- ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ । ಜಿಲ್ಲಾಡಳಿತ ನೇತೃತ್ವದಲ್ಲಿ ಕಾರ್ಯಕ್ರಮ - - -
ಕನ್ನಡಪ್ರಭ ವಾರ್ತೆ ದಾವಣಗೆರೆಇಡೀ ಜಗತ್ತಿಗೆ ರಾಮಾಯಣ ಎಂಬ ಮಹಾಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕಿ ಹಾಗೂ ಪ್ರತಿಯೊಬ್ಬರ ಹೃದಯ ಮಂದಿರದಲ್ಲಿ ಶ್ರೀರಾಮನ ಆದರ್ಶಗಳು ಮನೆ ಮಾಡಿವೆ. ಅಂತಹ ಆದರ್ಶ ಪುರುಷರನ್ನು ನಾವು ಪ್ರೇರಣೆಯಾಗಿ ಸ್ವೀಕರಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಹಮ್ಮಿಕೊಂಡಿದ್ದ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಸಮಾರಂಭವನ್ನು ಶ್ರೀ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಶ್ರೀರಾಮ, ಸೀತೆ, ಲಕ್ಷ್ಮಣ ಮತ್ತು ಭರತ, ರಾವಣ, ಮಂಡೋದರಿ, ಶಬರಿ ಮತ್ತು ಹನುಮಂತನ ಪಾತ್ರಗಳನ್ನು ರಾಮಾಯಣದಲ್ಲಿ ಕೇಳಿದ್ದೇವೆ, ತಿಳಿದುಕೊಂಡಿದ್ದೇವೆ. ಅಂತಹವರ ಆದರ್ಶ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ರಾಮನನ್ನು ಮಾರ್ಯಾದಾ ಪುರುಷನೆಂದು ಕರೆಯಲಾಗುತ್ತದೆ. ಶ್ರೀರಾಮ ಕಾಡಿಗೆ ತೆರಳಿದಾಗ ಭರತನು ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು, ರಾಮನ ಆದರ್ಶ ಅಳವಡಿಸಿಕೊಂಡು ರಾಜ್ಯಭಾರ ಮಾಡುತ್ತಾನೆ. ವನವಾಸದ ನಂತರ ಪುನಾ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡುತ್ತಾರೆ. ಪರಸ್ಪರ ಹಿರಿಯರಿಗೆ ಗೌರವ, ಸಹೋದರ ಭ್ರಾತೃತ್ವ, ಪರಸ್ಪರ ಸತಿ-ಪತಿ ಗೌರವಗಳನ್ನು ಕೊಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ನಾವು ಯಾವ ರೀತಿಯ ಆಡಳಿತ ನೀಡಬೇಕೆಂಬುದಕ್ಕೂ ರಾಮರಾಜ್ಯ ಮಾದರಿಯಾಗಿದೆ ಎಂದ ಅವರು, ರಾಮಾಯಣ ಬಗ್ಗೆ ಭಾರತದಲ್ಲಷ್ಟೇ ಅಲ್ಲದೇ ವಿದೇಶದಲ್ಲೂ ಅಧ್ಯಯನ ನಡೆದಿವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಮಹರ್ಷಿ ವಾಲ್ಮೀಕಿ ನೀಡಿದ ಜೀವನ ಸಂದೇಶ ಇಡೀ ದೇಶ, ವಿಶ್ವಕ್ಕೆ ಸಾಮರಸ್ಯ ಸಾರುವಂತಹದಾಗಿದೆ. ಸರ್ಕಾರ ವಾಲ್ಮೀಕಿ ಜನಾಂಗಗಕ್ಕೆ ಅನೇಕ ಯೋಜನೆ ಕೊಟ್ಟಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದರು.ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಎನ್.ಜಯದೇವ ನಾಯ್ಕ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಎಸ್ಪಿ ಉಮಾ ಪ್ರಶಾಂತ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್, ಅಪರ ಡಿಸಿ ಎಸ್.ಶಿವಾನಂದ, ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಾ.ನವೀನ್ ಮಠದ್, ನಾಯಕ ಸಮಾಜದ ಮುಖಂಡರಾದ ವಕೀಲ ಗುಮ್ಮನೂರು ಕೆ.ಎಂ.ಮಲ್ಲಿಕಾರ್ಜುನಪ್ಪ, ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಇತರರು ಇದ್ದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರವನ್ನು ನಗರದ ಪ್ರಮುಖ ಬೀದಿಗಳಲ್ಲಿ ಕಲಾತಂಡಗಳೊಂದಿಗೆ ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು.ಮೆರವಣಿಗೆ:
ಶ್ರೀ ವಾಲ್ಮೀಕಿ ಜಯಂತಿಯ ಮೆರವಣಿಗೆಯು ಮಂಗಳವಾರ ನಗರದ ಶ್ರೀ ರಾಜವೀರ ಮದಕರಿ ನಾಯಕ ವೃತ್ತ (ಹೊಂಡದ ಸರ್ಕಲ್)ದಿಂದ ಆರಂಭಗೊಂಡು ಅರುಣ ಸರ್ಕಲ್ ನಿಂದ ಎವಿಕೆ ಕಾಲೇಜಿನ ರಸ್ತೆಯ ಮೂಲಕ ಜಾನಪದ ಕಲಾ ತಂಡಗಳೊಂದಿಗೆ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪ ತಲುಪಿತು. ಅಪರ ಡಿಸಿ ಶೀಲವಂತ ಶಿವಕುಮಾರ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ್ ರಾವ್, ಸಮಾಜದ ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ಮಾಜಿ ಮೇಯರ್ ವಿನಾಯಕ ಪೈಲ್ವಾನ್, ಹುಚ್ಚವ್ವನಹಳ್ಳಿ ಮಂಜುನಾಥ, ವಾಲ್ಮೀಕಿ ಸಮಾಜದ ಮುಖಂಡರಾದ ಕುಕ್ಕವಾಡ ಮಂಜುನಾಥ, ಶ್ಯಾಗಲಿ ಸತೀಶ, ಅಣಜಿ ಶಿವಮೂರ್ತಿ, ಲಿಂಗರಾಜ್ ಫಣಿಯಾಪುರ, ಲೋಕೇಶ್ ಗೂಮ್ಮನೂರು, ರಮೇಶ ಉಚ್ಚಂಗಿದುರ್ಗ, ಹದಡಿ ಪಾಲಾಕ್ಷಿ, ತರಕಾರಿ ಕಾಳಿಂಗಪ್ಪ, ಅವರಗೆರೆ ಗೋಶಾಲ ಬಸವರಾಜ, ಸುರೇಶ, ಪರುಶುರಾಮ, ಪರುಶುರಾಮ ಕೆಟಿಜೆ ನಗರ, ಮಂಜು ಗೋಲ್ಲರಹಳ್ಳಿ, ಆಲೂರು ಪರುಶುರಾಮ ಸೇರಿದಂತೆ ಆನೇಕರು ಉಪಸ್ಥಿತರಿದ್ದರು.- - -
(ಬಾಕ್ಸ್) * ವಾಲ್ಮೀಕಿ ರಾಮಾಯಣದಂಥ ಮಹಾಕಾವ್ಯ ಜಗತ್ತಿನಲ್ಲೇ ಇಲ್ಲ: ಡಾ.ದಾದಾಪೀರ್ ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯ ಡಾ.ದಾದಾಪೀರ್ ನವಿಲೇಹಾಳ್, ಕವಿಗಳು ಜಗತ್ತಿನ ಅನಧಿಕೃತ ಶಾಸಕರಾಗಿರುತ್ತಾರೆಂದು ಆಂಗ್ಲ ಕವಿಯೊಬ್ಬರು ಹೇಳಿದ್ದಾರೆ. ಪ್ರಪಂಚದ 7 ಮಹಾಕಾವ್ಯಗಳಲ್ಲಿ ಸಂಸ್ಕೃತದ 2 ಮಹಾಕಾವ್ಯಗಳು ನಮ್ಮ ಭಾರತದವು. ವಾಲ್ಮೀಕಿ ರಚಿತ ಶ್ರೀ ರಾಮಾಯಾಣ ಮತ್ತು ವ್ಯಾಸ ಕವಿ ರಚಿಸಿದ ಮಹಾಭಾರತ. ನಂತರ ಅನೇಕರು ರಾಮಾಯಣ ರಚಿಸಿದರು. ಆದರೆ, ವಾಲ್ಮೀಕಿ ರಾಮಾಯಣದಂತಹ ಮಹಾಕಾವ್ಯ ಮತ್ತೊಂದು ಜಗತ್ತಿನಲ್ಲೇ ಇಲ್ಲ ಎಂದು ಹೇಳಿದರು. ವಾಲ್ಮೀಕಿ ಮೂಲ ಹೆಸರು ರತ್ನಾಕರ. ಅದರರ್ಥ ಸಮುದ್ರವಾಗಿದೆ. ಅಂದರೆ, ಸಮುದ್ರದ ಮುತ್ತು ರತ್ನ. ವಾಲ್ಮೀಕಿ ರಾಮಾಯಾಣದಲ್ಲಿ ನೈತಿಕ ಮೌಲ್ಯ ಒಳಗೊಂಡ ಮಹಾಕಾವ್ಯವಾಗಿದೆ. ನಾರದರಿಂದ ಪ್ರಭಾವಿತರಾದ ವಾಲ್ಮೀಕಿ ರಾಮಾಯಣ ರಚಿಸುತ್ತಾರೆ. ರಾಮಾಯಣವನ್ನು ಅಕ್ಷರಸ್ಥರು, ಅನಕ್ಷರಸ್ಥರೆಲ್ಲರೂ ಆಲಿಸುವಂತಹ ಪಾತ್ರಗಳು, ಚಟುವಟಿಕೆಗಳು ಪ್ರಭಾವಿತರಾಗುವಂತಹ ಘಟನಾವಳಿಗಳಿವೆ. ರಾಮಾಯಾಣದಲ್ಲಿ ರಾಜಕೀಯ ದೃಷ್ಟಿಕೋನ ನೀಡುತ್ತದೆ. ರಾಜನ ಆಶಯ ಹೇಗಿರಬೇಕು, ಆಡಳಿತ ನೀತಿ ಹೇಗಿರಬೇಕು, ರಾಜರು ಹೇಗೆ ಜನರಿಗೆ ಮಾದರಿ ಆಗಿರಬೇಕೆಂಬ ಎಲ್ಲ ಸೂಚನೆಗಳನ್ನೂ ಅದರಲ್ಲಿ ನೀಡಿದ್ದಾರೆ ಎಂದು ತಿಳಿಸಿದರು.- - -
-7ಕೆಡಿವಿಜಿ3:ದಾವಣಗೆರೆಯಲ್ಲಿ ಮಂಗಳವಾರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದರು. ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಸಮಾಜದ ಮುಖಂಡರು ಇದ್ದರು.