ಅಜೀಜಅಹ್ಮದ ಬಳಗಾನೂರ
ಕ್ರಿಕೆಟ್ ಅಭಿಮಾನಿಗಳ ಬಹುನಿರೀಕ್ಷಿತ "ಮಹಾರಾಜ ಟ್ರೋಫಿ ಟಿ-20 " ಕ್ರಿಕೆಟ್ ಟೂರ್ನಿಯ 5ನೇ ಆವೃತ್ತಿಯ ಪಂದ್ಯಗಳಿಗೆ ಆತಿಥ್ಯ ವಹಿಸಲು ಇಲ್ಲಿನ ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣ ಸಜ್ಜುಗೊಂಡಿದೆ.
ಫೆಬ್ರುವರಿಯಲ್ಲಿ ಇದೇ ಮೈದಾನದಲ್ಲಿ ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರ ತಂಡಗಳ ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯವನ್ನು ಆಯೋಜಿಸಿ ಯಶಸ್ವಿಯಾಗಿತ್ತು. ಇದೀಗ ಮತ್ತೊಂದು ಟೂರ್ನಿಗೆ ಆತಿಥ್ಯ ವಹಿಸುತ್ತಿದೆ. ಗುರುವಾರ ರಾತ್ರಿಯೇ ನಗರಕ್ಕೆ ಎಲ್ಲ ತಂಡಗಳ ಆಟಗಾರರು ಬಂದಿಳಿದ್ದು ಶುಕ್ರವಾರ ಬೆಂಗಳೂರು, ಶಿವಮೊಗ್ಗ ಹಾಗೂ ಮೈಸೂರು ತಂಡದ ಆಟಗಾರರು ತಾಲೀಮು ನಡೆಸಿದರು.ಬೆಂಗಳೂರು ಹಾಗೂ ಮೈಸೂರಿಗೆ ಮಾತ್ರ ಸೀಮಿತವಾಗಿದ್ದ ಮಹಾರಾಜ ಟ್ರೋಫಿ ಪಂದ್ಯಗಳು ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವುದು ಅಭಿಮಾನಿಗಳಲ್ಲಿ ಸಂಭ್ರಮವನ್ನುಂಟು ಮಾಡಿದೆ.
ಜೂ. 27ರಿಂದ ಜು. 3ರ ವರೆಗೆ ನಡೆಯಲಿದ್ದು ಮಹಾರಾಜ ಟ್ರೋಫಿಯ ಆಡಳಿತ ಮಂಡಳಿ ಸದಸ್ಯ ಎ.ವಿ. ಶಶಿಧರ ಹುಬ್ಬಳ್ಳಿಯಲ್ಲೇ ಬೀಡು ಬಿಟ್ಟಿದ್ದು, ಎಲ್ಲ ಸಿದ್ಧತೆ ಪರಿಶೀಲಿಸುತ್ತಿದ್ದಾರೆ. 7 ಹೊನಲು (ಹಗಲು), 5 ರಾತ್ರಿ ಸೇರಿ ಒಟ್ಟು 12 ಪಂದ್ಯ ನಡೆಯುತ್ತಿವೆ. ಈ ಹಿನ್ನೆಲೆ ಕ್ರೀಡಾಂಗಣದ 4 ಫ್ಲಡ್‌ಲೈಟ್ ಕಂಬದಲ್ಲಿದ್ದ ಹಳೆಯ ಹ್ಯಾಲೋಜನ್ ದೀಪಗಳ ಬದಲಿಗೆ ಎಲ್‌ಇಡಿ ಫ್ಲಡ್‌ಲೈಟ್ ಅಳವಡಿಸಲಾಗಿದೆ. ಸೋನಿ ನೆಟ್‌ವರ್ಕ್ ಸಂಸ್ಥೆಯ ತಂಡವೂ ಮೈದಾನಕ್ಕೆ ಭೇಟಿ ನೀಡಿ ನೇರ ಪ್ರಸಾರದ ಸಿದ್ಧತೆ ಮಾಡಿಕೊಂಡಿದೆ.
ಮಳೆ ಆರಂಭವಾಗಿರುವ ಹಿನ್ನೆಲೆ ಪಂದ್ಯದ ವೇಳೆ ಮಳೆ ಬಂದರೆ ಮುಂಜಾಗೃತಾ ಕ್ರಮವಾಗಿ ಮೈದಾನದ ಪಿಚ್‌ಗೆ ಆಗುವಷ್ಟು 100*120 ಅಡಿಗಳ ಮೂರು ತಾಡಪತ್ರಿ (ಹೊದಿಕೆ) ವ್ಯವಸ್ಥೆ ಮೊದಲಿನಿಂದಲೂ ಇದೆ. ಪೂರ್ಣ ಪ್ರಮಾಣದಲ್ಲಿ ಮೈದಾನದ ರಕ್ಷಣೆಗಾಗಿ ಈಗಾಗಲೇ ಬೆಳಗಾವಿಯಿಂದ 2 ಹೊದಿಕೆ ಹಾಗೂ ಕೆಎಸ್‌ಸಿಎದಿಂದ ಹೆಚ್ಚುವರಿ 3 ಹೊದಿಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಎರಡು ಸೂಪರ್ ಶಾಪರ್ ಯಂತ್ರ, ಎರಡು ಲಾನ್ ಮೂವರ್, ರೋಲರ್, ಗ್ರಾಸ್ ಕಟಿಂಗ್ ಮಷಿನ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಪ್ರತಿದಿನ ಮಧ್ಯಾಹ್ನ 2ಕ್ಕೆ ಒಂದು ಪಂದ್ಯ ಆರಂಭವಾದರೆ, ಸಂಜೆ 7 ಗಂಟೆಗೆ ಮತ್ತೊಂದು ಪಂದ್ಯ ಆರಂಭವಾಗಲಿದೆ. ಭಾನುವಾರವಷ್ಟೇ ಮಧ್ಯಾಹ್ನ 1 ಗಂಟೆಗೆ ಪಂದ್ಯ ಆರಂಭವಾಗಲಿದೆ. ಒಟ್ಟು 12 ಪಂದ್ಯಗಳಲ್ಲಿ 5 ದಿನ ಪ್ರತಿದಿನ ಎರಡು ಪಂದ್ಯ ನಡೆದರೆ, ಭಾನುವಾರ ಮತ್ತು ಬುಧವಾರ ಮಾತ್ರ ಒಂದೊಂದು ಪಂದ್ಯ ನಡೆಯಲಿವೆ.
ಶನಿವಾರ ಮೊದಲನೇ ದಿನ ಮಧ್ಯಾಹ್ನ ಶಿವಮೊಗ್ಗ ಯೋಧಾಸ್ ಹಾಗೂ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ಮಧ್ಯ ನಡೆದರೆ, ರಾತ್ರಿ ಮೈಸೂರ ವಾರಿಯರ್ಸ್ ಹಾಗೂ ಗುಲ್ಬರ್ಗಾ ಮೈಸ್ಟಿಕ್ಸ್ ಮಧ್ಯ ಪಂದ್ಯ ನಡೆಯಲಿವೆ.