ಬಾಡಿಗೆ ಪಾವತಿ ವಿಚಾರ: ಮಾರಕಾಸ್ತ್ರಗಳಿಂದ ಹಲ್ಲೆ

KannadaprabhaNewsNetwork |  
Published : Oct 13, 2023, 12:16 AM IST
12ಕೆಎಂಎನ್ ಡಿ17ನಿವೇಶನ ಮಾಲೀಕನ ಮೇಲೆ ಡಾಬಾ ಮಾಲೀಕ ಹಲ್ಲೆ ಮಾಡುತ್ತಿರುವುದು. | Kannada Prabha

ಸಾರಾಂಶ

ಬಾಡಿಗೆ ಪಾವತಿ ವಿಚಾರದಲ್ಲಿ ಡಾಬಾ ಮಾಲೀಕರ ನಿವೇಶನದ ಮಾಲೀಕ ಮತ್ತು ಆತನ ಸ್ನೇಹಿತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೆ ವಿಫಲ ಯತ್ನ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮದ್ದೂರು: ಬಾಡಿಗೆ ಪಾವತಿ ವಿಚಾರದಲ್ಲಿ ಡಾಬಾ ಮಾಲೀಕರು ನಿವೇಶನದ ಮಾಲೀಕ ಮತ್ತು ಆತನ ಸ್ನೇಹಿತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೆ ವಿಫಲ ಯತ್ನ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಮತ್ತು ಸಾರ್ವಜನಿಕರ ಮಧ್ಯಪ್ರವೇಶದಿಂದ ಕೊಲೆ ಯತ್ನ ವಿಫಲವಾಗಿದ್ದು, ಘಟನೆ ಸಂಬಂಧ ಪೊಲೀಸರು ಬೆಂಗಳೂರು-ಮೈಸೂರು ಹೆದ್ದಾರಿ ಸಮೀಪದ ಮ್ಯಾಂಗೋಟ್ರೀ ಡಾಬಾ ಮಾಲೀಕ ನಿಶ್ಚಲ್‌ಗೌಡ (32) ವಿರುದ್ಧ ಕೊಲೆ ಆರೋಪದ ಮೇಲೆ ಐಪಿಸಿ 341, 504, 502 ಹಾಗೂ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪದ ಮೇಲೆ 26(1)ಕಲಂ ಅನ್ವಯ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಬಂಧಿತನನ್ನು ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯದ 2ನೇ ಅಪರ ಸಿವಿಲ್ ನ್ಯಾಯಾಧೀಶ ಕೆ.ವಿ. ಕೋನಪ್ಪ ಅವರ ಮುಂದೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯ ಎಲ್‌ಐಸಿ ಕಚೇರಿ ಮುಂಭಾಗದಲ್ಲಿರುವ ಎಂ.ಎಸ್. ದೀಪಕ್‌ಗೌಡರಿಗೆ ಸೇರಿದ ನಿವೇಶನದಲ್ಲಿ ಆರೋಪಿ ನಿಶ್ಚಲ್‌ಗೌಡ ಮ್ಯಾಂಗೋಟ್ರೀ ಹೆಸರಿನಲ್ಲಿ ಡಾಬಾ ನಡೆಸುತ್ತಿದ್ದರು. ದೀಪಕ್‌ಗೌಡನಿಗೆ ಬಾಡಿಗೆ ಬಾಬ್ತು 2 ಲಕ್ಷ ರು ಗಳನ್ನು ಪಾವತಿ ಮಾಡಲು ವಿಳಂಬ ಮಾಡುತ್ತಿದ್ದರು. ಈ ಬಗ್ಗೆ ಕಳೆದ ಕೆಲವು ತಿಂಗಳ ಹಿಂದೆ ನಿಶ್ಚಲ್‌ಗೌಡ ಹಾಗೂ ದೀಪಕ್‌ಗೌಡನ ನಡುವೆ ಗಲಾಟೆ ನಡೆದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಡಾಬಾ ಮಾಲೀಕ ನಿಶ್ಚಲ್‌ಗೌಡ ಮತ್ತು ನಿವೇಶನ ಮಾಲೀಕ ದೀಪಕ್‌ಗೌಡ ನಡುವೆ ಪೊಲೀಸರೆದುರೇ ದೀಪಕ್‌ಗೌಡನ ಮೇಲೆ ನಿಶ್ಚಲ್‌ಗೌಡ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದರು. ನಂತರ ದೀಪಕ್‌ಗೌಡನಿಗೆ ಬೆದರಿಕೆ ಹಾಕಿದ್ದರ ಬಗ್ಗೆ ಈತನ ಸ್ನೇಹಿತ ಆಟೋ ಸರ್ವೀಸ್ ಸೆಂಟರ್ ನಡೆಸುತ್ತಿರುವ ಪ್ರದೀಪ್‌ಗೌಡ ಪ್ರಶ್ನೆ ಮಾಡಿದ್ದಾನೆ. ಆತನ ಮನೆಗೂ ನುಗ್ಗಿದ ಆರೋಪಿ ನಿಶ್ಚಲ್‌ಗೌಡ, ಪ್ರದೀಪ್ ಕುಟುಂಬದವರಿಗೆ ಬೆದರಿಕೆ ಹಾಕಿದ್ದ. ಈ ಬಗ್ಗೆ ಪ್ರದೀಪ್‌ಗೌಡ ಪ್ರಶ್ನೆ ಮಾಡಿದಾಗ ಸರ್ವೀಸ್ ಸೆಂಟರ್‌ಗೆ ನುಗ್ಗಿದ ನಿಶ್ಚಲ್‌ಗೌಡ ಲಾಂಗ್‌ನಿಂದ ಪ್ರದೀಪ್‌ಗೌಡನಿಗೆ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ನಿಶ್ಚಲ್‌ಗೌಡನನ್ನು ವಶಕ್ಕೆ ತೆಗೆದುಕೊಂಡು ಪ್ರದೀಪ್‌ನನ್ನು ರಕ್ಷಣೆ ಮಾಡಿದ್ದಾರೆ. ಪೊಲೀಸರು ದೀಪಕ್‌ಗೌಡ ನೀಡಿದ ದೂರಿನನ್ವಯ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ