ಎಲ್ಲೆಲ್ಲೂ ಶಿವನಾಮ ಸ್ಮರಣೆ । ದೇವಾಲಯದಲ್ಲಿ ಮೊಳಗಿದ ಓಂ ನಮಃ ಶಿವಾಯ ಮಂತ್ರ । ವಿವಿಧ ಧಾರ್ಮಿಕ ಸೇವೆ
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರುಪಟ್ಟಣ ಹಾಗೂ ಹೋಬಳಿಯಾದ್ಯಂತ ಬುಧವಾರ ಮಹಾಶಿವರಾತ್ರಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು. ಎಲ್ಲೆಲ್ಲೂ ಶಿವನಾಮ ಸ್ಮರಣೆ ನಡೆದಿದ್ದು, ದೇವಾಲಯಗಳಲ್ಲಿ ‘ಓಂ ನಮಃ ಶಿವಾಯ’ ಮಂತ್ರಘೋಷಗಳು ಮೊಳಗಿದವು.
ಶಿವರಾತ್ರಿ ಪ್ರಯುಕ್ತ ಸುತ್ತಮುತ್ತಲಿನ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಏಕದಶವಾರ ರುದ್ರಾಭಿಷೇಕ, ಅರ್ಚನೆ, ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸ್ಥಳೀಯ ಮಾರ್ಕಾಂಡೇಶ್ವರ ದೇವಸ್ಥಾನ, ರಂಭಾಪುರಿ ಪೀಠದ ವೀರಭದ್ರೇಶ್ವರ, ಸೋಮೇಶ್ವರ ದೇವಾಲಯ, ಇಟ್ಟಿಗೆ ಸೀಗೋಡು ಬಿಜಿಎಸ್ ಕ್ಯಾಂಪಸ್‌ನ ಈಶ್ವರ ದೇವಸ್ಥಾನ, ಗಡಿಗೇಶ್ವರ ಭವಾನಿ ಶಂಕರೇಶ್ವರ ದೇವಾಲಯ, ಮಾಗುಂಡಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ, ಆಯೂರು ಈಶ್ವರ ದೇವಸ್ಥಾನ, ಹುಣಸೇಕೊಪ್ಪ ಈಶ್ವರ ದೇವಸ್ಥಾನ, ಮುದುಗುಣಿ ಶಿವಗಂಗಾ ದೇವಸ್ಥಾನ, ಬೈರೇಗುಡ್ಡದ ಕಾಲಬೈರವೇಶ್ವರ ದೇವಸ್ಥಾನ ಹಾಗೂ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಪುರಾಣ ಪ್ರಸಿದ್ಧ ಖಾಂಡ್ಯ ತ್ರಯಂಬಕ ಮಾರ್ಕಾಂಡೇಶ್ವರ ದೇವಸ್ಥಾನಗಳಲ್ಲಿ ಶಿವನಿಗೆ ವಿಶೇಷ ರುದ್ರಾಭಿಷೇಕಗಳನ್ನು ನೆರವೇರಿಸಿ ಅಲಂಕಾರ, ಪೂಜೆ, ಪುನಸ್ಕಾರಗಳನ್ನು ಮಾಡಲಾಯಿತು.ಎಲ್ಲೆಡೆ ಶಿವಾಲಯಗಳ ಮುಂಭಾಗ ಅಕ್ಕಿ ಹಾಗೂ ಭತ್ತವನ್ನಿಟ್ಟು ಅದರ ಮೇಲ್ಭಾಗದಲ್ಲಿ ಕುಂಬಳಕಾಯಿ ಕಡಿದು ಎಳ್ಳೆಣ್ಣೆ, ಎಳ್ಳು ಹಾಕಿ ದೀಪ ಹಚ್ಚಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ದೋಷ ನಿವಾರಣೆಗೆ ಹರಕೆ, ಪ್ರಾರ್ಥನೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪಟ್ಟಣದ ಮಾರ್ಕಾಂಡೇಶ್ವರ ದೇವಾಲಯದಲ್ಲಿ ಮುಂಜಾನೆ ನಾಲ್ಕು ಗಂಟೆಯಿಂದಲೇ ನಿರಂತರವಾಗಿ ಅಭಿಷೇಕ ನಡೆಸಲಾಗಿತ್ತು, ಸಂಜೆ ಪ್ರದೋಶ ಕಾಲದಲ್ಲಿ ಪ್ರದಾನ ಅರ್ಚಕ ಕುಂದೂರು ಪ್ರಕಾಶ್‌ಭಟ್, ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕವನ್ನು 11 ಜನ ಪುರೋಹಿತರ ನೇತೃತ್ವದಲ್ಲಿ ನೆರವೇರಿಸಲಾಯಿತು.ಹಬ್ಬದ ಪ್ರಯುಕ್ತ ದೇವಾಲಯಗಳಲ್ಲಿ ಭಕ್ತರ ಮಹಾಪೂರವೇ ಹರಿದಿತ್ತು. ಪಟ್ಟಣದ ಮಾರ್ಕಾಂಡೇಶ್ವರ ಹಾಗೂ ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕಾಗಿ ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯಕಂಡುಬಂದಿತು. ಹಲವೆಡೆ ರಾತ್ರಿ ಶಿವರಾತ್ರಿ ಜಾಗರಣೆ ಆಚರಣೆಗೆ ಸಿದ್ಧತೆಗಳು ಭರದಿಂದ ನಡೆದವು. ಜಾಗರಣೆ ಅಂಗವಾಗಿ ಹಲವೆಡೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು.