ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ದೇವಾಲಯ ಹಾಗು ಈಶ್ವರನ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ, ಪೂಜಾ ಕೈಂಕರ್ಯದೊಂದಿಗೆ ಬುಧವಾರ ಶ್ರದ್ಧಾ ಭಕ್ತಿಯಿಂದ ಭಕ್ತರು ಶಿವನ ಆರಾಧನೆ ಮಾಡಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ದೇವಾಲಯ ಹಾಗು ಈಶ್ವರನ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ, ಪೂಜಾ ಕೈಂಕರ್ಯದೊಂದಿಗೆ ಬುಧವಾರ ಶ್ರದ್ಧಾ ಭಕ್ತಿಯಿಂದ ಭಕ್ತರು ಶಿವನ ಆರಾಧನೆ ಮಾಡಿದರು. ಪಟ್ಟಣದ ಭವಾನಿ ಗಂಗಾಧರೇಶ್ವರ, ಮೂಲೇಶಂಕರೇಶ್ವರ, ಹೊರಪೇಟೆಯ ಸಂಗಮೇಶ್ವರಸ್ವಾಮಿ, ಅಮ್ಮಸಂದ್ರದ ಬಸವೇಶ್ವರಸ್ವಾಮಿ, ದಂಡಿನಶಿವರದ ಹೊನ್ನಾದೇವಿ, ತಾವರೆಕೆರೆಯ ಅಘೋರೇಶ್ವರ, ಮಾದಾಪಟ್ಟಣದ ಬಸವಲಿಂಗೇಶ್ವರ, ರಾಮಡಿಹಳ್ಳಿಯ ಈಶ್ವರ, ಸೂಳೆಕೆರೆಯ ವೀರಭದ್ರೇಶ್ವರ, ಮುನಿಯೂರಿನ ಹೊನ್ನಾದೇವಿ, ಈಶ್ವರ ದೇವಾಲಯ, ಅಮ್ಮಸಂದ್ರದ ಶಿವ ದೇವಾಲಯ ಸೇರಿದಂತೆ ಹಲವು ದೇವಾಲಯಗಳನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬಿಸಿಲಿನ ಬೇಗೆಯ ನಡುವೆಯೂ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ದೇವಸ್ಥಾನಕ್ಕೆ ತೆರಳಿದರು. ಕೆಲ ದೇವಾಲಯಗಳ ಮುಂದೆ ಶಾಮಿಯಾನ ಮತ್ತು ಹಸಿರು ಚಪ್ಪರ ಹಾಕಿಸಲಾಗಿತ್ತು. ದೇವಾಲಯಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.ಬುಧವಾರ ಮುಂಜಾನೆ ಶಿವನ ವಿಗ್ರಹ ಮತ್ತು ನಂದಿಗೆ ಸ್ವಾಮಿಗೆ ರುದ್ರಾಭಿಷೇಕ, ಎಳನೀರು, ಹಾಲು ಜೇನುತುಪ್ಪಗಳಿಂದ ಅಭಿಷೇಕ ಮಾಡಿ ಸಹಸ್ರ ನಾಮಾವಳಿಗಳೊಂದಿಗೆ ಮಂಗಳಾರತಿ, ಪ್ರಸಾದ ವಿನಿಯೋಗ ಸೇರಿದಂತೆ ಹಲವು ಕಾರ್ಯಕ್ರಮಗಳು ಸಂಪ್ರದಾಯದಂತೆ ಜರುಗಿದವು.ವಿವಿಧ ಬಗೆಯ ಹೂವುಗಳಿಂದ ದೇವರನ್ನು ಅಲಂಕಾರಗೊಳಿಸಲಾಗಿತ್ತು. ಶಿವನ ಭಕ್ತರು ಹೊಸ ವಸ್ತ್ರ, ವಿಭೂತಿ, ಮುತ್ತುಗದ ಹೂವು, ಬಿಲ್ವ ಪತ್ರೆಯಿಂದ ಪೂಜೆ ಸಲ್ಲಿಸಿದರು.ಮಲ್ಲಾಘಟ್ಟದ ಗಂಗಾಧರೇಶ್ವರ, ಪುರದ ಶಂಭುಲಿಂಗೇಶ್ವರ, ಮುನಿಯೂರು ಶಿವನ ದೇವಸ್ಥಾನದಲ್ಲಿ ವಿಶೇಷವಾಗಿ ಅಲಂಕಾರಗೊಂಡ ಶಿವನ ಮೂರ್ತಿ ಭಕ್ತರ ಗಮನ ಸೆಳೆಯಿತು. . ಅನೇಕ ದೇವಾಲಯಗಳಲ್ಲಿ ಸಹಸ್ರ ನಾಮಾರ್ಚನೆ, ಭಕ್ತಿಗೀತೆ ಕಾರ್ಯಕ್ರಮ ಜರುಗಿದವು. ಶಿವನ ದೇವಾಲಯಗಳಲ್ಲಿ ಸಂಜೆಯಿಂದ ಭಜನೆ, ಸಂಗೀತ ಸುಧೆಯಂತಹ ಕಾರ್ಯಕ್ರಮಗಳ ಜೊತೆಗೆ ಭಕ್ತರು ಉಪವಾಸ ಆಚರಿಸಿದರು. ಶಿವನ ನಾಮವನ್ನು ಸ್ಮರಣೆ ಮಾಡುತ್ತ ಭಕ್ತರು ಶಿವರಾತ್ರಿ ಜಾಗರಣೆಯನ್ನು ಭಕ್ತಿಯಿಂದ ಆಚರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.