ಕನ್ನಡಪ್ರಭ ವಾರ್ತೆ ಮಂಡ್ಯ
ಮೈಸೂರು ಮಹಾರಾಜರು ನಿರ್ಮಿಸಿರುವ ಮೈಷುಗರ್ ಕಾರ್ಖಾನೆಯಲ್ಲಿ ಮಹಾರಾಷ್ಟ್ರದವರ ದರ್ಬಾರ್ ನಡೆದಿದೆ. ಕಂಪನಿ ನಿರ್ವಹಣೆ ಮತ್ತು ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿರುವ ಆರ್.ಬಿ.ಟೆಕ್ ಕಂಪನಿಯವರು ಸ್ಥಳೀಯ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಸದೆ ದುರಹಂಕಾರ, ದರ್ಪ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿರುವ ನೌಕರರು ಕಂಪನಿ ಅಧಿಕಾರಿಗಳ ದಬ್ಬಾಳಿಕೆ ವಿರುದ್ಧ ಹೋರಾಟಕ್ಕಿಳಿದಿದ್ದಾರೆ.ಸಕ್ಕರೆ ಕಾರ್ಖಾನೆ ಪ್ರವೇಶದ್ವಾರದಲ್ಲಿ ಕುಳಿತು ಗುರುವಾರ ಪ್ರತಿಭಟನೆ ನಡೆಸಿದ ನೌಕರರು, ಆರ್.ಬಿ.ಟೆಕ್ ಕಂಪನಿಯವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮೂರು ವರ್ಷಗಳ ಹಿಂದೆ ಸ್ಥಳೀಯ ನೂರು ಕಾರ್ಮಿಕರನ್ನು ಹೊರಗುತ್ತಿಗೆ ಆಧಾರದ ಮೇಲೆ ಆರ್.ಬಿ.ಟೆಕ್ ಕಂಪನಿಯವರು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ. ಕೆಲಸಕ್ಕೆ ನೇಮಿಸಿಕೊಂಡಂದಿನಿಂದಲೂ ಸರಿಯಾಗಿ ವೇತನ ಕೊಡುತ್ತಿಲ್ಲ. ಕಳೆದ ಡಿಸೆಂಬರ್ ತಿಂಗಳಿಂದ ನೌಕರರಿಗೆ ಸಂಬಳ ಕೊಟ್ಟಿಲ್ಲ. ವೇತನ ವಿಚಾರ ಪ್ರಸ್ತಾಪಿಸಿದರೆ ಈಗ ಸಂಬಳ ಕೊಡುವುದಕ್ಕೆ ಸಾಧ್ಯವಿಲ್ಲ. ಮುಂದೆ ನೋಡೋಣ ಎನ್ನುತ್ತಾರೆ. ಹಬ್ಬಕ್ಕೆ ಹಣ ಕೊಡಿ ಎಂದರೂ ಕೊಡುತ್ತಿಲ್ಲ. ಸರ್ಕಾರದಿಂದ ಹಣ ಪಡೆದುಕೊಂಡು ನಮಗೆ ನೀಡದೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ನೌಕರರು ಟೀಕಿಸಿದರು.ಮೊದಲು ಕಾರ್ಖಾನೆಯಲ್ಲಿ ಪಡೆಯುತ್ತಿದ್ದ ಸಂಬಳಕ್ಕಿಂತಲೂ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದೇವೆ. ಸ್ಥಳೀಯ ನೌಕರರಿಗೆ ೧೨ ಸಾವಿರ ರು.ನಿಂದ ೨೦ ಸಾವಿರ ರು.ವರೆಗೆ ಮಾತ್ರ ನೀಡುತ್ತಿದ್ದಾರೆ. ಸಂಬಳ ಕೇಳುತ್ತಿದ್ದೇವೆ ಎಂಬ ಕಾರಣಕ್ಕೆ ಈ ಸಾಲಿನಿಂದ ಕೆಲಸ ನಿರ್ವಹಿಸುವ ನೌಕರರಿಗೆ ಹೊಸ ಷರತ್ತುಗಳನ್ನು ವಿಧಿಸಿ ನೋಟಿಸ್ ಬೋರ್ಡ್‌ಗೆ ಹಾಕಿದ್ದಾರೆ. ನಿತ್ಯ ೧೨ ಗಂಟೆ ಕೆಲಸ ಮಾಡಬೇಕು, ಹೆಚ್ಚುವರಿ ಸಂಬಳ ಕೊಡುವುದಿಲ್ಲ. ವಾರದ ರಜೆ ಇರುವುದಿಲ್ಲ. ರಜೆ ಬೇಕೆನ್ನುವವರು ಒಂದು ವಾರ ಮೊದಲೇ ತಿಳಿಸಬೇಕು. ಒಮ್ಮೆ ವಾರದ ರಜೆ ಪಡೆದವರಿಗೆ ಮೂರು ದಿನಗಳ ಗೈರುಹಾಜರಿ ಇಲ್ಲವೇ ವೇತನ ಕಟಾವು ಮಾಡುವುದಾಗಿ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮೊಂದಿಗೆ ಮಹಾರಾಷ್ಟ್ರದ ೧೫೦ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಅವರೆಲ್ಲರಿಗೂ ಕನಿಷ್ಠ ೩೦ ಸಾವಿರ ರು.ನಿಂದ ೫೦ ಸಾವಿರ ರು.ವರೆಗೆ ವೇತನ ನೀಡುತ್ತಿದ್ದಾರೆ. ಸ್ಥಳೀಯರನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ. ನಮ್ಮ ಷರತ್ತುಗಳಿಗೆ ಒಪ್ಪಿ ಕೆಲಸ ಮಾಡುವುದಾದರೆ ಬನ್ನಿ. ಇಲ್ಲವೇ ಕೆಲಸಕ್ಕೇ ಬರಬೇಡಿ ಎಂದು ನೇರವಾಗಿ ಹೇಳುತ್ತಿದ್ದಾರೆ ಎಂದು ದೂರಿದರು.ಈ ವಿಚಾರವನ್ನು ಸ್ಥಳೀಯ ಶಾಸಕ ಪಿ.ರವಿಕುಮಾರ್ ಅವರ ಗಮನಕ್ಕೆ ಮೂರು ಬಾರಿ ತಂದಿದ್ದರೂ ಪರಿಹಾರ ದೊರಕಿಲ್ಲ. ಮೈಷುಗರ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದರೂ ಸರ್ಕಾರ ಆರ್.ಬಿ.ಟೆಕ್ ಕಂಪನಿಯವರಿಗೆ ಹಣ ಕೊಟ್ಟಿದೆ. ನೀವುಂಟು- ಅವರುಂಟು. ನಮಗೂ ನಿಮ್ಮ ಸಂಬಳಕ್ಕೂ ಸಂಬಂಧವಿಲ್ಲವೆಂಬಂತೆ ಹೇಳುತ್ತಿದ್ದಾರೆ. ನಮ್ಮ ಸಮಸ್ಯೆಗಳಿಗೆ ಯಾರೂ ಸ್ಪಂದಿಸದೇ ಇರುವುದರಿಂದ ನಾವೂ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿದಿದ್ದೇವೆ ಎಂದು ಹೇಳಿದರು.
ಸರ್ಕಾರ ವಾರ್ಷಿಕವಾಗಿ ಆರ್.ಬಿ.ಟೆಕ್ ಕಂಪನಿಗೆ ೨೩ ಕೋಟಿ ರು. ಕೊಟ್ಟರೂ ನಮಗೆ ಸಂಬಳ ನೀಡದೆ ಗುಲಾಮರಂತೆ ನಡೆಸಿಕೊಳ್ಳುತ್ತಿದೆ. ಮಹಾರಾಷ್ಟ್ರದಿಂದ ಬಂದು ನಮ್ಮ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದರೂ ಕೇಳೋರೇ ಇಲ್ಲದಂತಾಗಿದೆ. ಕಂಪನಿಯವರಿಂದ ನಮಗೆ ನ್ಯಾಯಬದ್ಧವಾಗಿ ಬರಬೇಕಾದ ವೇತನವನ್ನು ದೊರಕಿಸಿಕೊಡುವಂತೆ ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸೋಮಶೇಖರ್, ನಾಗೇಶ್, ನಾಗಾಚಾರಿ, ಬೋರಯ್ಯ, ಕೆಂಪೇಗೌಡ, ಮಹದೇವು, ಪ್ರಕಾಶ್, ಸಿದ್ದರಾಜು, ಸಿ.ಚಂದ್ರಶೇಖರ್, ಎಂ.ಪಿ.ರಾಘವೇಂದ್ರ, ಅರುಣ್‌ಕುಮಾರ್, ಚನ್ನಪ್ಪ, ದೇವರಾಜು ಇತರರಿದ್ದರು.
------ನನ್ನ ಗಮನಕ್ಕೆ ಬಂದಿಲ್ಲ
ನಾನು ದೆಹಲಿಯಲ್ಲಿದ್ದೇನೆ. ನೌಕರರು ವೇತನಕ್ಕಾಗಿ ನಡೆಸುತ್ತಿರುವ ಹೋರಾಟ ನನ್ನ ಗಮನಕ್ಕೆ ಬಂದಿಲ್ಲ. ಆರ್.ಬಿ. ಟೆಕ್ ಕಂಪನಿಯವರು ವೇತನ ನೀಡಬೇಕು. ದೆಹಲಿಯಿಂದ ಹಿಂತಿರುಗಿದ ಬಳಿಕ ಈ ವಿಚಾರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ದೊರಕಿಸಲು ಪ್ರಯತ್ನಿಸುವೆ.- ಸಿ.ಡಿ.ಗಂಗಾಧರ್, ಅಧ್ಯಕ್ಷರು, ಮೈಷುಗರ್ ಕಾರ್ಖಾನೆ