ಶಿವಾನಂದ ಅಂಗಡಿ
ಹುಬ್ಬಳ್ಳಿ: ವಾಣಿಜ್ಯ ರಾಜಧಾನಿಯ ಖ್ಯಾತಿಯ ಹುಬ್ಬಳ್ಳಿಯ ಮಾರುಕಟ್ಟೆಗೆ ಮಹಾರಾಷ್ಟ್ರದ ಮಾವಿನಹಣ್ಣು ಲಗ್ಗೆ ಇಟ್ಟಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿ ರಾಜ್ಯದ ಬಹುತೇಕ ಪಟ್ಟಣ, ನಗರದ ಮಾರುಕಟ್ಟೆಗಳಲ್ಲಿ ಇನ್ಮೇಲೆ ಜೂನ್ ವರೆಗೂ ಮಾವು ಸಿಗಲಿದೆ.ಸ್ಥಳೀಯ ಮಾವಿನ ಹಣ್ಣು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಆದರೆ ಮಹಾರಾಷ್ಟ್ರದ ಕೊಲ್ಲಾಪುರದ ಮಾವಿನಹಣ್ಣುಗಳು ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳನ್ನು ಪ್ರವೇಶಿಸಿದ್ದು, ಹಂಗಾಮಿಗೆ ಮುಂಚೆಯೇ ಗ್ರಾಹಕರನ್ನು ಆಕರ್ಷಿಸುತ್ತಿವೆ. ವಿಶೇಷವಾಗಿ ರತ್ನಾಗಿರಿಯ ಆಪೋಸ ಮಾವಿನಹಣ್ಣುಗಳು ಎಲ್ಲೆಡೆ ಪ್ರಖ್ಯಾತವಾಗಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ.
₹200, ₹100 ಕಡಿಮೆ: ಸೋಮವಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಸಣ್ಣ ಗಾತ್ರದ ಮಾವಿನ ಹಣ್ಣಗಳು ಡಜನ್‌ಗೆ ₹ 500ರಿಂದ ₹600, ದೊಡ್ಡ ಹಣ್ಣುಗಳು ₹ ₹900 ವರೆಗೂ ಮಾರಾಟವಾಗಿವೆ. ಎರಡ್ಮೂರು ದಿನದ ಹಿಂದಷ್ಟೇ ಡಜನ್‌ಗೆ ಸಾವಿರ ರು.ವರೆಗೆ ಮಾರಾಟವಾಗಿದ್ದು, ಆದರೆ ಸೋಮವಾರ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳು ಆಗಮಿಸಿದ್ದು, ದಳ ಇಳಿಮುಖವಾಗಿದೆ. ಆದರೆ, ಮಾವುಗಳಲ್ಲಿ ಘಮಘಮಿಸುವ ವಾಸನೆ ಇಲ್ಲ. ಕ್ಯಾಲ್ಸಿಯಂ ಕಾಬ್ರೈಡರ್ ದ್ರಾವಣ ಹಾಕುವುದರಿಂದ ಹಣ್ಣಾಗಲು ಸಿದ್ಧವಾದ ಕಾಯಿ ಪ್ಯಾಕ್ ಮಾಡಿದ ಎರಡು ದಿನಗಳಲ್ಲಿ ಹಣ್ಣಾಗುತ್ತದೆ. ಇಂಥ ಹಣ್ಣುಗಳು ಆರೋಗ್ಯಕ್ಕೆ ಹಾನಿಕಾರಕ ಎನ್ನುತ್ತಾರೆ ತೋಟಗಾರಿಕೆ ಅಧಿಕಾರಿಗಳು. ಭರಪೂರ ಹಂಗಾಮು ಸಹ ಆರಂಭವಾಗದ ಹಿನ್ನೆಲೆಯಲ್ಲಿ ಗ್ರಾಹಕರು ಮಾವು ಖರೀದಿಗೆ ಇನ್ನು ಹೆಚ್ಚಾಗಿ ಆಸಕ್ತಿ ತೋರಿಸುತ್ತಿಲ್ಲ.
ಶುಚಿ ರುಚಿಯ ಮಾವಿನ ಹಣ್ಣಿಗೆ ಧಾರವಾಡ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದ್ದು, ಇಲ್ಲಿ ಬೆಳೆಯುವ ಮಾವಿಗೆ ಭಾರೀ ಬೇಡಿಕೆ ಇದೆ. ಆದರೆ ಏಪ್ರಿಲ್ 15ರ ಬಳಿಕ ಮಾರುಕಟ್ಟೆಗೆ ಬರುತ್ತದೆ. ಆಗ ಮಾವಿನ ಹಂಗಾಮು ಜೋರಾಗಲಿದ್ದು, ಮಾರುಕಟ್ಟೆಯ ಮೂಲೆ ಮೂಲೆಗಳಲ್ಲಿ ಮಾವಿನ ಘಮ ಘಮ ಪಸರಿಸಲಿದೆ. ದರವೂ ಕೂಡ ಇಳಿಮುಖವಾಗಲಿದ್ದು, ಮಾವು ಪ್ರಿಯರು ಇನ್ನು ಕೆಲ ದಿನಗಳು ಕಾಯಬೇಕಾಗಿದೆ.ವ್ಯಾಪಾರಸ್ಥರಿಗೆ ಸುಗ್ಗಿ ಕಾಲ: ಇಲ್ಲಿಯ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯಲ್ಲಿ ಹಣ್ಣು ಮಾರಾಟಕ್ಕಾಗಿ ಪ್ರತ್ಯೇಕ ಮಾರುಕಟ್ಟೆ ಇದ್ದು, ಕಲ್ಲಂಗಡಿ, ಕರಬೂಜ, ಫೈನಾಪಲ್, ಅನ್ಯ ರಾಜ್ಯದ ಸೇಬು, ಮೊಸಂಬಿ ಹೀಗೆ ತರಹೇವಾರಿ ಹಣ್ಣುಗಳ ಸುಗ್ಗಿ ಮಧ್ಯೆಯೇ ಈಗ ಮಹಾರಾಷ್ಟ್ರದಿಂದ ಮಾವಿನಹಣ್ಣುಗಳು ಆಗಮಿಸುತ್ತಿದ್ದು, ವ್ಯಾಪಾರಸ್ಥರು ಬೇರೆ ಹಣ್ಣುಗಳ ಜತೆಗೆ ಮಾವು ಸಹ ಖರೀದಿಸಿ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.
ಹುಬ್ಬಳ್ಳಿ ಮಹಾನಗರಲ್ಲೇ ಕಾಯಿಪಲ್ಲೆ ಮಾರಾಟದಂತೆ ಹಣ್ಣುಗಳ ಮಾರಾಟದ ನೂರಾರು ವ್ಯಾಪಾರಸ್ಥರು ಬದುಕು ಕಟ್ಟಿಕೊಂಡಿದ್ದು, ಇಲ್ಲಿಯ ನವಲಗುಂದ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಮಾರಾಟಗಾರರು ಕಂಡು ಬರುತ್ತಾರೆ. ಮಾವು ಬರುತ್ತಿದ್ದಂತೆ ಇವರೆಲ್ಲ ಮೊದ ಮೊದಲು ಖರೀದಿಸಿ ಹೆಚ್ಚು ಹೆಚ್ಚು ಲಾಭ ಮಾಡಿಕೊಳ್ಳುತ್ತಾರೆ.ದರ ಇಳಿಕೆ: ಸ್ಥಳೀಯ ಮಾವು ಇನ್ನು ಮಾರುಕಟ್ಟೆಗೆ ಬಂದಿಲ್ಲ. ಸದ್ಯ ಮಹಾರಾಷ್ಟ್ರದ ಕೊಲ್ಲಾಪುರದಿಂದ ಮಾವಿನ ಹಣ್ಣುಗಳು ಆಗಮಿಸುತ್ತಿದ್ದು, ಮೂರ್ನಾಲ್ಕು ದಿನಗಳ ಹಿಂದೆ ದರ ಬಾಕ್ಸವೊಂದಕ್ಕೆ ಸಾವಿರ ರುಪಾಯಿಗಿಂತಲೂ ಅಧಿಕವಿತ್ತು. ಆದರೆ ಸೋಮವಾರ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಬಂದಿರುವುದರಿಂದ ಡಜನ್ ಎರಡ್ಮೂರು ನೂರು ಕಡಿಮೆಯಾಗಿದೆ ಎಂದು ಹುಬ್ಬಳ್ಳಿಯ ಇಂಡಿಯನ್ ಫ್ರೂಟ್ಸ್ ಅಂಗಡಿ ಮಾಲೀಕ ಮಹಿಬೂಬ ತಿಳಿಸಿದರು.
ಹೊಸ ಚಿಗುರು: ಏಪ್ರಿಲ್ 15ರ ನಂತರ ಸಾಮಾನ್ಯವಾಗಿ ಧಾರವಾಡದ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಈ ಬಾರಿ ಅಕ್ಟೋಬರ್, ನವೆಂಬರ್‌ನಲ್ಲಿ ಒಣ ಹವೆ ಇರಬೇಕಾಗಿತ್ತು. ಆದರೆ ವಿಪರೀತ ಮಳೆಯಿಂದಾಗಿ ಗಿಡಗಳಲ್ಲಿ ಹೊಸ ಚಿಗುರು ಬಂದಿದೆ. ಹೀಗಾಗಿ ಈ ಬಾರಿ ಮಾವಿನ ಇಳುವರಿಯೂ ಕುಸಿತವಾಗುವ ಸಾಧ್ಯತೆ ಇದೆ ಎಂದು ಧಾರವಾಡದ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಾಶೀನಾಥ ಭದ್ರಣ್ಣವರ ತಿಳಿಸಿದರು.