- ನಗರ, ಜಿಲ್ಲಾದ್ಯಂತ ಪರಶಿವನಿಗೆ ವಿವಿಧ ಅಭಿಷೇಕ, ವಿಶೇಷ ಪೂಜೆ । ವಿಷಕಂಠನ ನಾಮಸ್ಮರಣೆ ಮಾಡುತ್ತ ಜಾಗರಣೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ನಗರ, ಜಿಲ್ಲಾದ್ಯಂತ ಶಿವ ಮಂದಿರಗಳಲ್ಲಿ ಶ್ರೀ ಈಶ್ವರ ದೇವರಿಗೆ ಜಲಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಶ್ರೀ ಗಂಧದ ಪೂಜೆ, ವಿಶೇಷ ಅಲಂಕಾರ, ಬಿಲ್ವಪತ್ರೆ ಅಲಂಕಾರ ಸೇರಿದಂತೆ ಶ್ರದ್ಧಾ-ಭಕ್ತಿಯಿಂದ ಪೂಜಿಸಿ ಭಕ್ತರ ಶಿವನ ಸ್ಮರಣೆಯಲ್ಲಿ ಮಿಂದೆದ್ದರು.ನಸುಕಿನಿಂದಲೇ ನಗರ, ಜಿಲ್ಲಾದ್ಯಂತ ಶಿವ ದೇಗುಲಗಳಲ್ಲಿ ಶಿವನಾಮ ಸ್ಮರಣೆ, ಶ್ಲೋಕ, ಮಂತ್ರಗಳೊಂದಿಗೆ ಅರ್ಚಕರು, ಮಠಾಧೀಶರು, ಪುರೋಹಿತರರ ಸಾರಥ್ಯದಲ್ಲಿ ಧಾರ್ಮಿಕ ಕಾರ್ಯಗಳು ಆರಂಭವಾದವು. ಶಿವನ ದರ್ಶನ ಪಡೆಯಲು ದೇವಸ್ಥಾನಗಳಿಗೆ ಮಕ್ಕಳು, ಮಹಿಳೆಯರು, ಪುರುಷರು, ಹಿರಿಯರು, ವಯೋವೃದ್ಧರು ತೆರಳಿ, ಸರದಿಯಲ್ಲಿ ನಿಂತು, ಪರಶಿವನನ್ನು ಕಣ್ತುಂಬಿಕೊಂಡು, ಧನ್ಯರಾದರು.
ದೇಗುಲಗಳಲ್ಲಿ ವಿಶೇಷ ಪೂಜೆ:
ವಿದ್ಯಾನಗರದ ಶ್ರೀ ಈಶ್ವರ ಪಾರ್ವತಿ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ, ಎಸ್.ನಿಜಲಿಂಗಪ್ಪ ಬಡಾವಣೆಯ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ, ಶ್ರೀ ಶಂಕರಾಚಾರ್ಯರ ದೇವಸ್ಥಾನದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ಇತರೆ ಧಾರ್ಮಿಕ ಕಾರ್ಯ ನಡೆದವು. ಕೆಟಿಜೆ ನಗರ 2ನೇ ಮೇನ್‌ನ 14ನೇ ಕ್ರಾಸ್‌ನ ಶ್ರೀ ನೀಲಕಂಠೇಶ್ವರ ದೇವಸ್ಥಾನ, 10ನೇ ಕ್ರಾಸ್‌ನ ಶ್ರೀ ಮಲ್ಲಿಕಾರ್ಜುನ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು.
ಬಹುತೇಕ ಎಲ್ಲ ಮಂದಿರಗಳಲ್ಲೂ ಶಿವನಾಮ ಸ್ಮರಣೆ, ಈಶ್ವರನ ಗುಣಗಾನ ಕೇಳಿ ಬರುತ್ತಿತ್ತು. ಘಂಟೆಗಳ ನಾದ, ಶಂಖನಾದ, ಜಾಗಟೆ, ಓಂ ನಮಃ ಶಿವಾಯ, ನಮಃ ಶಿವಾಯ, ಶಿವನೊಲಿದರೆ ಭಯವಿಲ್ಲ, ಶ್ರೀಕಂಠ ವಿಷಕಂಠ ಹೀಗೆ ಅಸಂಖ್ಯ ಹಾಡುಗಳ ಮೂಲಕ ಶಿವನ ಸ್ಮರಣೆಯಲ್ಲಿ ಭಕ್ತರು ತೊಡಗಿದ್ದರು. ಶಿವರಾತ್ರಿ ಅಂಗವಾಗಿ ಸಂಜೆ, ರಾತ್ರಿ, ತಡರಾತ್ರಿ, ನಸುಕಿನವರೆಗೂ ಭಕ್ತಾದಿಗಳು ಶಿವನ ದರ್ಶನಕ್ಕೆ ದೇಗುಲಗಳಿಗೆ ಕುಟುಂಬ ಸಮೇತರಾಗಿ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಿರಿಯರು ಶಿವನ ಸ್ಮರಣೆ, ಪೂಜೆಯಲ್ಲಿ ತಲ್ಲೀನರಾದರೆ, ಮಕ್ಕಳು ಪೂಜೆ ನಂತರ -ಲಘು ಆಹಾರ, ಹಣ್ಣು ಹಂಪಲು, ಖರ್ಜೂರ, ದ್ರಾಕ್ಷಿ, ಸೇಬು ಹಣ್ಣುಗಳನ್ನು ತಿನ್ನುತ್ತಾ, ಮನೆಯಂಗಳ, ಮನೆಯ ಬಳಿ ಆಟವಾಡಿ ನಿದ್ದೆ ಕೈ ಬೀಸಿ ಕರೆಯುವವರೆಗೂ ತಮ್ಮದೇ ರೀತಿಯಲ್ಲಿ ಶಿವರಾತ್ರಿ ಜಾಗರಣೆ ಆಚರಿಸಿದರು. ಪಾರ್ಕ್, ವಿವಿಧ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ಜನರು ತಮ್ಮ ಮನೆಯಲ್ಲಿ ಪೂಜೆ ಮುಗಿಸಿ, ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾದರು.
ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಶ್ರೀ ನಗರೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಜಲಾಭಿಷೇಕ ನಡೆಯಿತು. ಇಡೀ ರಾತ್ರಿ ಅನೇಕ ದೇವಸ್ಥಾನಗಳಲ್ಲಿ ಜಾಗರಣೆಯ ಭಾಗವಾಗಿ ಶಿವ ಪುರಾಣ, ಪ್ರವಚನ, ಶಿವ ನಾಮ ಸ್ಮರಣೆ, ಪಂಚಾಕ್ಷರಿ ಮಂತ್ರಿ, ಷಡಕ್ಷರಿ ಮಂತ್ರ ಪಠಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಶ್ರದ್ಧಾಭಕ್ತಿಯಿಂದ ನಡೆದವು. ಅಲ್ಲಲ್ಲಿ ಪ್ರಸಾದ ವ್ಯವಸ್ಥೆ, ಪ್ರಸಾದ ವಿತರಣೆ ಮಾಡಲಾಯಿತು.
(-ಪೋಟೋಗಳು ಬರಲಿವೆ)