ಹಾನಗಲ್ಲ: ಬದುಕಿನ ಪರಿವರ್ತನೆಯಿಂದ ಮನುಷ್ಯ ಭವಿಷ್ಯದಲ್ಲಿ ವಿಶ್ವ ಮಾದರಿಯಾಗಿರುವುದಕ್ಕೆ ಮಹರ್ಷಿ ವಾಲ್ಮೀಕಿ ಆದರ್ಶ ಅತ್ಯಂತ ಮೌಲಿಕ ಮಾದರಿ ಸಂದೇಶ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು. ಮಂಗಳವಾರ ಇಲ್ಲಿನ ಜಗಜೀವನರಾಮ್ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಸಂಯುಕ್ತವಾಗಿ ಆಯೋಜಿಸಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತ್ಯಾಗದಲ್ಲಿ ಶ್ರೀರಾಮ ಪರಮೋಚ್ಛ ಆದರ್ಶ. ಅಂತಹ ರಾಮಾಯಣ ದರ್ಶನವನ್ನು ಜೀವಂತಗೊಳಿಸಿದ ವಾಲ್ಮೀಕಿ ಸತ್ಯದ ಹಾದಿಗಳನ್ನು ಹೇಳಿದ್ದಾನೆ. ವಾಲ್ಮೀಕಿ ರಾಮಾಯಣದ ಪ್ರತಿ ಪಾತ್ರಗಳು ಒಂದೊಂದು ಜೀವನಾದರ್ಶಗಳು. ಇಲ್ಲಿ ಎಲ್ಲೂ ಜಾತಿಯ ವಾಸನೆಯೇ ಇಲ್ಲ. ಪ್ರೀತಿ ವಿಶ್ವಾಸದ ಬದುಕಿನ ಸಂದೇಶ ಇಲ್ಲಿವೆ. ಅಧಿಕಾರ ರಾಜಕೀಯಕ್ಕಾಗಿ ಧರ್ಮ ಬಳಸಿಕೊಳ್ಳುವ ದುಸ್ಸಾಹಸ ಬೇಡ. ಅಧಿಕಾರಕ್ಕಾಗಿ ಏನೆಲ್ಲ ಅಲ್ಲೋಲ ಕಲ್ಲೋಲ ಆಗಿವೆ. ಚುನಾವಣೆ ಬಂದಾಗ ಆದರ್ಶ ಮಾಯವಾಗುತ್ತವೆ. ದ್ವೇಷ ಅಸೂಯೆ ಬಿಡೋಣ. ಒಳ್ಳೆಯ ನಾಡು ಕಟ್ಟೋಣ. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿಯಲ್ಲಿ ಯಾವುದೇ ಅನಾನುಕೂಲ ಆಗದಂತೆ ಕಾಳಜಿವಹಿಸುತ್ತೇವೆ ಎಂದರು. ತಾಲೂಕು ತಹಸೀಲ್ದಾರ್ ಎಸ್. ರೇಣುಕಾ ಮಾತನಾಡಿ, ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು. ಸತ್ಯವೇ ರಾಮ. ಅಂತಹ ಒಂದು ಉತ್ಕೃಷ್ಟ ಕಾವ್ಯ ವಾಲ್ಮೀಕಿ ರಾಮಾಯಣ. ಬದುಕಿನ ದಾರಿ ಬದಲಿಸಿದ್ದರಿಂದ ವಾಲ್ಮೀಕಿಯಾಗಿ ಮೌಲ್ಯದ ಮೊತ್ತವಾದದ್ದು ಮಹರ್ಷಿ ವಾಲ್ಮೀಕಿ. ಮಹಾತ್ಮರೂ ಎಂದೂ ಜಾತಿಗೆ ಸೀಮಿತರಲ್ಲ ಎಂದರು.ಬಹರ್‌ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್ಲ ಮಾತನಾಡಿ, ವಾಲ್ಮೀಕಿ ಸಮುದಾಯದ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರದ ದುರುಪಯೋಗ ಆಗುತ್ತಿದೆ. ಖೊಟ್ಟಿ ಜಾತಿ ಪತ್ರ ಪಡೆದು ನಮ್ಮ ಸರ್ಕಾರದ ಸೌಲಭ್ಯಗಳು ಅನ್ಯರ ಪಾಲಾಗುತ್ತಿವೆ. ಬೇರೆ ಸಮುದಾಯವನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸಿದಲ್ಲಿ ನಮ್ಮ ಸಮುದಾಯದ ಮೀಸಲಾತಿ ಪ್ರಮಾಣಕ್ಕೆ ಧಕ್ಕೆ ಆದರೆ ಸಹಿಸಲ್ಲ. ನಾವು ಹೋರಾಟಕ್ಕೆ ಹೋಗುವ ಮೊದಲು ಈ ಸಮಸ್ಯಗೆ ಸರಕಾರದಲ್ಲಿ ಪರಿಹಾರವಾಗಲಿ ಎಂದರು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಪುರಸಭೆ ಉಪಾಧ್ಯಕ್ಷೆ ವೀಣಾ ಗುಡಿ, ತಾಲೂಕು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಪರಶುರಾಮ ಮುನಿಯಣ್ಣನವರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುನಾಥ ಗವಾಣಿಕರ, ಹೊನ್ನಪ್ಪ ಭೋವಿ, ಭರಮಣ್ಣ ಶಿವೂರ, ಮಾರ್ಕಂಡಪ್ಪ ಮಣ್ಣಮ್ಮನವರ, ಮಂಜು ಗುರಣ್ಣನವರ, ಶಿವು ತಳವಾರ, ರಾಮಣ್ಣ ಲಕಮಾಪುರ, ಎಚ್.ಎಂ.ಓಲೇಕಾರ, ಶಿವಾನಂದ ಕನ್ನಕ್ಕನವರ, ಮಹಾಲಿಂಗಪ್ಪ ಬಿದರಮಳಿ, ರಾಮಣ್ಣ ಮಡ್ಲೂರ, ರೇಖಾ ಕರಭೀಮಣ್ಣನವರ, ಶೀಲಾ ಭದ್ರಾವತಿ ವೇದಿಕೆಯಲ್ಲಿದ್ದರು.ಬಾಲಚಂದ್ರ ಅಂಬಿಗೇರ, ಎಚ್. ನಾಗರಾಜ ಪ್ರಾರ್ಥನೆ ಹಾಡಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಂಗಮ್ಮ ಹಿರೇಮಠ ಸ್ವಾಗತಿಸಿದರು. ಸಿದ್ದು ಗೋರಣ್ಣನವರ ಕಾರ್ಯಕ್ರಮ ನಿರೂಪಿಸಿದರು.