ರಾಘವೇಶ್ವರ ಶ್ರೀಗಳಿಂದ ರಾಜರಾಜೇಶ್ವರಿಯ ಮಹಾಸಮಾರಾಧನೆ15ರಿಂದ ಪೆರಾಜೆ ಮಾಣಿಮಠದಲ್ಲಿ ನವರಾತ್ರ ನಮಸ್ಯ

KannadaprabhaNewsNetwork | Published : Oct 13, 2023 12:16 AM

ಸಾರಾಂಶ

ಶ್ರೀಮಠದ ಆರಾಧ್ಯ ದೇವರುಗಳಲ್ಲೊಂದಾದ ರಾಜರಾಜೇಶ್ವರಿಯ ಹತ್ತು ದಿನಗಳ ವೈಭವದ ಈ ಉತ್ಸವದಲ್ಲಿ ಪರಮಪೂಜ್ಯರು ಪ್ರತಿ ದಿನ ಉಪವಾಸ ವ್ರತ ಕೈಗೊಂಡು ನವರಾತ್ರಿ ಪೂಜೆ ನೆರವೇರಿಸುವರು. ಹತ್ತನೇ ದಿನ ಸುವರ್ಣಭಿಕ್ಷೆ ಸ್ವೀಕಾರದೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ
ಕನ್ನಡಪ್ರಭ ವಾರ್ತೆ ಮಂಗಳೂರು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ನವರಾತ್ರಿ ಉತ್ಸವ ಈ ಬಾರಿ ಮಾಣಿ ಸಮೀಪದ ಪೆರಾಜೆ ರಾಮಚಂದ್ರಾಪುರ ಮಠದಲ್ಲಿ ಅ.15ರಿಂದ 24ರ ವರೆಗೆ ಸಂಪನ್ನಗೊಳ್ಳಲಿದೆ. ಶ್ರೀಮಠದ ಆರಾಧ್ಯ ದೇವರುಗಳಲ್ಲೊಂದಾದ ರಾಜರಾಜೇಶ್ವರಿಯ ಹತ್ತು ದಿನಗಳ ವೈಭವದ ಈ ಉತ್ಸವದಲ್ಲಿ ಪರಮಪೂಜ್ಯರು ಪ್ರತಿ ದಿನ ಉಪವಾಸ ವ್ರತ ಕೈಗೊಂಡು ನವರಾತ್ರಿ ಪೂಜೆ ನೆರವೇರಿಸುವರು. ಹತ್ತನೇ ದಿನ ಸುವರ್ಣಭಿಕ್ಷೆ ಸ್ವೀಕಾರದೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ ಎಂದು ಮಾಣಿಮಠ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶೋಭಕೃತ್ ಸಂವತ್ಸರದ ಅಶ್ವಯುಜ ಶುದ್ಧ ಪಾಡ್ಯದಿಂದ ದಶಮಿ ಪರ್ಯಂತ ನಡೆಯುವ ''''ನವರಾತ್ರ ನಮಸ್ಯ'''' ಹೆಸರಿನ ರಾಜರಾಜೇಶ್ವರಿದೇವಿಯ ಮಹಾಸಮಾರಾಧನೆಯಲ್ಲಿ ಪ್ರತಿ ದಿನ ಸಂಜೆ 3.30ಕ್ಕೆ ಶ್ರೀಸಂಸ್ಥಾನದವರಿಂದ ಲಲಿತೋಪಾಖ್ಯಾನ ಪ್ರವಚನ ನಡೆಯಲಿದೆ. ಪ್ರತಿದಿನ ಭವ್ಯ ಸುವರ್ಣ ಮಂಟಪದಲ್ಲಿ ಶ್ರೀಕರಾರ್ಚಿತ ಪೂಜೆ ನಡೆಯಲಿದೆ. ಶ್ರೀರಾಮಚಂದ್ರಾಪುರ ಮಠದ ನವರಾತ್ರಿ ಮಹೋತ್ಸವ ಇದೇ ಮೊದಲ ಬಾರಿಗೆ ಮಂಗಳೂರು ಭಾಗದಲ್ಲಿ ನಡೆಯುತ್ತಿದೆ. ಇಲ್ಲಿ ಸಮರ್ಪಣೆಯಾಗುವ ಸಮಸ್ತ ಕಾಣಿಕೆ ರಾಘವೇಶ್ವರ ಶ್ರೀಗಳು ಸಂಕಲ್ಪಿಸಿದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬೃಹತ್ ಗ್ರಂಥಾಲಯಕ್ಕೆ ಸಮರ್ಪಣೆಯಾಗಲಿದೆ. ಪ್ರತಿದಿನ ಬೆಳಗ್ಗೆ ಸ್ವರ್ಣಮಂಟಪದಲ್ಲಿ ಶ್ರೀಪೂಜೆ, ಶ್ರೀಕರಾರ್ಚಿತ ಸನ್ನಿಧಿಗಳಿಗೆ ಮಹಾಸಪರ್ಯಾ, ಶ್ರೀ ದುರ್ಗಾಪೂಜೆ, ಶ್ರೀದುರ್ಗಾಸಪ್ತಶತೀ ಪಾರಾಯಣ, ಶ್ರೀದೇವಿ ಭಜನೆ, ಮಾತೆಯರಿಂದ ಕುಂಕುಮಾರ್ಚನೆ, ಸುವರ್ಣಪಾದುಕಾ ಪೂಜೆ ಸಂಪನ್ನಗೊಳ್ಳಲಿದೆ. ಸಂಜೆ ಸೂರ್ಯಾಸ್ತದಿಂದ ನವರಾತ್ರಿ ಪೂಜೆಯನ್ನು ಸ್ವತಃ ಶ್ರೀಸಂಸ್ಥಾನದವರು ನೆರವೇರಿಸುವರು. ವಿದ್ಯಾದಶಮಿಯಂದು ಅಂದರೆ ಅ.24ರಂದು ಭಿಕ್ಷಾಸೇವೆ, ಶ್ರೀಗಳಿಂದ ಆಶೀರ್ವಚನ, ಮಂತ್ರಾಕ್ಷತೆ ಇರುತ್ತದೆ. ಪ್ರತಿ ದಿನ ಐದು ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಪಾಲ್ಗೊಳ್ಳಲಿದ್ದು, ಕೊನೆಯ ದಿನ 10 ಸಾವಿರಕ್ಕೂ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ಮಹೋತ್ಸವವನ್ನು ವೈಭವಯುತವಾಗಿ ಮತ್ತು ಅರ್ಥಪೂರ್ಣವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article