ಹವಾನಿಯಂತ್ರಿತ ಕೊಠಡಿಯಲ್ಲಿರುವ ಮಹಾರಾಜರು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವುದನ್ನು ಸ್ವಾಗತಿಸುತ್ತೇನೆ ಎಂದು ಸಂಸದ ಪ್ರತಾಪ ಸಿಂಹ ಅವರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಕಾಲೆಳೆದು, ವ್ಯಂಗ್ಯವಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಹವಾನಿಯಂತ್ರಿತ ಕೊಠಡಿಯಲ್ಲಿರುವ ಮಹಾರಾಜರು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವುದನ್ನು ಸ್ವಾಗತಿಸುತ್ತೇನೆ. ಮಹಾರಾಜರು ರಾಜಕಾರಣಕ್ಕೆ ಬಂದು ಜನ ಸಾಮಾನ್ಯರ ಬಳಿಗೆ ಬರಲಿದ್ದಾರೆ. ಅವರು ರಾಜಕಾರಣಕ್ಕೆ ಬಂದರೆ ಜನರಿಗೆ ಹಲವಾರು ರೀತಿಯ ಅನುಕೂಲ ಆಗಲಿದೆ. ಮಹಾರಾಜರು ಜನ ಸಾಮಾನ್ಯರಿಗೆ, ಪಕ್ಷದ ನಾಯಕರಿಗೆ ಕೈ ಮುಗಿಯಬೇಕು ಎಂದು ಸಂಸದ ಪ್ರತಾಪ ಸಿಂಹ ಅವರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಕಾಲೆಳೆದು, ವ್ಯಂಗ್ಯವಾಡಿದ್ದಾರೆ.ಮೈಸೂರಿನಲ್ಲಿ ಮಂಗಳವಾರ ನಡೆದ ಬಿಜೆಪಿಯ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿ ಸಭೆಗೆ ಆಗಮಿಸಿದ ಪ್ರತಾಪ ಸಿಂಹ ಸುದ್ದಿಗಾರರೊಂದಿಗೆ ಮಾತನಾಡಿದರು. ಅರಮನೆಯ ಎಸಿ ರೂಂನಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕಲು ಯದುವೀರ್ ಬಂದರೆ ಸ್ವಾಗತಿಸದೇ ಇರುವುದಕ್ಕೆ ಆಗುತ್ತಾ?. ರಾಜ- ಪ್ರಜೆ ನಡುವೆ ವ್ಯತ್ಯಾಸ ತೆಗೆದು ರಾಜರೇ ಪ್ರಜೆಗಳ ಜೊತೆ ಇರಲು ಬಂದರೆ ನನ್ನ ಸ್ವಾಗತ. ಪಕ್ಷದ ಸಿದ್ಧಾಂತದಂತೆ ನಾಯಕರು ವೇದಿಕೆಯ ಮೇಲೆ ಆಸೀನರಾದರೆ, ಜನಸಾಮಾನ್ಯರ ಸಾಲಿನಲ್ಲಿ ಮಹಾರಾಜರು ಕೂರಬೇಕು ಎಂದರು.
ಮೈಸೂರು ಅರಮನೆಯ ಆಸ್ತಿ ವಿಚಾರದಲ್ಲಿ ಸರ್ಕಾರದ ನಡುವೆ ವ್ಯಾಜ್ಯಗಳಿವೆ. ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿವೆ. ಯದುವೀರ್ ಜನಪ್ರತಿನಿಧಿಯಾಗಿ ಅದನ್ನೆಲ್ಲಾ ಜನರಿಗೆ ಬಿಟ್ಟು ಕೊಡುತ್ತಾರೆ. ಚಾಮುಂಡಿಬೆಟ್ಟದ ಮೇಲಿನ ಅರಮನೆಯ ಆವರಣದ ಒಳಗೆ ಪೈಪ್ ಲೈನ್ ಹಾಕಲು ಅರಮನೆ ವಿರೋಧಿಸಿದೆ. ಯದುವೀರ್ ಜನಪ್ರತಿನಿಧಿಯಾದರೆ ಆ ಸಮಸ್ಯೆ ಬಗೆಹರಿಯುತ್ತದೆ. ರಾಜೇಂದ್ರ ಶ್ರೀಗಳ ಪ್ರತಿಮೆ ವಿಚಾರದಲ್ಲಿ ಅರಮನೆಯವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಯದುವೀರ್ ಈ ಸಮಸ್ಯೆ ಬಗೆಹರಿಸಿ ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣ ಮಾಡುತ್ತಾರೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
25 ಸಂಸದರಲ್ಲಿ ನನ್ನಷ್ಟು ಹಿಂದುತ್ವದ ಕಮಿಟ್ ಮೆಂಟ್ ಇರುವವರು ಮತ್ಯಾರು ಇದ್ದಾರೆ?. ಹಳೆ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಏಕೈಕ ವ್ಯಕ್ತಿ ಪ್ರತಾಪ ಸಿಂಹ. ಸಿದ್ದರಾಮಯ್ಯ ವಿರುದ್ಧ ಮಾತನಾಡಲು ನಮ್ಮ ನಾಯಕರಿಗೆ ತೊಡೆ ನಡುಗುತ್ತೆ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದರು.
ಈಗಲೂ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ. ಪಕ್ಷದ ಅಭ್ಯರ್ಥಿ ಪರ ಬಂಟಿಂಗ್ಸ್, ಬ್ಯಾನರ್ ಕಟ್ಟಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತೇನೆ ಎನ್ನುವ ಮೂಲಕ ಟಿಕೆಟ್ ಕೈ ತಪ್ಪಿರುವ ಸುಳಿವು ನೀಡಿದರು.
ಅರಮನೆ ಒಳಗೆ ಆರಾಮಾಗಿ ಇದ್ದಂತಹ ವ್ಯಕ್ತಿ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡಲು ಬೀದಿಗೆ ಬಂದರೆ ನಮಗೆ ಸಂತೋಷ. ಅರಮನೆ ವೈಭೋಗ ಬೇಕಾಗಿಲ್ಲ. ಜನರ ಜೊತೆ ಹೋರಾಟಕ್ಕೆ ಬರ್ತೀನಿ ಅಂತಾ ಹೊರಟಿದ್ದಾರೆ. ಅದಕ್ಕೆ ಸ್ವಾಗತ. ಪೊಲೀಸ್ ಠಾಣೆಗೆ ಬಂದು ನಮ್ಮ ಕಾರ್ಯಕರ್ತರ ಸಮಸ್ಯೆ ಬಗೆಹರಿಸಲು ರಾಜರು ಬಂದರೆ ಸಂತೋಷ ಅಲ್ವಾ?. ಅರಮನೆಯ ಸುಪತ್ತಿಗೆಯಲ್ಲಿ ಇದ್ದ ನಮ್ಮ ಮಹಾರಾಜರನ್ನು ಮನವೊಲಿಸಿ ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೆ ಧನ್ಯವಾದಗಳು ಎಂದರು.
ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಅವರು ನನ್ನನ್ನು ಭೇಟಿ ಮಾಡಲು ಕರೆದಿದ್ದು, ಬೆಂಗಳೂರಿಗೆ ತೆರಳುತ್ತೇನೆ. ನನಗೆ ಈ ಕ್ಷಣಕ್ಕೂ ವಿಶ್ವಾಸವಿದೆ. ಸಂಘಟನೆ, ಸಿದ್ಧಾಂತಕ್ಕೆ ಗಟ್ಟಿಯಾಗಿ ನಿಂತಿರುವ ನನಗೆ ಟಿಕೆಟ್ ಸಿಗುತ್ತದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.