ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ
ರಾಮಾಯಣ ಮಹಾ ಕಾವ್ಯದ ಕರ್ತೃ ಶ್ರೀ ಮಹರ್ಷಿ ವಾಲ್ಮೀಕಿಯವರ ತತ್ತ್ವ ಸಿದ್ಧಾಂತಗಳು ಸದಾ ಜೀವಂತ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗುರುವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭಾರತದ ಮಹಾಕಾವ್ಯಗಳಲ್ಲಿ ರಾಮಾಯಣ ಮಹತ್ವ ಪೂರ್ಣ ಗ್ರಂಥವಾಗಿದೆ. ಯುಗ ಪುರುಷ ಶ್ರೀ ರಾಮನ ಆದರ್ಶ, ಜೀವನ ಶೈಲಿ, ವ್ಯಕ್ತಿತ್ವ ಹಾಗೂ ಅವರ ದೈವ ಸ್ವರೂಪವನ್ನು ಕಾವ್ಯದ ಮೂಲಕ ಅದ್ಭುತವಾಗಿ ವರ್ಣಿಸಲಾಗಿದೆ. ಇಂದಿಗೂ ರಾಮ ರಾಜ್ಯದ ಪರಿಕಲ್ಪನೆಯನ್ನು ಪ್ರತಿಯೊಬ್ಬರು ಮನದಟ್ಟು ಮಾಡಿಕೊಳ್ಳುತ್ತಾರೆ. ಇಂತಹ ಮಹತ್ವ ಪೂರ್ಣ ಕಾವ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಬದುಕು ಪ್ರೇರಣೀಯ ಎಂದರು.ಮಹರ್ಷಿ ವಾಲ್ಮೀಕಿ ಕೇವಲ ಯಾವುದೇ ಒಂದು ವರ್ಗಕ್ಕೆ ಸೀಮಿತರಾದವರಲ್ಲ. ಶ್ರೀ ರಾಮನ ವ್ಯಕ್ತಿತ್ವ ಸಾರುವ ಅವರ ರಾಮಾಯಣ ಮಹಾ ಕಾವ್ಯ ವಿಶ್ವಾದ್ಯಂತ ಮನ್ನಣೆ ಪಡೆದು ಇದರ ಸಾರ ತಿಳಿಯುವ ಪ್ರತಿಯೊಬ್ಬ ವ್ಯಕ್ತಿಯ ಬದುಕು ಬದಲಾಯಿಸುವ ಗ್ರಂಥ ಇದಾಗಿದೆ. ಸಮಾಜದಲ್ಲಿ ಸತ್ಯ, ನಿಷ್ಠೆ, ಸಮಾನತೆ ಸಹಬಾಳ್ವೆ, ಪರೋಪಕಾರಿಯಾಗಿ ಹಾಗೂ ಧರ್ಮ ಶ್ರದ್ಧೆಯಿಂದ ಬದುಕಲು ಕಾವ್ಯ ಸಹಕಾರಿಯಾಗಿದೆ ಎಂದು ಹೇಳಿದರು.
ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರಂತಹ ಮಹಾನ್ ವ್ಯಕ್ತಿಗಳು ಸಮಾಜದ ಅನಿಷ್ಠ ಪದ್ಧತಿ ದೂರಮಾಡಿ ಸಮಾನತೆಯಿಂದ ಬದುಕುವ ಮಾರ್ಗ ಸಾರಿದ್ದಾರೆ ಇವರ ವಿಚಾರಧಾರೆಗಳು ಸದಾ ಜೀವಂತವಾದುದು ವ್ಯಕ್ತಿ ಪೂಜೆಗಿಂತ ಅವರ ವ್ಯಕ್ತಿತ್ವ ಹಾಗೂ ತತ್ವಗಳನ್ನು ಅನುಸರಿಸು ವುದರಿಂದ ಉತ್ತಮ ನಾಗರಿಕರಾಗಲು ಸಾಧ್ಯ. ಮಹರ್ಷಿ ವಾಲ್ಮೀಕಿ ರಾಮಾಯಣದ ತತ್ವ ಸಿದ್ಧಾಂತಗಳನ್ನು ತಿಳಿದು ಉತ್ತಮ ಬದುಕು ರೂಪಿಸಿಕೊಳ್ಳಿ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಯಾವುದೇ ವ್ಯಕ್ತಿ ಆಸ್ತಿ, ಐಶ್ವರ್ಯ, ಹಣದಿಂದ ಶ್ರೇಷ್ಠ ನಾಗುವುದಿಲ್ಲಾ, ಆತನ ಜೀವನ ಶೈಲಿ ಹಾಗೂ ವಿಚಾರಗಳು ಉತ್ತಮವಾಗಿದ್ದಲ್ಲಿ ಶ್ರೇಷ್ಠತೆ ಗಳಿಸುತ್ತಾನೆ. ಒಬ್ಬ ತಳ ಸಮುದಾಯದ ವ್ಯಕ್ತಿ ಭಾರತದ ಮಹಾನ್ ಕಾವ್ಯ ರಚಿಸಬೇಕಾದರೆ ಅಂತಹ ವ್ಯಕ್ತಿಯ ಜೀವನ ಹಾಗೂ ಸಿದ್ಧಾಂತಗಳು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಕಾವ್ಯ ರಚಿಸಿ ದೈವ ಸ್ವರೂಪಿ ವ್ಯಕ್ತಿ ಯಾಗಿದ್ದಾರೆ. ಯಾವುದೇ ವ್ಯಕ್ತಿ ಶ್ರಮ, ಶ್ರದ್ಧೆ, ಧೈರ್ಯದಿಂದ ಎಂತಹ ಕಾರ್ಯವನ್ನು ಪೂರ್ಣಗೊಳಿಸಬಹುದು. ಆತ್ಮವಿಶ್ವಾಸ ಮನುಷ್ಯನ ಅತ್ಯುತ್ತಮ ಸಂಪತ್ತು, ನಿಷ್ಠೆಯಿಂದ ಮಾಡಿದ ಪ್ರತಿ ಕೆಲಸ ಯಶಸ್ವಿಯಾಗುತ್ತವೆ. ಸಮಾಜದ ಕಟ್ಟ ಕಡೆ ವ್ಯಕ್ತಿ ಇಂತಹ ಮಹಾನ್ ಪುರುಷರ ಜೀವನ ಕ್ರಮಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ. ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಯಾಜ್ ಅಹಮದ್, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಜಿಲ್ಲಾಧ್ಯಕ್ಷ ಶಿವಾನಂದಸ್ವಾಮಿ, ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಜಿ.ಕೆ. ಭೀಮಪ್ಪ, ಜಿಲ್ಲಾ ವಾಲ್ಮೀಕಿ ನಾಯಕ ಯುವಕ ಸಂಘದ ಅಧ್ಯಕ್ಷ ಜಗದೀಶ್ ಕೋಟೆ ಹಾಗೂ ಡಿಎಸ್‌ಎಸ್ ಮುಖಂಡರಾದ ಕೆ.ಟಿ. ರಾಧಾಕೃಷ್ಣ, ಹುಣಸೇಮಕ್ಕಿ ಲಕ್ಷ್ಮಣ್ ಉಪಸ್ಥಿತರಿದ್ದರು.17 ಕೆಸಿಕೆಎಂ 1ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಗುರುವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅವರು ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಡಾ. ಅಂಶುಮಂತ್, ಶಿವಾನಂದಸ್ವಾಮಿ, ಜಗದೀಶ್ ಕೋಟೆ ಇದ್ದರು.