ಹೆಸ್ಕಾಂ ಅಧಿಕಾರಿಗಳು, ಸರ್ಕಾರದ ವಿರುದ್ಧ ಘೋಷಣೆ
ಗದಗ: ಹಗಲು ವೇಳೆಯಲ್ಲಿ ೭ ಗಂಟೆಗಳ ಕಾಲ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೊರೈಕೆ ಮಾಡಬೇಕೆಂದು ತಾಲೂಕಿನ ಲಕ್ಕುಂಡಿ ರೈತರು ಹೆಸ್ಕಾಂ ಕಚೇರಿಗೆ ಗುರುವಾರ ಬೀಗ ಹಾಕಿ ಪ್ರತಿಭಟಿಸಿದರು.ಕಳೆದ ಒಂದು ವಾರದಿಂದ ಅಸಮರ್ಪಕವಾಗಿ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೊರೈಕೆಯಾಗುತ್ತಿರುವುದಕ್ಕೆ ಆಕ್ರೋಶಗೊಂಡ ರೈತರು ಅಧಿಕಾರಿಗಳಿಗೆ ಮೌಖಿಕವಾಗಿ ಸಮರ್ಪಕವಾಗಿ ವಿದ್ಯುತ್ ಒದಗಿಸಬೇಕೆಂದು ತಿಳಿಸುತ್ತಾ ಬಂದರೂ ಸಹ ಕಾಳಜಿ ವಹಿಸದ್ದರಿಂದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಬೀಗ ಹಾಕಲಾಯಿತು.
ಹೆಸ್ಕಾಂ ಅಧಿಕಾರಿಗಳು ಹಾಗೂ ಸರಕಾರದ ವಿರುದ್ಧ ರೈತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಈಗ ನಿಗದಿ ಮಾಡಿದ ೫ ತಾಸು ಸಹ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ. ತಮಗೆ ತಿಳಿದ ಸಮಯದಲ್ಲಿ ಪೊರೈಕೆ ಮಾಡುತ್ತಿರುವುದರಿಂದ ರೈತರು ತೀವ್ರ ತೊಂದರೆ ಅನುಭವಿಸುವುದನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಪ್ರಕಾಶ ಅರಹುಣಸಿ, ದತ್ತಣ್ಣ ಜೋಶಿ, ರಮೇಶ ಹಳ್ಳಿ, ವೆಂಕಟೇಶ ದೊಂಗಡೆ ಮಾತನಾಡಿ, ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಗ್ರಾಮದ ರೈತರು ನೀರಾವರಿ ಕೃಷಿ ಮೇಲೆ ಅವಲಂಬನೆಯಾಗಿದ್ದಾರೆ. ಇನ್ನು ಪ್ರಮುಖವಾದ ವಾಣಿಜ್ಯ ಸೇವೆಯಾದ ಹೂವು ಬೆಳೆಯೇ ಮೂಲ ಆಧಾರವಾಗಿದ್ದು ದಸರಾ, ದೀಪಾವಳಿ ಹಬ್ಬದಲ್ಲಿಯೇ ಹೂವು ಮಾರಾಟ ಮಾಡಿ ಆದಾಯ ಮಾಡುವಂತಹ ಸಂದರ್ಭದಲ್ಲಿ ನೀರಾವರಿ ಪಂಪಸೆಟ್‌ಗಳಿಗೆ ವಿದ್ಯುತ್ ಕಡಿತಗೊಳಿಸಿದರೆ ರೈತರು ಸಂಪೂರ್ಣ ನಷ್ಟ ಅನುಭವಿಸಿ ಸಾಲದಲ್ಲಿ ಬೀಳುತ್ತಾರೆ. ಈಗಾಗಲೇ ತೇವಾಂಶವಿಲ್ಲದೇ ಬೆಳೆಗಳು ಒಣಗುತ್ತಿವೆ. ಆದ್ದರಿಂದ ಮೊದಲಿದ್ದ ಹಾಗೆ ಹಗಲು ಹೊತ್ತಿನಲ್ಲಿ ೭ ಗಂಟೆಗಳ ಕಾಲ ವಿದ್ಯುತ್ ಒದಗಿಸಬೇಕು ಎಂದು ಸರಕಾರಕ್ಕೆ ಒತ್ತಾಹಿಸಿದರು.
ರೈತರಾದ ಸುರೇಶ ಕವಲೂರು, ಪರಶುರಾಮ ಕರಿಯಲ್ಲಪ್ಪನವರ, ಮಂಜುನಾಥ ಕವಲೂರು, ಸಿದ್ದು ಮುಳಗುಂದ, ಗವಿಸಿದ್ದಪ್ಪ ಯಲಿಶಿರುಂಜ, ಸಂತೋಷ ಸಂದಿಗೋಡ, ಬಾಳನಗೌಡ ಪಾಟೀಲ, ಕೊಟ್ರಗೌಡ ರೋಣದ, ಬಸವರಾಜ ಮುಳ್ಳಾಳ, ಮಂಜುನಾಥ ಕಿಲ್ಲೇದ, ಕಲ್ಲಯ್ಯ ಕುಲಕರ್ಣಿ, ಈರಪ್ಪ ಬಣವಿ, ಬಸವರಾಜ ಬಣವಿ, ಅಶೋಕ ಮಂದಾಲಿ ಸೇರಿದಂತೆ ಪಾಪನಾಶಿ, ಸಂಭಾಪೂರ ರೈತರು ಇದ್ದರು.ಭರವಸೆ ಬಳಿಕ ಪ್ರತಿಭಟನೆ ಹಿಂದಕ್ಕೆ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹೆಸ್ಕಾ ಸಹಾಯಕ ಅಭಿಯಂತರ ನಾಗರಾಜ ಕುರಿ ಮಾತನಾಡಿ, ವಿಂಡ್ ಪವರ್ ಸೇರಿದಂತೆ ಉಳಿದ ಎಲ್ಲ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಹವಮಾನ ವೈಪರೀತ್ಯದಿಂದಾಗಿ ಉತ್ಪಾದನೆಯಲ್ಲಿ ಕುಂಠಿತಗೊಂಡಿದೆ. ಆದ್ದರಿಂದ ೨ ತಾಸು ಕಡಿಮೆ ಮಾಡಿ ೫ ತಾಸು ವಿದ್ಯುತ್ ಪೊರೈಕೆ ಮಾಡಲಾಗುತ್ತಿದೆ. ಆದ್ದರಿಂದ ರೈತರು ಒಂದು ವಾರ ಸಹಕಾರ ನೀಡಬೇಕೆಂದು ವಿನಂತಿಸಿಕೊಂಡರು. ಆದರೆ ಇದಕ್ಕೆ ಒಪ್ಪದ ರೈತರು ಈ ವಾರದಲ್ಲಿ ಸಮರ್ಪಕ ವಿದ್ಯುತ್ ನೀಡದಿದ್ದರೆ ಬೆಳೆ ಒಣಗಿ ಹೋಗುತ್ತವೆ. ನಮಗೆ ಕ್ರಿಮಿನಾಶಕ ಕೊಡಿ ಸಾಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಅಧಿಕಾರಿಗಳು ತಮ್ಮ ಮೇಲಧಿಕಾರಿಗಳಿಗೆ ಪೋನ್ ಮಾಡಿ ಚರ್ಚಿಸಿ ೭ ಗಂಟೆಗಳ ಕಾಲ ವಿದ್ಯುತ್ ಪೊರೈಕೆಯ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು. ಈ ವೇಳೆ ಲಕ್ಕುಂಡಿ ೩೩ ಕೆವಿ ಉತ್ಪಾದನಾ ಕೇಂದ್ರದ ಸಹಾಯಕ ಅಭಿಯಂತರ ಅಂಬುಜಾ, ಸಹಾಯಕ ಅಭಿಯಂತರ ಎಸ್.ಎಚ್. ಹುಯಿಲಗೋಳ, ಗ್ರಾಪಂ ಅಧ್ಯಕ್ಷ ಕೆ.ಎಸ್.ಪೂಜಾರ ಇದ್ದರು.