ಕನ್ನಡಪ್ರಭ ವಾರ್ತೆ ಸಕಲೇಶಪುರ
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ. ೮೦ಕ್ಕೂ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಧ್ಯಾರ್ಥಿಗಳಿಗೆ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಗೌರವ ಸಲಹೆಗಾರ ಎಚ್.ಆರ್. ಕುಮಾರಯ್ಯ ಹೇಳಿದರು.ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಪಟ್ಟಣದ ಕುಶಾಲನಗರ ರಸ್ತೆಯಲ್ಲಿರುವ ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ದಿನಾಂಕ ೨೨ ರ ಶನಿವಾರದಂದು ಬೆಳಗ್ಗೆ ೧೦- ೩೦ ಕ್ಕೆ ಸಕಲೇಶಪುರ ತಾಲೂಕು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ೨೦೨೨-೨೦೨೩ ಹಾಗೂ ೨೦೨೩-೨೦೨೪ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ ೮೦% ಹೆಚ್ಚು ಅಂಕ ಪಡೆದ ಸುಮಾರು ೨೩೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ರಾಜ್ಯ ಸರ್ಕಾರಿ ನೌಕರರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ಎಸ್ ಮಹೇಶ್ ವಹಿಸಲಿದ್ದು, ಉದ್ಘಾಟನೆಯನ್ನು ಶಾಸಕ ಸಿಮೆಂಟ್ ಮಂಜುನಾಥ್ ನೆರವೇರಿಸಲಿದ್ದು, ವಿದ್ಯಾರ್ಥಿಗಳಿಗೆ ದಿಕ್ಸೂಚಿ ಭಾಷಣವನ್ನು ರವಿ ಡಿ. ಚನ್ನಣ್ಣನವರ್ ನಡೆಸಿಕೊಡಲಿದ್ದು, ವಿಶೇಷ ಆಹ್ವಾನಿತರಾಗಿ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಮುಖ್ಯ ಅತಿಥಿಗಳಾಗಿ ಎನ್. ಐ. ಕ್ರಾಂತಿ ವ್ಯವಸ್ಥಾಪಕ ಕರುಣಾಕರ್ ಬೆಳಗೋಡು, ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ವಿನಯ್ ಕುಮಾರ್ ಸೇರಿ ಇತರ ಗಣ್ಯರು ಪಾಲ್ಗೊಳ್ಳಲಿದ್ದು, ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಮಹೇಶ್, ಸಂಘಟನೆಯ ಪಧಾಧಿಕಾರಿಗಳಾದ ಪೋಲಿಸ್ ಪೃಥ್ವಿ, ಬೈರಪ್ಪ ಮಾಸ್ಟರ್, ರುದ್ರಪ್ಪ ಮಾಸ್ಟರ್, ಮಾಜಿ ಪುರಸಭಾ ಸದಸ್ಯ ನಿರ್ವಾಣಯ್ಯ ಉಪಸ್ಥಿತರಿದ್ದರು.