ಕಡೂರಿನಾದ್ಯಂತ ಸಂಭ್ರಮ,ಸಡಗರದ ಮಹಾಶಿವರಾತ್ರಿ

KannadaprabhaNewsNetwork | Published : Feb 28, 2025 12:48 AM

ಸಾರಾಂಶ

ಕಡೂರು, ತಾಲೂಕಿನಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದೊಂದಿಗೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಶಿವನ ದೇವಾಲಯಗಳಲ್ಲಿ ಶಿವನ ನಾಮಸ್ಮರಣೆಗಳೊಂದಿಗೆ ಪೂಜಾ ಕಾರ್ಯಕ್ರಮ ಜರುಗಿದವು.

ಪಟ್ಟಣದ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಶತ ರುದ್ರಾಭಿಷೇಕ

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದೊಂದಿಗೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಶಿವನ ದೇವಾಲಯಗಳಲ್ಲಿ ಶಿವನ ನಾಮಸ್ಮರಣೆಗಳೊಂದಿಗೆ ಪೂಜಾ ಕಾರ್ಯಕ್ರಮ ಜರುಗಿದವು.

ಪಟ್ಟಣದ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ 108 ಏಕ ಶತ ರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ರುದ್ರ ಹೋಮ, ಪೂರ್ಣಾಹುತಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ನಡೆದವು. ಟ್ರಸ್ಟ್ ನಿಂದ ದೇವಾಲಯಕ್ಕೆ ಬಂದಂತಹ ಭಕ್ತರಿಗೆ ಪ್ರತಿ ವರ್ಷದಂತೆ ಶಿವರಾತ್ರಿ ಅಂಗವಾಗಿ ಶಿವನ ಲಿಂಗಕ್ಕೆ ಕ್ಷೀರಾಭೀಷೇಕ ಮಾಡಲು ವಿಶೇಷ ವ್ಯವಸ್ಥೆ ಕಲ್ಪಿಸಿ ಕೊಟ್ಟಿದ್ದರು. ಸಂಜೆ ಭಜನಾ ಮಂಡಳಿಯಿಂದ ಮನರಂಜನಾ ಕಾರ್ಯಕ್ರಮ ನಡೆದವು. ಬೆಳಗಿನಿಂದಲೇ ಶಿವನ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಾಲಯದ ಮುಂಭಾಗದ ಕೈಲಾಸ ಶಿವನ ಪ್ರತಿಮೆಗೆ ವಿದ್ಯುತ್ ದೀಪಾಲಂಕಾರ ಮಾಡಿದ್ದು ಭಕ್ತರ ಕಣ್ಮನ ಸೆಳೆಯಿತು. ದೇವಾಲಯ ಸಮಿತಿ ಅಧ್ಯಕ್ಷ ಶಂಕರ್ ಪವಾರ್, ಪದಾಧಿಕಾರಿ ಕೆ.ಎಚ್. ಪ್ರಸನ್ನ, ನಲ್ಲೂರಿ ಸುರೇಶ್,ಬೆಂಕಿ ಲೋಕೇಶ್, ಬೆಂಕಿ ರಂಗನಾಥ್, ಶಂಕರ್, ವಸಂತ್, ಮನು ಸೇರಿದಂತೆ ಮತ್ತಿತರರು ಇದ್ದರು. ಪಟ್ಟಣದ ಶ್ರೀ ಅರೇಕಲ್‍ ಭುವನೇಶ್ವರ ಸ್ವಾಮಿ ದೇವಾಲಯ, ಕೋಟೆ ಶ್ರೀ ಗಂಗಾಧರೇಶ್ವರ, ಶ್ರೀಸಾಯಿಬಾಬಾ ದೇವಾಲಯ, ತಾಲ್ಲೂಕಿನ ಸಿಂಗಟಗೆರೆ ಶ್ರೀ ಕಲ್ಲೇಶ್ವರಸ್ವಾಮಿ, ಯಗಟಿಪುರದ ಶ್ರೀಮಲ್ಲಿಕಾರ್ಜುನಸ್ವಾಮಿ, ಹೇಮಗಿರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಹಿರೇನಲ್ಲೂರಿನ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಸಖರಾಯಪಟ್ಟಣದ ಶ್ರೀ ಕಲ್ಮುರಡೇಶ್ವರ, ಕೇದಿಗೆರೆ ಶ್ರೀ ಎರೆ ಬೀರ ಲಿಂಗೇಶ್ವರ ಸ್ವಾಮಿ ಮೂಲ ದೇವಸ್ಥಾನಗಳಲ್ಲಿ ವಿಶೇಷ ಭಜನೆ, ರುದ್ರಾಭಿಷೇಕ ಬಿಲ್ವಾರ್ಚನೆ ಮತ್ತು ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಜರುಗಿದವು. ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಕುಂಭಮೇಳದಿಂದ ತಂದ ಪವಿತ್ರ ಗಂಗಾಜಲವನ್ನು ತಾಲೂಕಿನ ಶಿವನ ದೇವಾಲಯಗಳಿಗೆ ಹಾಗೂ ಭಕ್ತರಿಗೆ ವಿತರಿಸಿದರು. 27ಕೆಕೆಡಿಯು3.ಕಡೂರು ಪಟ್ಟಣದಲ್ಲಿ ಶ್ರೀ ಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನದಲ್ಲಿ ಅಭಿಷೇಕ ಮಾಡಲು ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು.

Share this article