ಯೋಗ ಜನಸಾಮಾನ್ಯರಿಗೆ ತಲುಪಿಸಿದ ಪತಂಜಲಿ ಮಹರ್ಷಿ: ಡಾ. ಮಲ್ಲಿಕಾರ್ಜುನ ಸ್ವಾಮೀಜಿ

KannadaprabhaNewsNetwork | Published : Jun 20, 2024 1:01 AM

ಸಾರಾಂಶ

ಯಾವುದೇ ಅಡ್ಡ ಪರಿಣಾಮವಿಲ್ಲದ ಚಿಕಿತ್ಸೆಯೆಂದರೆ ಅದು ಯೋಗ ಮಾತ್ರ. ಯೋಗದಿಂದ ನಮಗೆ ಆಗುವ ವಯಸ್ಸು ಸಹ ಗೊತ್ತಾಗುವುದಿಲ್ಲ. ಪ್ರತಿಯೊಬ್ಬರೂ ಆರೋಗ್ಯದಿಂದ ಇರಬೇಕಾದರೆ ದಿನಕ್ಕೆ ಒಂದು ಗಂಟೆ ಯೋಗಾಭ್ಯಾಸದಲ್ಲಿ ತೊಡಗಬೇಕು ಎಂದು ಮುಂಡರಗಿ ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಮುಂಡರಗಿ: ಯೋಗ ಒಂದು ಕಾಲದಲ್ಲಿ ಜನಸಾಮಾನ್ಯರಿಗೆ ದೊರಕುವಂತಿರಲಿಲ್ಲ. ಅದೊಂದು ರಹಸ್ಯ ವಿದ್ಯೆಯಾಗಿತ್ತು. ಸಂತರು, ಮಹಾಂತರು, ಋಷಿಮುನಿಗಳಿಗೆ ಮಾತ್ರ ಅದು ಸೀಮಿತವಾಗಿತ್ತು. ಆ ರಹಸ್ಯ ವಿದ್ಯೆಯನ್ನು ಜನಸಾಮಾನ್ಯರಿಗೆ ದೊರೆಯುವಂತೆ ಮಾಡಿದ್ದು ಪತಂಜಲಿ ಮಹರ್ಷಿಗಳು ಎಂದು ಮುಂಡರಗಿ ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

10ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ತಾಲೂಕು ಆಡಳಿತ, ಆಯುಷ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜ.ಅ. ವಿದ್ಯಾ ಸಮಿತಿ ಶತಮಾನೋತ್ಸವ ಕಮಿಟಿ, ಪತಂಜಲಿ, ಅನ್ಮೋಲ್ ಯೋಗ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರ, ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಇತರ ಯೋಗ ಸಂಘಟನೆಗಳ ಆಶ್ರಯದಲ್ಲಿ ಬುಧವಾರ ಜರುಗಿದ ಯೋಗ ಜಾಗೃತಿ ಜಾಥಾ ಕಾರ್ಯಕ್ರಮದ ಸಮ್ಮುಖವಹಿಸಿ ಅವರು ಮಾತನಾಡಿದರು.

ದೇಹ ಸದೃಢವಾಗಿದ್ದರೆ, ಮನಸ್ಸು ಕೂಡ ಸದೃಢವಾಗಿರುತ್ತದೆ. ನಮ್ಮ ದೇಹವೇ ಸದೃಢವಾಗಿ ಇಲ್ಲದಿದ್ದರೆ ಮಾನಸಿಕವಾಗಿ ಸ್ಥಿತಪ್ರಜ್ಞರಾಗಿ ಇರಲಿಕ್ಕೆ ಸಾಧ್ಯವಿಲ್ಲ. ನಾವು ಆರೋಗ್ಯವಾಗಿರುವುದು ಬಹಳ ಮುಖ್ಯ. ಆದ್ದರಿಂದ ಎಲ್ಲರೂ ನಿತ್ಯ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು. ಯಾವುದೇ ಅಡ್ಡ ಪರಿಣಾಮವಿಲ್ಲದ ಚಿಕಿತ್ಸೆಯೆಂದರೆ ಅದು ಯೋಗ ಮಾತ್ರ. ಯೋಗದಿಂದ ನಮಗೆ ಆಗುವ ವಯಸ್ಸು ಸಹ ಗೊತ್ತಾಗುವುದಿಲ್ಲ. ಪ್ರತಿಯೊಬ್ಬರೂ ಆರೋಗ್ಯದಿಂದ ಇರಬೇಕಾದರೆ ದಿನಕ್ಕೆ ಒಂದು ಗಂಟೆ ಯೋಗಾಭ್ಯಾಸದಲ್ಲಿ ತೊಡಗಬೇಕು ಎಂದು ಹೇಳಿದರು.

ಅನೇಕ ಕಾಯಿಲೆಗಳು ಯೋಗ ಮಾಡುವುದರಿಂದಲೇ ಗುಣವಾಗುತ್ತದೆ. ಆಯುರ್ವೇದ ಹಾಗೂ ಅಲೋಪತಿ ಔಷಧಿಗಳಿಂದ ಗುಣವಾಗದ ಅನೇಕ ಕಾಯಿಲೆಗಳು ಯೋಗದಿಂದ ದೂರವಾಗುತ್ತವೆ. ವಿಶೇಷವೆಂದರೆ ರೋಗ ಬಂದ ಆನಂತರ ಔಷಧಗಳು ದೊರೆಯುತ್ತವೆ. ಆದರೆ ಯೋಗ ಮಾಡಿದರೆ ರೋಗವೇ ಬರುವುದಿಲ್ಲ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ನಮ್ಮ ಜೀವನ ಸುಧಾರಣೆಗೆ ಹಳೆಯ ಪದ್ಧತಿಗಳು ಹಾಗೂ ಪರಂಪರೆಗಳು ನಮಗೆ ಅತ್ಯವಶ್ಯ ಎಂದರು.

ಜ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ಯೋಗ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಪುರಸಭೆ ಸದಸ್ಯ ನಾಗೇಶ ಹುಬ್ಬಳ್ಳಿ, ತಾಲೂಕು ಆಯುಷ್ ಅಧಿಕಾರಿ ಡಾ. ಪಿ.ಬಿ. ಹಿರೇಗೌಡರ, ಬಿಇಒ ಎಚ್.ಎಂ. ಪಡ್ನೇಶಿ, ಜ.ಅ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ, ಮಂಜುನಾಥ ಅಳವಂಡಿ, ಡಾ. ಮಂಗಳಾ ಇಟಗಿ, ವೀಣಾ ಪಾಟೀಲ, ಮಂಜುಳಾ ಇಟಗಿ, ಮಂಜುನಾಥ ಇಟಗಿ, ಬಿ.ಆರ್. ಕುಲಕರ್ಣಿ, ಪ್ರಭಾವತಿ ಬೆಳವಣಕಿಮಠ, ಕಾಶೀನಾಥ ಶಿರಬಡಗಿ, ಜಗದೀಶ ಸೋನಿ, ನಾರಾಯಣಪ್ಪ ಗುಬ್ಬಿ, ಪ್ರೇಮಾ ಇಲ್ಲೂರ, ಮಂಗಳಾ ಕರ್ಜಗಿ, ಲಕ್ಷ್ಮಮ್ಮ ಉಕ್ಕಲಿ, ನೇಹಾ ಕಂಚಗಾರ, ಡಾ. ಸಚಿನ್ ಉಪ್ಪಾರ ಉಪಸ್ಥಿತರಿದ್ದರು.

ಶ್ರೀಮಠದಿಂದ ಪ್ರಾರಂಭವಾದ ಯೋಗ ಜಾಗೃತಿ ಜಾಥಾ ಪಟ್ಟಣದ ವಿವಿಧ ವೃತ್ತಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಆನಂತರ ಮತ್ತೆ ಶ್ರೀಮಠಕ್ಕೆ ಬಂದು ತಲುಪಿತು.

Share this article