊನೆಯ ದಿನದ ಮಹಾಮಸ್ತಕಾಭಿಷೇಕದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಸಂತೋಷ ಲಾಡ್, ಅಹಿಂಸೆಯನ್ನೇ ತನ್ನ ಪರಮ ತತ್ವವನ್ನಾಗಿ ಪಾಲಿಸುವ ಜೈನ ಸಮುದಾಯವು ಬಿಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಉಳಿದೆಲ್ಲ ಸಮಾಜಗಳನ್ನು ಒಗ್ಗೂಡಿಸಿಕೊಂಡು, ಇಡೀ ಸಮಾಜಕ್ಕೆ ನೆರವು ನೀಡುವ ಸದ್ಗುಣ ಹೊಂದಿದೆ ಎಂದರು.
ಕಳೆದ 12 ದಿನಗಳ ಕಾಲ ನಡೆದ ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳಿಂದಾಗಿ ವರೂರು ತೀರ್ಥಕ್ಷೇತ್ರದ ಮೂಲಕ ಧಾರವಾಡ ಜಿಲ್ಲೆಯು ದೇಶಾದ್ಯಂತ ಪ್ರಸಿದ್ಧಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಎಲ್ಲ ಧರ್ಮಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ತೀರ್ಥಕ್ಷೇತ್ರದ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದರು.ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಇಂತಹ ಮಹಾನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಖುಷಿ ನೀಡಿದೆ. ಮನುಷ್ಯ ತನ್ನ ಬಗ್ಗೆಯೇ ಚಿಂತೆ ಮಾಡುವುದನ್ನು ಬಿಟ್ಟು ಇನ್ನೊಬ್ಬರ ಕುರಿತು, ಸಮಾಜದ ಕುರಿತು ಚಿಂತನೆ ಮಾಡಬೇಕು. ಒಳ್ಳೆಯದನ್ನು ಹೇಗೆ ಮಾಡಬೇಕು ಎಂಬುದನ್ನು ಅಚಾರ್ಯರ ಉಪದೇಶಗಳು ಹೇಳಿಕೊಟ್ಟಿವೆ ಎಂದರು.
ಈ ವೇಳೆ ಬೆಂಗಳೂರು ಕೈಲಾಸ ಆಶ್ರಮದ ರಾಜೇಶ್ವರನಂದಿ ಶ್ರೀಗಳು, ಜಿಪಂ ಸಿಇಒ ಭುವನೇಶ್ವರ ಪಾಟೀಲ, ಎಸ್ಪಿ ಡಾ. ಗೋಪಾಲ ಬ್ಯಾಕೋಡ್, ಅಪರ ಜಿಲ್ಲಾಧಿಕಾರಿ ಗೀತಾ, ಸಹಾಯಕ ಆಯುಕ್ತ ಶಾಲಂ ಹುಸೇನ್, ಮಾಜಿ ಸಚಿವ ವೀರಕುಮಾರ ಪಾಟೀಲ, ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಪ್ರಚಾರ ಸಮಿತಿ ಅಧ್ಯಕ್ಷ ವಿಮಲ ತಾಳಿಕೋಟಿ ಸೇರಿದಂತೆ ಹಲವರಿದ್ದರು.ಬಾಕ್ಸ್...
ಜಿಲ್ಲೆಯ ಶಾಲೆಗಳಿಗೆ ದಾನದ ಹಣಧಾರವಾಡ ಜಿಲ್ಲೆಯ ಎಲ್ಲ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಇರುವ ಹೆಂಚು ತೆಗೆದು ಕಾಂಕ್ರಿಟ್ ಸ್ಲ್ಯಾಬ್ ಹಾಕಿಸಲು ಮಹಾಮಸ್ತಕಾಭಿಷೇಕ ವೆಚ್ಚವನ್ನು ಪಾವತಿಸಿ ಉಳಿದ ದಾನದ ದುಡ್ಡನ್ನು ಕಾಣಿಕೆಯಾಗಿ ಕೊಡುವುದಾಗಿ ಆಚಾರ್ಯ ಗುಣಧರ ನಂದಿ ಮಹಾರಾಜರು ಇದೇ ಸಂದರ್ಭದಲ್ಲಿ ಘೋಷಿಸಿದರು. ಬಡ ಮಕ್ಕಳಿಗೆ ಖಾಸಗಿ ಸಿಬಿಎಸ್‌ಸಿ ಶಾಲೆಯಲ್ಲಿ ಕಲಿಸಲು ಆರ್ಥಿಕ ಅನುಕೂಲವಿಲ್ಲ. ಅಂತಹ ಪ್ರತಿಭಾವಂತ ಮಕ್ಕಳಿಗೆ ತೀರ್ಥಕ್ಷೇತ್ರದಲ್ಲಿ ಮುಂದಿನ ವರ್ಷದಿಂದ ಉಚಿತವಾಗಿ ಶಿಕ್ಷಣ ನೀಡಲಾಗುವುದು ಎಂದರು.
ತಿರಂಗಾ ಅಭಿಷೇಕ, ಹೋಮಮಹಾಮಸ್ತಕಾಭಿಷೇಕ ಕೊನೆಯ ದಿನವಾದ ಭಾನುವಾರ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಪವಿತ್ರ ಜಲಗಳಿಂದ ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕ ಜರುಗಿತು. 9999 ಹೋಮ ಕುಂಡಗಳಲ್ಲಿ ಹವನ ನಡೆಯಿತು. ಗಣರಾಜ್ಯೋತ್ಸವ ಅಂಗವಾಗಿ 405 ಅಡಿ ಎತ್ತರದ ಸುಮೇರು ಪರ್ವತದ ಮೇಲೆ ತ್ರಿವರ್ಣ ಧ್ವಜ ಹಾರಾಡಿತು. ಜತೆಗೆ ಜೈನ ಧರ್ಮದ ಪಂಚರಂಗಿ ಧ್ವಜವನ್ನೂ ಆರೋಹಣ ಮಾಡಲಾಯಿತು. 12 ದಿನಗಳ ಕಾಲ ಶಾಸ್ತ್ರೋಕ್ತವಾಗಿ ವಿಧಿ- ವಿಧಾನಗಳನ್ನು ನೆರವೇರಿಸಿದ ಶ್ರೀಮಂತರ ಪಂಡಿತ, ಮಧುರ ಶಾಸ್ತ್ರಿ, ದೀಪಕ ಪಂಡಿತ ಮತ್ತು ಇತರ ಪಂಡಿತರನ್ನು ಆಚಾರ್ಯರು ಗೌರವಿಸಿದರು.
ಇದೇ ಸಂದರ್ಭದಲ್ಲಿ ಗುರುದೇವ ಆಚಾರ್ಯ ಕುಂತು ಸಾಗರ ಮಹಾರಾಜರು ಶಿಕ್ಷಣ ಮತ್ತು ಧರ್ಮಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಆಚಾರ್ಯ ಗುಣಧರ ನಂದಿ ಅವರಿಗೆ ರಾಜರ್ಷಿ ಮತ್ತು ಶಿಕ್ಷಣ ಮಹರ್ಷಿ ಬಿರುದು ನೀಡಿ ಗೌರವಿಸಿದರು.