ಕನ್ನಡಪ್ರಭ ವಾರ್ತೆ ಮಡಿಕೇರಿ ಮಳೆಯ ಅಭಾವದಿಂದ ಕಾವೇರಿ ನೀರು ಹಂಚಿಕೆಯ ವಿವಾದ ಉದ್ಭವವಾದ ಯಾವುದೇ ಸಂದರ್ಭಗಳಲ್ಲಿ ಸರ್ಕಾರಗಳಾಗಲಿ, ರಾಜಕೀಯ ಪಕ್ಷಗಳಾಗಲಿ ಅದರ ಬಗೆಹರಿಕೆಗೆ ಆಸಕ್ತಿಯನ್ನೇ ತೋರಿಲ್ಲ. ಈ ಹಿನ್ನೆಲೆ ಕಾವೇರಿ ನದಿ ನೀರಿನ ಹಂಚಿಕೆಗೆ ಕನ್ನಡಿಗರೆಲ್ಲರ ಬೆಂಬಲ ಪಡೆಯುವ ನಿಟ್ಟಿನಲ್ಲಿ ‘ಕಾವೇರಿ ತಾಯಿ...ಕಾಪಾಡು ತಾಯಿ’ ಯಾತ್ರೆಯನ್ನು ಕದಂಬ ಸೈನ್ಯ ಹಮ್ಮಿಕೊಂಡಿರುವುದಾಗಿ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದ್ದಾರೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆಯ ತಮಿಳುನಾಡಿನಲ್ಲಿ ಕಾವೇರಿಯ ವಿಚಾರ ಎದುರಾದ ಸಂದರ್ಭಗಳಲ್ಲೆಲ್ಲ ಅಲ್ಲಿನ ಜನತೆ ಪಕ್ಷಾತೀತವಾಗಿ ಒಗ್ಗೂಡುತ್ತಾರೆ. ಆದರೆ, ಕರ್ನಾಟಕದಲ್ಲಿ ಅದು ಸಾಧ್ಯವಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಸೂತ್ರಕ್ಕೆ ಆಗ್ರಹ: ಮಳೆಯ ಕೊರತೆಯ ಸಂದರ್ಭ ಕರ್ನಾಟಕ ಮತ್ತು ತಮಿಳುನಾಡು ನಡುವೆ ನೀರು ಹಂಚಿಕೆ ಹೇಗೆ ಎನ್ನುವ ಬಗ್ಗೆ ‘ಕಾವೇರಿ ಸಂಕಷ್ಟ ಸೂತ್ರ’ ರಚಿಸಬೇಕೆಂದು ಬೇಕ್ರಿ ರಮೇಶ್ ಆಗ್ರಹಿಸಿದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಡಾ.ದೇವನಹಳ್ಳಿ ದೇವರಾಜ್ ಮಾತನಾಡಿ, ಕಾವೇರಿ ಸಂಕಷ್ಟ ಬಗೆಹರಿಕೆಗೆ ರಾಷ್ಟ್ರೀಯ ಜಲ ನೀತಿ ರೂಪಿಸುವುದು ಅತ್ಯವಶ್ಯವೆಂದು ಅಭಿಪ್ರಾಯಪಟ್ಟರು. ಕದಂಬ ಸೈನ್ಯದ ಮಂಡ್ಯ, ಬೆಂಗಳೂರು, ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು ಜಿಲ್ಲೆಗಳ ಪ್ರಮುಖರು ಕಾವೇರಿ ಸಂಕಷ್ಟ ನಿವಾರಣೆಗೆ ರಾಜ್ಯದ ಜನರ ಒಕ್ಕೊರಲಿನ ಬೆಂಬಲ ಕೋರಿ ಮಂಡ್ಯದಿಂದ ಯಾತ್ರೆಯನ್ನು ಆರಂಭಿಸಿದ್ದು, ಯಾತ್ರೆ ಮೈಸೂರು ಮೂಲಕ ಕೊಡಗಿನ ಗೋಣಿಕೊಪ್ಪ, ಸಿದ್ದಾಪುರ, ಅಮ್ಮತ್ತಿ, ಮಡಿಕೇರಿ ಮೂಲಕ ಭಾಗಮಂಡಲ ಮತ್ತು ತಲಕಾವೇರಿಗೆ ತೆರಳಲಿದೆ. ಅಲ್ಲಿ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿ ಸಂಕಷ್ಟ ಪರಿಹಾರಕ್ಕೆ ಪ್ರಾರ್ಥನೆ ಸಲ್ಲಿಸಲಾಗುತ್ತದೆಂದು ತಿಳಿಸಿದರು. ಸಂಘಟನೆಯ ರಾಜ್ಯ ಸಂಚಾಲಕ ಎಸ್. ಶಿವ ಕುಮಾರ್, ರಾಮನಗರ ಜಿಲ್ಲಾ ಅಧ್ಯಕ್ಷ ಶಿವ ಕುಮಾರ್ ಪಟ್ಟಿ, ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಜೋಸೆಫ್ ರಾಮು ಹಾಗೂ ಮೈಸೂರು ಮಹದೇವಸ್ವಾಮಿ ಇದ್ದರು.